ಸಂತ್ರಸ್ತೆ ಸಂಧ್ಯಾಳಿಗೆ ನ್ಯಾಯ ಕೊಡಿಸಲು ತನ್ನ ಜೀವವನ್ನೇ ಪಣಕ್ಕಿಟ್ಟ ವಕೀಲೆ ಭಾರ್ಗವಿ ವಿರುದ್ಧನೇ ಕೇಸ್ ಹಾಕಲು ಹೊರಟಿದ್ದಾರಲ್ಲ ನೆಟ್ಟಿಗರು. ಏನಪ್ಪಾ ಇದು ವಿಷ್ಯ?
ವಕೀಲೆ ಭಾರ್ಗವಿ, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂಧ್ಯಾಳಿಗೆ ನ್ಯಾಯ ಕೊಡಿಸಲು ಇನ್ನಿಲ್ಲದ ಪ್ರಯತ್ನಪಡುತ್ತಿದ್ದಾಳೆ. ಪ್ರಭಾವಿ ವಕೀಲ ಜೆಪಿ ವಿರುದ್ಧ ತಲೆಎತ್ತಿ ನಿಂತು ಆತನಿಗೆ ಸೆಡ್ಡು ಹೊಡೆದು ಈ ಕೇಸ್ ಗೆಲ್ಲುವುದು ಭಾರ್ಗವಿ ಪಾಲಿಗೆ ಅಷ್ಟು ಸುಲಭವಲ್ಲ. ಹಂತ ಹಂತದಲ್ಲಿಯೂ ಅವಮಾನ, ಅನ್ಯಾಯದ ಜೊತೆಗೆ ಪ್ರಾಣದ ಬೆದರಿಕೆಯನ್ನೂ ಎದುರಿಸುತ್ತಿದ್ದಾಳೆ. ಇವಳು ಕೇಸ್ ಗೆಲ್ಲಬಾರದು ಎನ್ನುವ ಕಾರಣಕ್ಕೆ ಈಕೆಯ ಅಪ್ಪನ ಮೇಲೂ ಗೂಂಡಾಗಳನ್ನು ಬಿಟ್ಟು ಬೆದರಿಸಿದ್ದಾನೆ ಜೆ.ಪಿ. ಇವೆಲ್ಲವನ್ನೂ ಮೀರಿ ಭಾರ್ಗವಿ ಹೇಗೆ ಗೆಲ್ಲುತ್ತಾಳೆ ಎನ್ನುವುದು ಮುಂದಿರುವ ಪ್ರಶ್ನೆ. ಅದೇ ಇನ್ನೊಂದೆಡೆ ಜೆ.ಪಿ. ಮಗನೇ ಭಾರ್ಗವಿಗೆ ಬೆನ್ನೆಲುಬಾಗಿ ನಿಂತಿದ್ದಾನೆ. ಅವನಿಗೆ ಭಾರ್ಗವಿ ಮೇಲೆ ಲವ್ ಶುರುವಾಗಿದೆ. ಆದರೆ ಅವನು ಜೆ.ಪಿ ಮಗ ಎನ್ನುವುದು ಭಾರ್ಗವಿಗೆ ಗೊತ್ತಿಲ್ಲ. ಗೊತ್ತಾದರೆ ಏನಾಗುತ್ತದೆ ಎನ್ನುವುದೂ ತಿಳಿಯಬೇಕಿದೆ.
ಇದು ಸದ್ಯ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರ ಆಗ್ತಿರೋ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಕಥೆಯಾಯ್ತು. ಇದರಲ್ಲಿ ಭಾರ್ಗವಿಯಾಗಿ ರಾಧಾ ಭಗವತಿ ನಟಿಸುತ್ತಿದ್ದಾರೆ. ಇದೀಗ ರಾಧಾ ಮತ್ತು ಸಂಧ್ಯಾ ಪಾತ್ರಧಾರಿ ಇಬ್ಬರೂ ಸೇರಿ ಸಕತ್ ಸೊಂಟ ಬಳುಕಿಸಿ ರೀಲ್ಸ್ ಮಾಡಿದ್ದಾರೆ. ಅಷ್ಟಕ್ಕೂ ರಾಧಾ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್. ಬಿಜಿ ಷೆಡ್ಯೂಲ್ ಹೊರತಾಗಿಯೂ ಟೈಮ್ ಸಿಕ್ಕಾಗಲೆಲ್ಲಾ ತಮ್ಮ ಸೀರಿಯಲ್ ತಂಡದ ಜೊತೆ ರೀಲ್ಸ್ ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಇದೀಗ ಸಂಧ್ಯಾ ಪಾತ್ರಧಾರಿಯ ಜೊತೆಯೂ ಸಕತ್ ಸ್ಟೆಪ್ ಹಾಕಿದ್ದಾರೆ. ಇದೇ ಕಾರಣಕ್ಕೆ ಈಗ ರಾಧಾ ಭಗವತಿ ವಿರುದ್ಧ ಕೇಸ್ ಹಾಕುವುದಾಗಿ ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. ಅಷ್ಟಕ್ಕೂ ವಕೀಲೆಯಾಗಿರುವ ಭಾರ್ಗವಿ ಕೇಸ್ ನಡೆಸುವುದನ್ನು ಬಿಟ್ಟು, ಸಂಧ್ಯಾಳಿಗೆ ನ್ಯಾಯ ಕೊಡಿಸುವುದನ್ನು ಬಿಟ್ಟು ಹೀಗೆ ಅವಳ ಜೊತೆ ಡಾನ್ಸ್ ಮಾಡ್ತಾ ಇರೋದಕ್ಕೆ ನಟಿಯ ಕಾಲೆಳೆಯುತ್ತಿದ್ದಾರಷ್ಟೇ ಅಭಿಮಾನಿಗಳು. ಅಲ್ಲಿ ಸಂಧ್ಯಾಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಅದೂ ಅಲ್ಲದೇ ವಕೀಲೆಯಾದ ನೀವು ಹೀಗೆಲ್ಲಾ ಬೇಕಾಬಟ್ಟೆ ಸೊಂಟಬಳುಕಿಸೋದಾ, ರಸ್ತೆ ಮೇಲೆ ಡಾನ್ಸ್ ಮಾಡೋದಾ ಎಂದು ತಮಾಷೆ ಮಾಡುತ್ತಿದ್ದಾರೆ. ಅಷ್ಟಕ್ಕೂ ರಾಧಾ ಅವರು ಇದಾಗಲೇ ಹಲವಾರು ನಟರ ಜೊತೆ ರೀಲ್ಸ್ ಮಾಡಿದ್ದು, ನಟನೆಯಂತೆಯೇ ಡಾನ್ಸ್ನಲ್ಲಿಯೂ ಮುಂದು ಎನ್ನುವುದನ್ನು ಅವರು ತೋರಿಸಿದ್ದಾರೆ.
ನಟಿ ರಾಧಾ ಅವರ ಕುರಿತು ಹೇಳುವುದಾದರೆ, ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.
ಅಂದಹಾಗೆ ರಾಧಾ ಅವರ ಕುಟುಂಬದವೇ ಕಲಾವಿದರ ಕುಟುಂಬ. ಇವರ ಅಜ್ಜ ರಂಗಭೂಮಿ ಕಲಾವಿದರು. ಇದರ ಜೊತೆಗೆ ಸವರು ಹರಿಕಥೆ ದಾಸರೂ ಕೂಡಾ ಆಗಿದ್ದರು. ರಾಧಾ ಅವರ ತಾಯಿಯೂ ಜನಪದ ಗೀತೆಗಳಿಗೆ ದನಿಯಾದವರು. ಮನೆಯಲ್ಲಿ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಏನೋ ರಾಧಾ ಭಗವತಿ ಅವರಿಗೆ ನಟನೆಯತ್ತ ಎಳೆ ವಯಸ್ಸಿನಲ್ಲಿಯೇ ಆಸಕ್ತಿ ಮೂಡಿದೆ. ಕಿರುತೆರೆ, ಹಿರಿತೆರೆ, ಮ್ಯೂಸಿಕ್ ಆಲ್ಬಂ ಮಾತ್ರವಲ್ಲದೇ ರಾಧಾ ಅವರು, ಹಿನ್ನೆಲೆ ಗಾಯಕಿಯೂ ಹೌದು. ಈಗಾಗಲೇ ಎರಡು ಸಿನಿಮಾಗಳಲ್ಲಿ ಹಾಡಿರುವ ಈಕೆ ಕಂಠದಾನಕ್ಕೂ ಸೈ. 'ಮದುಮಗಳು' ಧಾರಾವಾಹಿಯಲ್ಲಿನ ನಾಯಕಿಯ ಪಾತ್ರಕ್ಕೆ ಕಂಠದಾನ ಮಾಡುತ್ತಿರುವ ರಾಧಾ ಅವರಿಗೆ ಕಲೆ ಎಂಬುದು ರಕ್ತಗತವಾಗಿಯೇ ಒಲಿದು ಬಂದಿದೆ.
