ಬಿಗ್‌ ಬಾಸ್ ಖ್ಯಾತಿಯ ನಟ ರಾಕೇಶ್ ಅಡಿಗ ಮತ್ತು ಮಾಧುರಿ ಸಿಂಗ್ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಇವರ ಎಂಗೇಜ್‌ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಗ್‌ ಬಾಸ್ʼ ಖ್ಯಾತಿಯ ರಾಕೇಶ್‌ ಅಡಿಗ ಎಂಗೇಜ್ ಆಗಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದು, ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ. ಇದೀಗ ಎಂಗೇಜ್‌ಮೆಂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇತ್ತೀಚೆಗೆ ತಮ್ಮ ಮದುವೆ ಬಗ್ಗೆ ಮತ್ತು ಕನಸಿನ ಹುಡುಗಿ ಬಗ್ಗೆ ರಾಕೇಶ್ ಅಡಿಗ ಮಾತನ್ನಾಡಿದ್ದರು. ತಮ್ಮ ನಿರೀಕ್ಷೆಗೆ ತಕ್ಕ ಹುಡುಗಿ ಸಿಕ್ಕಿದ್ದಾರೆ ಎನ್ನುವುದಕ್ಕಿಂತ, ತಮ್ಮ ಜೀವನಕ್ಕೆ ಅಗತ್ಯವಿರುವಂತಹ ವ್ಯಕ್ತಿ ಸಿಕ್ಕಿದ್ದಾರೆ ಎಂದಿದ್ದರು. ನನಗೆ ಬೇಕಾಗಿರೋ ತರಹ ಹುಡುಗಿ ಅನ್ನೋದಕ್ಕಿಂತ, ನನಗೆ ಅವಶ್ಯಕತೆ ಇರುವಂತಹ ಹುಡುಗಿ ಸಿಕ್ಕಿದ್ದಾರೆ. ನಾನು ಒಬ್ಬ ಬೆಟರ್ ಪರ್ಸನ್ ಆಗೋದಕ್ಕೆ ಯಾವ ತರಹ ಬೇಕೋ, ಆ ತರಹ ಹುಡುಗಿ ಸಿಕ್ಕಿದ್ದಾರೆ ಎಂದು ಸಂದರ್ಶನ ಒಂದರಲ್ಲಿ ಮಾತನ್ನಾಡಿದ್ದರು. ಈ ಹೇಳಿಕೆ ಬೆನ್ನಲ್ಲೇ ರಾಕೇಶ್ ಅಡಿಗ ಅವರ ಮದುವೆ ವಿಚಾರ ಮುನ್ನಲೆಗೆ ಬಂದಿತ್ತು.

ನಿನ್ನೆ ಗ್ರಾಂಡ್ ಆಗಿ ರಾಕೇಶ್ ಅಡಿಗ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ಅಂದಹಾಗೆ ರಾಕೇಶ್ ಅಡಿಗರ ಭಾವಿ ಪತ್ನಿಯ ಹೆಸರು ಮಾಧುರಿ ಸಿಂಗ್. ಮಾಧುರಿ ಸಿಂಗ್ ಜೊತೆ ರಿಂಗ್ ಬದಲಿಸಿರುವ ಅಡಿಗ, ಕೆಲವೇ ದಿನಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥವು ಗ್ರ್ಯಾಂಡ್ ಆಗಿ ಜರುಗಿದೆ. ಈ ಸುದ್ದಿಯನ್ನು ತಿಳಿದು ಅವರ ಅಭಿಮಾನಿಗಳು ಫುಲ್ ಹ್ಯಾಪಿ ಆಗಿದ್ದಾರೆ.

ಕಪ್ಪು ಶೆರ್ವಾನಿಯಲ್ಲಿ ಮಿಂಚಿದ ರಾಕೇಶ್, ಕ್ರೀಮ್ ಬಣ್ಣದ ಲೆಹೆಂಗಾ ಧರಿಸಿದ್ದ ಮಾಧುರಿ ಅವರಿಗೆ ಉಂಗುರ ತೊಡಿಸಿ, ಮೊಣಕಾಲೂರಿ ಪ್ರಪೋಸ್ ಮಾಡಿದ್ದಾರೆ. ಮಾಧುರಿ ಸಿಂಗ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಯಾರು ರಾಕೇಶ್ ಅಡಿಗ?

ರಾಕೇಶ್ ಅಡಿಗ 2009ರಲ್ಲಿ ಬಿಡುಗಡೆಯಾದ ಜೋಶ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಿತ್ರದಲ್ಲಿನ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೋಶ್ ಬಳಿಕ ಮನಸಾಲಜಿ, ಪರಿ, ಯಾರೇ ಕೂಗಾಡಲಿ, ನಂದ ಗೋಕುಲ, ಮಂದಹಾಸ, ಕರ್ನಾಟಕ ಅಯೋಧ್ಯಪುರಂ, ಕೋಟಿಗೊಬ್ಬ ಲವ್ ಸ್ಟೋರಿ, ಪ್ರೀತಿಯಿಂದ, ಮಂಡ್ಯ ಟು ಮುಂಬೈ, ನಟೋರಿಯಸ್, ಡವ್ ಹಾಗೂ ನೈಟ್ ಔಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನು ಲೂಸ್ ಮಾದ ಯೋಗಿ ಅಭಿನಯದ ಅಲೆಮಾರಿ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ನಟನಾ ವೈವಿಧ್ಯತೆಯನ್ನೂ ತೋರಿಸಿದ್ದರು. ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಇತ್ತೀಚೆಗೆ ‘ನಾನು ಮತ್ತು ಗುಂಡ 2’ ಸಿನಿಮಾದಲ್ಲೂ ನಟಿಸಿರುವ ರಾಕೇಶ್ ಅಡಿಗ, ಸಿನಿಮಾ ಜರ್ನಿಯ ಜೊತೆಗೆ ಇದೀಗ ತಮ್ಮ ವೈಯಕ್ತಿಕ ಜೀವನದಲ್ಲೂ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.