ಸುಮಾರು 20 ವರ್ಷಗಳ ಹಿಂದೆ ಸಲ್ಮಾನ್ ಖಾನ್ ಮತ್ತು ಸೋಹೈಲ್ ಖಾನ್ ಸೇರಿ 'ರಾಮಾಯಣ' ಸಿನಿಮಾ ಮಾಡಲು ಯೋಜಿಸಿದ್ದರು. ಸಲ್ಮಾನ್ ಶ್ರೀರಾಮನಾಗಿ, ಸೋಹೈಲ್ ಲಕ್ಷ್ಮಣನಾಗಿ ನಟಿಸಬೇಕಿತ್ತು. ಆದರೆ ಪತ್ರಿಕೆಗಳಲ್ಲಿ ಪ್ರಕಟವಾದ..
ಬಾಲಿವುಡ್ನಲ್ಲಿ ಈಗ 'ರಾಮಾಯಣ' ಸಿನಿಮಾದದ್ದೇ ದೊಡ್ಡ ಸದ್ದು. ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿ ಸುದ್ದಿಯಲ್ಲಿದೆ. ಚಿತ್ರದ ಅದ್ಧೂರಿ ಮೇಕಿಂಗ್, ದೃಶ್ಯ ವೈಭವ ಮತ್ತು ಕಲಾವಿದರ ಅಭಿನಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ನಿಮಗೆ ಗೊತ್ತಾ?
ಸುಮಾರು 20 ವರ್ಷಗಳ ಹಿಂದೆಯೇ ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಕೂಡ 'ರಾಮಾಯಣ' ಸಿನಿಮಾ ಮಾಡುವ ಕನಸು ಕಂಡಿದ್ದರು. ಅಷ್ಟೇ ಅಲ್ಲ, ಆ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಯೋಜನೆಯೂ ಇತ್ತಂತೆ! ಆದರೆ ಆ ಸಿನಿಮಾ ಮಾತ್ರ ಸೆಟ್ಟೇರುವ ಮೊದಲೇ ನಿಂತುಹೋಯಿತು. ಇದಕ್ಕೆ ಕಾರಣವೇನು ಎಂಬುದನ್ನು ಸ್ವತಃ ಸಲ್ಮಾನ್ ಖಾನ್ ಈಗ ಬಹಿರಂಗಪಡಿಸಿದ್ದಾರೆ.
ರಾಮ-ಲಕ್ಷ್ಮಣರಾಗಬೇಕಿದ್ದ ಸಲ್ಮಾನ್ ಮತ್ತು ಸೋಹೈಲ್!
ಸದ್ಯ ತಮ್ಮ ಮುಂಬರುವ 'ಮಾತೃಭೂಮಿ' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸಲ್ಮಾನ್ ಖಾನ್, ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವಾಗ ಹಳೆಯ 'ರಾಮಾಯಣ' ಸಿನಿಮಾ ಯೋಜನೆಯನ್ನು ನೆನಪಿಸಿಕೊಂಡಿದ್ದಾರೆ. ಸುಮಾರು ಎರಡು ದಶಕಗಳ ಹಿಂದೆ ತಾವು ಮತ್ತು ತಮ್ಮ ಸಹೋದರ ಸೋಹೈಲ್ ಖಾನ್ ಸೇರಿ 'ರಾಮಾಯಣ' ಸಿನಿಮಾ ಮಾಡುವುದಾಗಿ ಘೋಷಿಸಲು ಸಿದ್ಧತೆ ನಡೆಸಿದ್ದೆವು ಎಂದು ಹೇಳಿದ್ದಾರೆ.
ಆ ಸಂದರ್ಭದಲ್ಲಿ ಸಲ್ಮಾನ್ ಖಾನ್ ಶ್ರೀರಾಮನ ಪಾತ್ರದಲ್ಲೂ, ಸೋಹೈಲ್ ಖಾನ್ ಲಕ್ಷ್ಮಣನ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ಸಿನಿಮಾ ಘೋಷಣೆಯಾದ ಮರುದಿನವೇ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ವ್ಯಂಗ್ಯಚಿತ್ರಗಳು ಮತ್ತು ಸುದ್ದಿಗಳು ಅವರ ಯೋಜನೆಗೆ ಅಡ್ಡಿಯಾದವಂತೆ.
ತಲೆಯ ಮೇಲೆ ಕಿರೀಟ ಇಟ್ಟು ವ್ಯಂಗ್ಯ ಮಾಡಿದ್ರಂತೆ!
ಆ ಘಟನೆಯನ್ನು ನೆನಪಿಸಿಕೊಂಡ ಸಲ್ಮಾನ್ ಖಾನ್, ಪತ್ರಕರ್ತರು ತಮ್ಮ ಮತ್ತು ಸೋಹೈಲ್ ಅವರ ಫೋಟೋಗಳನ್ನು ಪ್ರಕಟಿಸಿ, ತಲೆಯ ಮೇಲೆ ಸ್ವಲ್ಪ ಓರೆಯಾಗಿರುವಂತೆ ಎರಡು ಕಿರೀಟಗಳನ್ನು ಎಡಿಟ್ ಮಾಡಿ ಹಾಕಿದ್ದರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, 'ಇವರೇ ನಮ್ಮ ರಾಮ, ಇವರೇ ನಮ್ಮ ಲಕ್ಷ್ಮಣ' ಎಂಬ ರೀತಿಯಲ್ಲಿ ವ್ಯಂಗ್ಯವಾಗಿ ಸುದ್ದಿ ಪ್ರಕಟಿಸಿದ್ದರಂತೆ.
ಈ ಬೆಳವಣಿಗೆಯಿಂದ ಬೇಸರಗೊಂಡ ಸಲ್ಮಾನ್ ಮತ್ತು ಸೋಹೈಲ್, ಅಲ್ಲಿಯೇ ಆ ಸಿನಿಮಾ ಮಾಡುವ ನಿರ್ಧಾರವನ್ನು ಕೈಬಿಟ್ಟಿದ್ದರಂತೆ. ಹೀಗೆ ಸಾಕಷ್ಟು ಆಸಕ್ತಿಯಿಂದ ಆರಂಭವಾಗಬೇಕಿದ್ದ 'ರಾಮಾಯಣ' ಸಿನಿಮಾ ಯೋಜನೆ ಆರಂಭದಲ್ಲೇ ನಿಂತುಹೋಯಿತು ಎಂದು ಸಲ್ಮಾನ್ ಖಾನ್ ಬಹಿರಂಗಪಡಿಸಿದ್ದಾರೆ.
ಅವಕಾಶ ಸಿಕ್ಕರೆ ಶ್ರೀರಾಮನಾಗುತ್ತಾರಾ ಸಲ್ಮಾನ್?
ಕಾರ್ಯಕ್ರಮದಲ್ಲಿ ಪತ್ರಕರ್ತರು ಮತ್ತೊಂದು ಕುತೂಹಲಕಾರಿ ಪ್ರಶ್ನೆಯನ್ನೂ ಕೇಳಿದ್ದಾರೆ. ಈಗ ಮತ್ತೊಮ್ಮೆ ಅವಕಾಶ ಸಿಕ್ಕರೆ 'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಲು ಇಷ್ಟಪಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಸಲ್ಮಾನ್ ನೀಡಿದ ಉತ್ತರಕ್ಕಿಂತಲೂ, ಅವರು ಹಂಚಿಕೊಂಡ ಹಳೆಯ ಅನುಭವವೇ ಹೆಚ್ಚು ಗಮನ ಸೆಳೆದಿದೆ. ಒಂದು ಕಾಲದಲ್ಲಿ ರಾಮಾಯಣದಂತಹ ಮಹಾಕಾವ್ಯವನ್ನು ತೆರೆಮೇಲೆ ತರುವ ಕನಸು ಕಂಡಿದ್ದ ಸಲ್ಮಾನ್ ಖಾನ್, ಆ ಯೋಜನೆ ಕೈತಪ್ಪಿದ್ದರ ಹಿಂದಿನ ಕಾರಣವನ್ನು ಈಗ ಬಹಿರಂಗಪಡಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
'ನನ್ನ ಜೀವನದ ಸಿನಿಮಾ ಮಾಡಿದರೆ ಹಲವರು ಅಚ್ಚರಿಪಡುತ್ತಾರೆ!'
ಇದೇ ಸಂದರ್ಶನದಲ್ಲಿ ತಮ್ಮ ಜೀವನದ ಆಧಾರದಲ್ಲಿ ಸಿನಿಮಾ ನಿರ್ಮಿಸಿದರೆ ನಟಿಸಲು ಇಷ್ಟಪಡುತ್ತೀರಾ ಎಂಬ ಪ್ರಶ್ನೆಯೂ ಸಲ್ಮಾನ್ಗೆ ಎದುರಾಗಿದೆ. ಇದಕ್ಕೆ ಅವರು ನೇರವಾಗಿಯೇ ನಿರಾಕರಿಸಿದ್ದು, ವ್ಯಂಗ್ಯಭರಿತವಾಗಿ 'ನನ್ನ ಜೀವನದ ಮೇಲೆ ಸಿನಿಮಾ ಮಾಡಿದರೆ ಬಹಳಷ್ಟು ಜನ ಅಚ್ಚರಿಪಡುತ್ತಾರೆ' ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಸಲ್ಮಾನ್ ಖಾನ್ ನಟನೆಯ 'ಮಾತೃಭೂಮಿ' ಸಿನಿಮಾ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಆರಂಭದಲ್ಲಿ ಈ ಚಿತ್ರಕ್ಕೆ 'ಬ್ಯಾಟಲ್ ಆಫ್ ಗಾಲ್ವಾನ್' ಎಂಬ ಶೀರ್ಷಿಕೆ ಇಡಲಾಗಿತ್ತು.
ಬಳಿಕ ಹಲವು ಕಾರಣಗಳಿಂದ ಚಿತ್ರದ ಹೆಸರು ಬದಲಾಗಿದ್ದು, ಹಲವು ಅಡೆತಡೆಗಳ ನಂತರ ಈಗ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸದ್ಯ ಎರಡು ದಶಕಗಳ ಹಿಂದೆ ಸಲ್ಮಾನ್ ಖಾನ್ ಕೈಬಿಟ್ಟಿದ್ದ 'ರಾಮಾಯಣ' ಸಿನಿಮಾ ಕನಸಿನ ಕಥೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಅಂದು ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿದ್ದ ಭಾಯಿಜಾನ್, ಇಂದು ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಚಿತ್ರದ ಚರ್ಚೆಯ ನಡುವೆ ತಮ್ಮ ಹಳೆಯ ಅನುಭವವನ್ನು ಹಂಚಿಕೊಂಡಿದ್ದಾರೆ!














