ಮಹಿಳಾ ಕೇಂದ್ರಿತವಾದ ಹಾರರ್‌ ಸಿನಿಮಾ ಇದು. ಬಹುತೇಕ ಹೊಸಬರೇ ಕೂಡಿರುವ ಸಿನಿಮಾ ಇದಾಗಿರುವುದರಿಂದ ಹೊಸತನ್ನು ನಿರೀಕ್ಷೆ ಮಾಡಬಹುದು ಎಂಬುದಕ್ಕೆ ಚಿತ್ರದ ಪೋಸ್ಟರ್‌ಗಳೇ ಸಾಕ್ಷಿಯಾಗಿವೆ. ಕ್ರೈಂ, ಹಾರರ್‌ ನೆರಳಿನ ಈ ಚಿತ್ರವನ್ನು ನಿರ್ದೇಶಿಸಿರುವುದು ವಿಶ್ವ ಜಿ ಕಡೂರ್‌. ವಿಜಯ್‌ ರಾಮ್‌, ವೇದಾ ಹಾಗೂ ಆಶಿತ್‌ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ಈ ಚಿತ್ರದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಐಟಿ ಕ್ಷೇತ್ರದಿಂದ ಬಂದವರು. ಜತೆಗೆ ರಂಗಭೂಮಿ ನಂಟು. ಚಿತ್ರದ ಶೂಟಿಂಗ್‌ ಬಹುತೇಕ ರಾತ್ರಿಯಲ್ಲೇ ಇದ್ದುದ್ದರಿಂದ ಬೆಳಗ್ಗೆ ಕೆಲಸ ಮಾಡಿಕೊಂಡು ರಾತ್ರಿ ಶೂಟಿಂಗ್‌ ಮಾಡಿಕೊಂಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಅಶೋಕ್‌ ಭಾರದ್ವಾಜ್‌.

‘ಹಿರಿಯ ನಟಿ ಕಲ್ಪನಾ ತೀರಿಕೊಂಡ ಬಳಿಕ ಆ ಊರಿನಲ್ಲಿ ಕಲ್ಪನಾ ಆತ್ಮ ಊರಿನಲ್ಲಿ ಓಡಾಡುತ್ತಿದೆ ಅಂತೆಲ್ಲಾ ಊರಿನ ಜನ ಮಾತನಾಡಿಕೊಳ್ಳುತ್ತಿದ್ದರು. ಇದನ್ನೇ ಎಳೆಯಾಗಿಸಿಕೊಂಡು ಕತೆ-ಚಿತ್ರಕಥೆ ಬರೆದಿದ್ದು ಕಾರ್ತಿಕ್‌ ಮರಳಬಾ. ಎಲ್ಲೂ ಕಲ್ಪನಾ ಅವರ ಚಿತ್ರಗಳನ್ನೋ ಅಥವಾ ಅವರ ಫೋಟೋಗಳನ್ನೋ ಬಳಸಿಕೊಂಡಿಲ್ಲ. ಕೇವಲ ಕಲ್ಪನಾ ತೀರಿಕೊಂಡ ಮೇಲೆ ಕೇಳಿ ಬಂದ ಮಾತುಗಳು, ಅದಕ್ಕೂ ತಕ್ಕಂತೆ ದೃಶ್ಯಗಳ ಜೋಡಣೆಯಿಂದ ಈ ಸಿನಿಮಾ ಹುಟ್ಟಿಕೊಂಡಿದೆ’ ಎಂದು ನಿರ್ಮಾಪಕ ಅಶೋಕ್‌ ಭಾರದ್ವಾಜ್‌ ಹೇಳುತ್ತಾರೆ.

ವೈ ಜೆ ಕೆ ಸಂಗೀತ ಸಂಯೋಜಿಸಿದ್ದಾರೆ. ಮನು ದಾಸಪ್ಪ ಕ್ಯಾಮೆರಾ, ವೈಎಸ್‌ ಶ್ರೀಧರ್‌ ಸಂಕಲನ ಈ ಚಿತ್ರಕ್ಕಿದೆ. ಶಿವು ಶರಣಪ್ಪ ಸಂಭಾಷಣೆ ಇದ್ದು, ಈಗಾಗಲೇ ಸೆನ್ಸಾರ್‌ ಕೂಡ ಮುಗಿಸಿದ್ದು, ಯು ಸರ್ಟಿಫಿಕೆಟ್‌ ಸಿಕ್ಕಿದೆ.