ಆರಾಮವಾಗಿ ನೋಡಬಹುದಾದ ಈ ರಾಮ!

https://static.asianetnews.com/images/authors/b348a094-0bef-5801-a1f6-61e57071185f.jpg
First Published 28, Jul 2018, 1:37 PM IST
Ayeo Ram sandalwood movie review
Highlights

ಇಲ್ಲಿ ಎಲ್ಲರೂ ಓಡುವುದು ದುಡ್ಡಿನ ಹಿಂದೆ. ಆದರೆ ಉದ್ದೇಶ ಮಾತ್ರ ಬೇರೆ ಬೇರೆ. ಪ್ರೀತಿ, ಮೋಸ, ಆಸೆ, ಮಾಫಿಯಾ, ಪ್ರಾಮಾಣಿಕತೆ, ಅಸಹಾಯಕತೆ ಎಲ್ಲವೂ ಈ ಓಟಕ್ಕೆ ಕಾರಣ. ಕೊನೆಗೆ ರೇಸ್‌ನಲ್ಲಿ ಗೆಲ್ಲುವುದ್ಯಾರು ಎನ್ನುವುದರ ಸುಂದರ ಅಭಿವ್ಯಕ್ತಿ ‘ಅಯ್ಯೋ ರಾಮ’.

‘ರಾಮ ರಾಮ ರೇ’ ಚಿತ್ರ ನೋಡಿದ್ದವರಿಗೆ ‘ಅಯ್ಯೋ ರಾಮ’ ನೋಡಿ ಬಂದ ಮೇಲೆ ಎರಡರಲ್ಲೂ ಒಂದಷ್ಟು ಸಾಮ್ಯತೆ ಇದೆ ಎಂದು ಅನ್ನಿಸದೇ ಇರದು. ಅದೇ ಆಧಾರದಲ್ಲಿ ಎರಡನ್ನು ತುಲನೆ ಕೂಡ ಮಾಡಬಹುದು. ಆದರೆ ಸಾಮ್ಯತೆ ಇರುವುದು ನಿರೂಪಣೆ, ಜಾನರ್‌ನಲ್ಲಿ ಮಾತ್ರ.

ಇನ್ನುಳಿದಂತೆ ಸಾಮಾನ್ಯ ಕತೆಗೆ ಅಚ್ಚುಕಟ್ಟಾದ ಫ್ರೇಮ್ ಹಾಕಿ ಮನಸ್ಸಿನಲ್ಲಿ ಉಳಿದುಕೊಳ್ಳುವಂತಹ ಚಿತ್ರ ಮಾಡಿದ್ದಾರೆ ನಿರ್ದೇಶಕ ಆರ್. ವಿನೋದ್ ಕುಮಾರ್. ನಾಯಕಿಗೆ ಮುಂಬೈಗೆ ಹೋಗಿ ಬ್ಯೂಟಿ ಪಾರ್ಲರ್ ಮಾಡುವ ಆಸೆ, ಅದಕ್ಕೆ ದುಡ್ಡು ಬೇಕು. ನಾಯಕನಿಗೆ ಪ್ರೀತಿ ಉಳಿಸಿಕೊಳ್ಳುವ ಆಸೆ ಅದಕ್ಕೂ ದುಡ್ಡು ಬೇಕು. ನಿಷ್ಠಾವಂತ ಪೊಲೀಸ್ ಕಾನ್‌ಸ್ಟೇಬಲ್ ಜಹಂಗೀರ್ ಗೆ ಹಾರ್ಟ್ ಹೋಲ್ ಆದ ಮಗುವನ್ನು ಆಪರೇಷನ್ ಮಾಡಿಸಿ ಉಳಿಸಿಕೊಳ್ಳುವ ಆಸೆ, ಅದಕ್ಕೂ ದುಡ್ಡು ಬೇಕು ಮತ್ತೊಂದು ಕಡೆ ಅಧಿಕ ಬಡ್ಡಿಗೆ ಲೇವಾದೇವಿ ಮಾಡುವ ರಾಕ್‌ಲೈನ್ ಸುಧಾಕರ್ ಹತ್ತಿರ ದುಡ್ಡಿದೆ. ಕಿಡ್ನಿ ಮಾಫಿಯಾದಲ್ಲಿ ತೊಡಗಿರುವ ಪ್ರಣಯ ಮೂರ್ತಿಯ ಬಳಿ ದುಡ್ಡಿದೆ. ಇವರಿಬ್ಬರ ಬಳಿ ಇರುವ ದುಡ್ಡು, ದುಡ್ಡಿನ ಅವಶ್ಯಕತೆ ಇರುವ ಬಳಿ ಹೇಗೆಲ್ಲಾ ಸೇರುತ್ತೆ, ಅದಕ್ಕಾಗಿ ಏನೆಲ್ಲಾ ಸರ್ಕಸ್ ನಡೆಯುತ್ತೆ ಎನ್ನುವುದರ ಒಟ್ಟು ಮೊತ್ತ ‘ಅಯ್ಯೋ ರಾಮ’.

ನಾಲ್ಕು ದಿಕ್ಕುಗಳಲ್ಲಿ ಶುರುವಾಗುವ ಕತೆ ಪ್ರಾರಂಭದಿಂದಲೂ ಸಸ್ಪೆನ್ಸ್, ಕಾಮಿಡಿ ಅಲೆಯಲ್ಲಿ ನೋಡುಗನನ್ನು ತನ್ನತ್ತ ಸೆಳೆದುಕೊಳ್ಳುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೆ. ವಿರಾಮದ ನಂತರ ಈ ನಾಲ್ಕು ದಿಕ್ಕುಗಳು ಒಂದಾಗಿ ನಿಜವಾದ ಪ್ರೇಮಿಗೆ ಪ್ರೀತಿ ದಕ್ಕುವಂತೆ, ಮೋಸದ ಪ್ರೀತಿಗೆ ಅರಿವು ಮೂಡುವಂತೆ, ಪ್ರಾಮಾಣಿಕತೆಗೆ ಜಯವಾಗುವಂತೆ, ಮೋಸಕ್ಕೆ ತಕ್ಕ ಶಾಸ್ತಿಯಾಗುವಂತೆ ಮಾಡಿ ಸುಖಾಂತ್ಯ ಕಾಣುತ್ತದೆ.

ಚಿತ್ರದುದ್ದಕ್ಕೂ ಬರುವ ಎರಡು ಬೊಂಬೆಗಳ ರೂಪಕ, ಡೆವಲಪ್ ಆದ ಖಾಲಿ ಲೇಔಟ್‌ನ ಲೊಕೇಷನ್, ಒಂದು ಹಾಡು, ತರ್ಲೆ ಡೈಲಾಗ್ಸ್, ಪ್ರತಿ ಹಂತದಲ್ಲೂ ಎದ್ದು ಕಾಣುವ ಮೋಸ ಇವೆಲ್ಲವೂ ಕತೆಗೆ ಬೆನ್ನೆಲುಬಾಗಿ ಕೆಲಸ ಮಾಡಿವೆ. ದುಡ್ಡನ್ನೇ ಮುಖ್ಯ ದಾಳವಾಗಿಸಿ ಅದರ ಹಿಂದೆ ಪಾತ್ರಗಳು ಓಡುವಂತೆ ಮಾಡಿ, ಕಡೆಗೂ ಸತ್ಯಮೇವ ಜಯತೆ ಎನ್ನುವ ಸಂದೇಶವನ್ನು ಸಾರುವಲ್ಲಿ ನಿರ್ದೇಶಕ ವಿನೋದ್ ಕುಮಾರ್ ಪ್ರಯತ್ನಕ್ಕೆ ಸಂಗೀತ, ಛಾಯಾಗ್ರಹಣ, ತಂತ್ರಜ್ಞರು, ಪಾತ್ರ ವರ್ಗವೆಲ್ಲವೂ ಆಸರೆಯಾಗಿ ನಿಂತಿರುವುದರಿಂದ ಎಲ್ಲಿಯೂ ಕತೆ ಹಳಿ ತಪ್ಪಿತು ಎನ್ನಿಸದೇ, ಮನರಂಜನೆಯ ಸಮೇತ ನೋಡುಗ ಪ್ರಯಾಣ ಮಾಡುವಂತೆ ಮಾಡುವಲ್ಲಿ ಚಿತ್ರ ಸಮಾಧಾನಕರ ಗೆಲುವು ಸಾಧಿಸಿದೆ.

ನಾಯಕ ಶೇಷನ್ ನಟನೆಯಲ್ಲಿ ಪಾಸ್ ಆಗಿದ್ದರೂ ಅದರ ಜೊತೆಗೆ ಬಾಡಿ ಲ್ಯಾಂಗ್ವೇಜ್ ಚೆನ್ನಾಗಿದ್ದರೆ ಒಳ್ಳೆಯದಿತ್ತು. ನಾಯಕಿ ಪ್ರಿಯಾಂಕ ಸುರೇಶ್, ಪ್ರದೀಪ್ ಪೂಜಾರಿ, ಜಹಂಗೀರ್, ರಾಕ್‌ಲೈನ್ ಸುಧಾಕರ್, ಕರಿಸುಬ್ಬು, ಪ್ರಣಯಮೂರ್ತಿ ಎಲ್ಲವೂ ಸಿಕ್ಕ ಪಾತ್ರಗಳನ್ನು ಒಪ್ಪುವಂತೆ ಮಾಡಿದ್ದಾರೆ. ನಿಗದಿತ ಲೊಕೇಷನ್, ಒಂದು ವ್ಯಾನ್, ಒಂದೇ ಫ್ಲೋನಲ್ಲಿ ಸಾಗುವ ಚಿತ್ರವನ್ನು ಕೊನೆಗೆ ಗೆದ್ದವರ‌್ಯಾರು? ಬಿದ್ದವರ‌್ಯಾರು? ದುಡ್ಡು ಎಷ್ಟು ಮುಖ್ಯ ಎನ್ನುವುದನ್ನು ತಿಳಿಯಬೇಕಾದರೆ ಫುಲ್ ಫ್ಯಾಮಿಲಿ ಕುಳಿತು ನೋಡಿಬರಬಹುದು.

loader