Bigg Boss contestants moved to resort: ಜಲಮಾಲಿನ್ಯ  ಅನಧಿಕೃತ ಕಾರ್ಯನಿರ್ವಹಣೆ ಆರೋಪದ ಮೇಲೆ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಜಿಲ್ಲಾಡಳಿತ ಬೀಗ ಜಡಿದಿದೆ. ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡ 12ನೇ ಸೀಸನ್ ಶೋ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದ್ದು, 17 ಸ್ಪರ್ಧಿಗಳು ರೆಸಾರ್ಟ್‌ಗೆ ಸ್ಥಳಾಂತರ

ಬೆಂಗಳೂರು (ಅ.8): ಜಲಮಾಲಿನ್ಯ ಮತ್ತು ಅನಧಿಕೃತವಾಗಿ ಕಾರ್ಯನಿರ್ವಹಣೆ ಆರೋಪದ ಮೇಲೆ, ಜನಪ್ರಿಯ ಬಿಗ್‌ಬಾಸ್‌ ರಿಯಾಲಿಟಿ ಶೋ ನಡೆಯುತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ಜಿಲ್ಲಾಡಳಿತ ಮಂಗಳವಾರ ಸಂಜೆ ಬೀಗ ಜಡಿದಿದೆ. ಇದರಿಂದಾಗಿ ನಾಟಕೀಯ ಸನ್ನಿವೇಶಗಳ ಮೂಲಕ ವೀಕ್ಷಕರ ಗಮನ ಸೆಳೆಯುತ್ತಿದ್ದ ನಟ ಸುದೀಪ್‌ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಶೋಗೆ ತಾತ್ಕಾಲಿಕ ತೆರೆಬಿದ್ದಿದೆ.

ಬಿಗ್ ಬಾಸ್ ಕನ್ನಡ 12ನೇ ಸೀಸನ್‌ ಅರ್ಧಕ್ಕೆ ಸ್ಥಗಿತ:

ರಾಮನಗರ ಜಿಲ್ಲಾ ಆಡಳಿತದಿಂದ ಜಾಲಿವುಡ್ ಸ್ಟೂಡಿಯೋವನ್ನು ಸೀಜ್ ಮಾಡಿರುವ ಹಿನ್ನೆಲೆಯಲ್ಲಿ, ಆಯೋಜಕರಾದ ವೆಲ್ಸ್ ಸ್ಟೂಡಿಯೋಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಶೋವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದೆ. ನಿನ್ನೆಯೇ ಬಿಗ್ ಬಾಸ್ ಮನೆಯಲ್ಲಿದ್ದ 17 ಮಂದಿ ಸ್ಪರ್ಧಿಗಳನ್ನು ತಕ್ಷಣ ಈಗಲ್ ಟನ್ ದಿ ಗಾಲ್ಫ್ ವಿಲೇಜ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದ್ದು, ಈ ರೀತಿ ಅರ್ಧಕ್ಕೆ ಸ್ಥಗಿತಗೊಳ್ಳುತ್ತಿರುವುದು ಎರಡನೇ ಬಾರಿಗೆ ಸಂಭವಿಸಿದೆ. ಈ ಹಿಂದೆ 2021ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶೋ ಈಗ ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಸ್ಥಗಿತಗೊಂಡಿದೆ.

ಬಿಗ್ ಬಾಸ್ ಕನ್ನಡ 12ನೇ ಸೀಸನ್‌ ಸ್ಥಗಿತಕ್ಕೆ ಕಾರಣಗಳೇನು?

ಜಾಲಿವುಡ್ ಸ್ಟೂಡಿಯೋದಲ್ಲಿ ಒಳಾಂಗಣ ಶೋ ನಡೆಸುವುದಕ್ಕೆ ಸಂಬಂಧಿತ ಇಲಾಖೆಯಿಂದ ಅನುಮತಿ ಪಡೆಯದ ಕಾರಣ, ವಾಯು ಮಾಲಿನ್ಯ ನಿಯಂತ್ರಣ ಮತ್ತು ಜಲ ಕಾಯ್ದೆಗಳ ಅಡಿಯಲ್ಲಿ ಅನುಮತಿಗಳ ಕೊರತೆ, ತ್ಯಾಜ್ಯ ಸಂಸ್ಕರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದು, ಜನರೇಟರ್ ಸೆಟ್‌ಗಳ ಅಳವಡಿಕೆಗೆ ಅನುಮತಿ ಇಲ್ಲದಿರುವುದು ಎಂಬ ಆರೋಪಗಳು. ಹೆಚ್ಚುವರಿಯಾಗಿ, ಕೊಳಚೆ ನೀರನ್ನು ಸಂಸ್ಕರಿಸದೇ ಮೊರೆಗೆ ಬಿಟ್ಟು ಕಾನೂನು ಉಲ್ಲಂಘನೆ ಮಾಡಿರುವುದು ಮುಖ್ಯ ಕಾರಣವಾಗಿದೆ. ಕಳೆದ ಸೀಸನ್‌ನಲ್ಲೂ ಇದೇ ರೀತಿ ಪರಿಸರ ನಿಯಮ ಮತ್ತು ನಕ್ಷೆ ಉಲ್ಲಂಘನೆಗೆ ಅಧಿಕಾರಿಗಳು ನೋಟೀಸ್ ನೀಡಿದ್ದರು. ಈ ಬಾರಿ ಪರಿಸರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎರಡು ಬಾರಿ ನೋಟೀಸ್ ಜಾರಿಯಾಗಿದ್ದರೂ, ಸಂಸ್ಥೆ ಬುದ್ಧಿ ಕಲಿಯಲಿಲ್ಲ. ಇದೀಗ ಬಿಗ್‌ಬಾಸ್‌ಗೆ ಬೀಗ ಜಡೆಯಲಾಗಿದೆ.

ಬಿಗ್ ಬಾಸ್ ಸ್ಪರ್ಧಿಗಳು ಹೋಗಿದ್ದೆಲ್ಲಿಗೆ?

ರೆಸಾರ್ಟ್‌ನಲ್ಲಿ 'ಬಿಗ್ ಬಾಸ್ ಮನೆ' ವ್ಯವಸ್ಥೆ!ನಿನ್ನೆ ರಾತ್ರಿ ಆಯೋಜಕರ ಸೂಚನೆಯಂತೆ ಸ್ಪರ್ಧಿಗಳು ಬಿಗ್ ಬಾಸ್ ಮನೆಯನ್ನು ತೊರೆದು ರೆಸಾರ್ಟ್‌ಗೆ ಬಂದಿದ್ದಾರೆ. ಇಲ್ಲಿ ಒಂದು ರಾತ್ರಿ ಕಾಲ ಕಳೆದಿದ್ದು, ರಹಸ್ಯವನ್ನು ಕಾಪಾಡಿಕೊಳ್ಳಲು ಸಂಪೂರ್ಣ ನಿರ್ಬಂಧಗಳು ಜಾರಿಯಲ್ಲಿವೆ. ಸ್ಪರ್ಧಿಗಳಿಗೆ ನೋ ಟಿವಿ, ನೋ ಮೊಬೈಲ್, ನೋ ಬಾಹ್ಯ ಸಂಪರ್ಕ – ಬಿಗ್ ಬಾಸ್ ತಂಡದಿಂದ ಮಾತ್ರ ಭದ್ರತೆ ಮತ್ತು ಆತಿಥ್ಯ. ಕೊಠಡಿಯ ಟಿವಿಗಳನ್ನು ತೆರವುಗೊಳಿಸಿ, ಬೇರೆಯವರೊಂದಿಗೆ ಸಂಪರ್ಕ ನಿಷೇಧಿಸಲಾಗಿದೆ. ನಿನ್ನೆ ಪೊಲೀಸ್ ಮತ್ತು ಜಿಲ್ಲಾ ಆಡಳಿತ ಸಿಬ್ಬಂದಿಯ ಎಂಟ್ರಿಯಿಂದ ಸ್ಪರ್ಧಿಗಳು ಗೊಂದಲಕ್ಕೆ ಒಳಗಾಗಿದ್ದರೂ, ಬಿಗ್ ಬಾಸ್ ತಂಡವು ರಾತ್ರಿ ಸಭೆಯಲ್ಲಿ ಮನವೊಲಿಸಿ, ಕುಟುಂಬಸ್ಥರಿಗೆ ಮಾಹಿತಿ ನೀಡಿದೆ. ಸದ್ಯ ರೆಸಾರ್ಟ್‌ನಲ್ಲಿ ಸ್ಪರ್ಧಿಗಳು ಶಾಂತವಾಗಿ ಇದ್ದಾರೆ.

ಸ್ಪರ್ಧಿಗಳಿಂದ ತುಂಬಿದ್ದ ಬಿಗ್ ಬಾಸ್ ಮನೆ ಖಾಲಿ ಖಾಲಿ!

ಒಂದೊಮ್ಮೆ ಸ್ಪರ್ಧಿಗಳ ಸದಸ್ಯದಿಂದ ತುಂಬಿದ್ದ ಬಿಗ್ ಬಾಸ್ ಮನೆ ಈಗ ಸಂಪೂರ್ಣ ಖಾಲಿಯಾಗಿದೆ. ಕಂದಾಯ ಇಲಾಖೆ ಸಿಬ್ಬಂದಿಯು ಗೇಟ್‌ಗೆ ಬೀಗ ಜಡಿದು, ಬಿಳಿ ಬಟ್ಟೆ ಸುತ್ತಿ ಸೀಲ್ ಹಾಕಿದ್ದಾರೆ. ಜಾಲಿವುಡ್ ಸ್ಟೂಡಿಯೋದಲ್ಲಿ ಯಾವುದೇ ಆಕ್ಟಿವಿಟಿ ಇಲ್ಲ, ಮತ್ತು 17 ಮಂದಿ ಸಿಬ್ಬಂದಿಯನ್ನೂ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ಮನೆಯಲ್ಲಿ ಸ್ಪರ್ಧಿಗಳ ಸದ್ದು ಇಲ್ಲ, ಸಂಪೂರ್ಣ ಶಾಂತತೆ!

ಬಿಗ್ ಬಾಸ್ ಶೋ ನಡೆಸಲು ಮತ್ತೆ ಅನುಮತಿ ಸಿಗುತ್ತಾ?

ಆಯೋಜಕರು ಇಂದು ಕೋರ್ಟ್‌ನಲ್ಲಿ ಸೀಜ್ ತೆರವಿಗೆ ಮನವಿ ಸಲ್ಲಿಸಲಿರುವುದು. ಅನುಮತಿ ದೊರೆತ ಮರುಕ್ಷಣವೇ ಶೋವನ್ನು ಮರುಪ್ರಾರಂಭಿಸುವ ಚಿಂತನೆಯಲ್ಲಿದ್ದಾರೆ. ಇಲ್ಲದಿದ್ದರೆ, 12ನೇ ಸೀಸನ್ ಬಂದ್ ಆಗಬಹುದು. ಇಂದೇ ಸಂಜೆಯೊಳಗೆ ಆಯೋಜಕರಿಂದ ನಿರ್ಧಾರ ಪ್ರಕಟ ಸಾಧ್ಯತೆಯಿದೆ. ಬಿಗ್ ಬಾಸ್ ಶೋಗೆ ಮತ್ತೊಮ್ಮೆ ಅನುಮತಿ ಸಿಗುತ್ತಾ? ಇಲ್ಲವಾ? ಇಂದು ತಿಳಿಯಲಿದೆ. ಈ ಘಟನೆ ಎಂಟರ್‌ಟೈನ್‌ಮೆಂಟ್ ಉದ್ಯಮಕ್ಕೆ ದೊಡ್ಡ ಪಾಠವಾಗಿದೆ. ಪರಿಸರ ನಿಯಮಗಳ ಪಾಲನೆಯ ಮಹತ್ವವನ್ನು ಗಂಭೀರವಾಗಿ ಚಿಂತಿಸುವಂತೆ ಮಾಡಿದೆ. ಬಿಗ್ ಬಾಸ್ ಕನ್ನಡ 12ನೇ ಸೀಸನ್‌ ಮುಂದಿನ ಅಪ್ಡೇಟ್‌ಗಾಗಿ ನಮ್ಮನ್ನು ಫಾಲೋ ಮಾಡ್ತಾ ಇರಿ!