ಕೇಟರಿಂಗ್ ಉದ್ಯಮಿಯ ಸಿನಿಮಾ ಸಹಾಸಗಳು
ಅವನೊಬ್ಬನೇ ಚಿತ್ರ ರೆಡಿಯಾಗಿದೆ. ಇದು ಹೋಟೆಲ್ ಉದ್ಯಮಿ ಚಂದ್ರಶೇಖರ್ ನಿರ್ಮಾಣದಲ್ಲಿ ವಿವೇಕ್ ಚಕಾರಿ ನಿರ್ದೇಶಿಸಿರುವ ಚಿತ್ರ. ನಿರ್ಮಾಪಕ ಚಂದ್ರಶೇಖರ್ ಅವರೇ ಚಿತ್ರದ ನಾಯಕ ನಟ ಕೂಡ.
ಅಕ್ಷರಾ ಈ ಚಿತ್ರದ ನಾಯಕಿ. ಮೈಸೂರು ರಮಾನಂದ, ಶಿವಕುಮಾರ್ ಆರಾಧ್ಯ, ಜ್ಯೋತಿ ಮರೂರು, ಕುಷನ್ ಗೌಡ, ವಿಜಯಲಕ್ಷ್ಮಿ ಪಾತ್ರಧಾರಿಗಳು. ಚಿತ್ರತಂಡ ಇದೀಗ ಆಡಿಯೋ ಸೀಡಿ ಬಿಡುಗಡೆ ಮಾಡಿದೆ. ‘ಅವನೊಬ್ಬನೇ..’ಎನ್ನುವ ಈ ಚಿತ್ರದ ಟೈಟಲ್‌ಗೆ ‘ಮರೆಯಾದರು ನೀನು, ಮರೆಯಲಾರೆ ನಾನು’ ಎನ್ನುವ ಟ್ಯಾಗ್ ಲೈನ್ ಮೂಲಕ ದೇವನೊಬ್ಬನೇ ಎನ್ನುವುದನ್ನು ಹೇಳಹೊರಟಿದ್ದಾರಂತೆ ನಿರ್ದೇಶಕರು. ಅವರ ಪ್ರಕಾರ ಈ ಕತೆ ಹುಟ್ಟಿದ್ದೇ ವಿಶೇಷ. ‘ಅದು ರಾಜ್‌ಕುಮಾರ್ ಸ್ಮಾರಕದಲ್ಲಿ ಅವರ ಹುಟ್ಟು ಹಬ್ಬದ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ. ಅಲ್ಲಿಗೆ ದೂರದ ಊರಿನಿಂದ ಬಂದಿದ್ದ ಅಣ್ಣಾವ್ರ ಅಭಿಮಾನಿಯೊಬ್ಬ ಒಂದು ಕತೆ ಹೇಳಿದ. ಆ ಕತೆಯೇ ಚಿತ್ರಕ್ಕೆ ಸ್ಫೂರ್ತಿ ಆಯಿತು. ಅಮಾಯಕ ಹುಡುಗನೊಬ್ಬ ಗೊತ್ತಿಲ್ಲದೇ ಒಂದು ಸಂಚಿನ ಸುಳಿಯಲ್ಲಿ ಸಿಲುಕುತ್ತಾನೆ. ಆ ಮೂಲಕ ಆತ ಹೇಗೆಲ್ಲ ಸಂಕಷ್ಟ ಎದುರಿಸಿದ, ಅಲ್ಲಿಂದ ಹೇಗೆ ಹೊರಬಂದ ಎನ್ನುವುದು ಆ ಕತೆಯ ಒಂದು ಎಳೆ. ಅದನ್ನೇ ಚಿತ್ರಕತೆ ರೂಪಕ್ಕೆ ತಂದು ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ವಿವೇಕ್ ಚಕಾರಿ.