ಈ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತುಂಬಾ ಗಂಭೀರವಾದ ಭಂಗಿಯಲ್ಲಿ ಕಾಣಿಸಿಕೊಂಡಿದ್ದೇ ಈಗ ಬಹಳಷ್ಟು ಮೀಮ್ಸ್‌ ಓಡಾಡಲು ಕಾರಣವಾಗಿದೆ.

ಈ ವಾರದ ಆರಂಭದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli), ತಮ್ಮ ಪತ್ನಿ ಮತ್ತು ನಟಿ ಅನುಷ್ಕಾ ಶರ್ಮಾ (Anushka Sharma) ಅವರೊಂದಿಗೆ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್ (Wimbledon Championships 2025) ವೀಕ್ಷಿಸಲು ಹೋಗಿದ್ದರು. ಸೋಮವಾರ ಸೆಂಟರ್ ಕೋರ್ಟ್‌ನಲ್ಲಿ ನೊವಾಕ್ ಜೊಕೊವಿಕ್ (Novak Djokovic) ಅವರ ಪಂದ್ಯವನ್ನು ಈ ಸೆಲೆಬ್ರಿಟಿ ದಂಪತಿಗಳು ವೀಕ್ಷಿಸುತ್ತಿದ್ದರು. ಅಂದಹಾಗೆ ಪಂದ್ಯವನ್ನು ವೀಕ್ಷಿಸಲು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಾತ್ರ ಬಂದಿರಲಿಲ್ಲ. ನಟಿ ಅವನೀತ್ ಕೌರ್ ಕೂಡ ಅಲ್ಲಿ ಹಾಜರಿದ್ದರು. ಈಗ ಸಾಮಾಜಿಕ ಮಾಧ್ಯಮದಲ್ಲಿ ಇದರ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಕಾಕತಾಳೀಯತೆಯನ್ನು ಕಂಡು ನೆಟ್ಟಿಗರು ಬಹಳಷ್ಟು ಎಂಜಾಯ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿಯ ಹಿಂದೆ ಅವನೀತ್ ಕೌರ್ ಕೂಡ ಅಲ್ಲಿಗೆ ತಲುಪಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಹಾಗಾದ್ರೆ ಏನಿದು ವಿಷ್ಯ ಎಂದು ಮುಂದೆ ನೋಡೋಣ ಬನ್ನಿ...

ಗಂಭೀರವಾಗಿ ಕಾಣಿಸಿಕೊಂಡ ಅನುಷ್ಕಾ-ವಿರಾಟ್
ಕಳೆದ ಸೋಮವಾರ ನೊವಾಕ್ ಜೊಕೊವಿಕ್ ಕೋರ್ಟ್‌ಗೆ ಬಂದಾಗ ವಿರಾಟ್ ಮತ್ತು ಅನುಷ್ಕಾ ಸೆಂಟರ್ ಕೋರ್ಟ್‌ನ ರಾಯಲ್ ಬಾಕ್ಸ್‌ನಲ್ಲಿ ಕುಳಿತಿದ್ದರು. ಈ ಸೆಲೆಬ್ರಿಟಿ ದಂಪತಿಗಳು ಫಾರ್ಮಲ್ ವೇರ್ ಧರಿಸಿ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಈ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತುಂಬಾ ಗಂಭೀರವಾದ ಭಂಗಿಯಲ್ಲಿ ಕಾಣಿಸಿಕೊಂಡಿದ್ದೇ ಈಗ ಬಹಳಷ್ಟು ಮೀಮ್ಸ್‌ ಓಡಾಡಲು ಕಾರಣವಾಗಿದೆ. ಇಂಟರ್ನೆಟ್‌ನಲ್ಲಿ ಸಹ ಜನರು ಈ ಇಡೀ ವಿಷಯವನ್ನು ಅವನೀತ್ ಕೌರ್‌ (Avneet Kaur) ಜೊತೆ ಕನೆಕ್ಟ್ ಮಾಡುತ್ತಿದ್ದಾರೆ.

ಪಂದ್ಯದ ಸಮಯದಲ್ಲಿ ಅವರಿಬ್ಬರೂ ಏಕೆ ಇಷ್ಟೊಂದು ಅಸಮಾಧಾನವಾಗಿ ಕಂಡುಬಂದರು? ಬೇಸರಗೊಂಡಿದ್ದರು? ಎಂದು ಅನೇಕ ಜನರು ಆಶ್ಚರ್ಯಪಡುತ್ತಿದ್ದರು. ಆದರೆ ಈಗ ಇದಕ್ಕೆ ಉತ್ತರವನ್ನು ಅವರೇ ಕಂಡುಕೊಂಡಿದ್ದಾರೆ. ಹಾಗೆಯೇ ಅವರು ಹೀಗಿರಲು ಕಾರಣ ಸಹ ಅವನೀತ್ ಕೌರ್‌ ಎಂದು ಹೇಳಲಾಗುತ್ತಿದೆ. ಮಂಗಳವಾರ ರಾತ್ರಿ ಅವನೀತ್ ಸಹ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಅವರು ಕೋರ್ಟ್‌ನ ಅಂಚಿನಲ್ಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಜೊಕೊವಿಕ್ ಕ್ಲೋಸ್‌ಅಪ್ ಫೋಟೋ ಸೇರಿದಂತೆ ಕೆಲವು ಆಟದ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಆ ಘಟನೆಗೆ ಲಿಂಕ್ ಮಾಡ್ತಿರೊ ಜನರು
ಅನುಷ್ಕಾ ಮತ್ತು ವಿರಾಟ್ ಜೊತೆ ಅವನೀತ್ ಕೂಡ ಸೆಂಟರ್ ಕೋರ್ಟ್‌ನಲ್ಲಿ ಇದ್ದಾಗ ಅವರಿಬ್ಬರೂ ಒಂದೇ ಸ್ಥಳದಲ್ಲಿದ್ದರು ಎಂಬುದನ್ನು ಸಾಮಾಜಿಕ ಮಾಧ್ಯಮ ವೀಕ್ಷಕರು ಬೇಗನೆ ಗಮನಿಸಿದರು. ಇದು ಕೇವಲ ಕಾಕತಾಳೀಯವಾಗಿಯೇ ಇರುತ್ತಿತ್ತು. ಆದರೆ ಈ ಹಿಂದೆ ಅಂದರೆ ವರ್ಷದ ಆರಂಭದಲ್ಲಿ ನಟಿ ಅವನೀತ್‌ ಕೌರ್‌ ಅವರ ಫ್ಯಾನ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ ಚಿತ್ರಕ್ಕೆ ವಿರಾಟ್‌ ಕೊಹ್ಲಿ ಆಕಸ್ಮಿಕವಾಗಿ ಲೈಕ್ ಒತ್ತಿದ್ದರು. ಕೊನೆಗೆ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿ "ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಾಗಿ ನನ್ನ ಲೈಕ್‌ಅನ್ನು ಇರಿಸಿರಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ಊಹೆಗಳನ್ನು ಮಾಡದಂತೆ ನಾನು ವಿನಂತಿಸುತ್ತೇನೆ. ನಿಮ್ಮ ತಿಳುವಳಿಕೆಗೆ ಧನ್ಯವಾದಗಳು" ಎಂದು ಅವರು ಬರೆದುಕೊಂಡಿದ್ದರು. ಇದೀಗ ಅಭಿಮಾನಿಗಳು ಈ ಹಳೆಯ ಘಟನೆಯನ್ನೇ ಈ ಕಾಕತಾಳೀಯಕ್ಕೆ ಲಿಂಕ್ ಮಾಡಿದ್ದಾರೆ.

View post on Instagram

ಹೀಗಿದೆ ಜನರ ಪ್ರತಿಕ್ರಿಯೆ
"ವಿರಾಟ್ ಕೂಡ ಅಲ್ಲಿದ್ದರು...ಇಂಟ್ರೆಸ್ಟಿಂಗ್", "ವಿರಾಟ್ ಅವನೀತ್ ಜೊತೆ ವಿಂಬಲ್ಡನ್‌ನಲ್ಲಿ ಇದ್ದರು, ಆದ್ದರಿಂದ ಅವರು ಗಂಭೀರವಾಗಿದ್ದರು ಎಂಬುದು ಅರ್ಥವಾಗುವಂತಹದ್ದು" "ಅವನೀತ್ ವಿರಾಟ್ ಭಾಯ್ ಅನ್ನು ಫಾಲೋ ಮಾಡುತ್ತಿದ್ದಾಳೆ" ಎಂದು ತಮಾಷೆಯಾಗಿ ಹೇಳಿದ್ದಾರೆ. ವಿರಾಟ್ ತಂಡದ ಸಹ ಆಟಗಾರ ರಿಷಭ್ ಪಂತ್ ಅವರ ಮೇಲಿನ "ಗೀಳಿ"ಗೆ ಹೆಸರುವಾಸಿಯಾದ ಉರ್ವಶಿ ರೌಟೇಲಾ ಇದಕ್ಕೆ ಕಾರಣ ಎಂದು ಅನೇಕ ಜನರು ಕಾಲೆಳಿದಿದ್ದಾರೆ. "ಬಹುಶಃ ಇದು ಅನುಷ್ಕಾ ಅವರ ಆತಂಕಕ್ಕೆ ಕಾರಣವಾಗಿರಬಹುದು", "ಇದಕ್ಕಾಗಿಯೇ ಅನುಷ್ಕಾ ತುಂಬಾ ಚಿಂತಕ್ರಾಂತರಾಗಿ ಕಾಣುತ್ತಿದ್ದಾರೆ" "ಅವನೀತ್ ಅನುಷ್ಕಾ ಅವರ ಉದ್ವೇಗವನ್ನು ಹೆಚ್ಚಿಸಲು ಬಂದಿದ್ದರು" ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಯಾರು ಈ ಅವನೀತ್ ಕೌರ್?
ಅವನೀತ್ ತನ್ನ 8 ನೇ ವಯಸ್ಸಿನಲ್ಲಿ ಜೀ ಟಿವಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟಲ್ ಮಾಸ್ಟರ್ಸ್ ನೃತ್ಯ ಕಾರ್ಯಕ್ರಮದೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. 2012 ರಲ್ಲಿ 'ಮೇರಿ ಮಾ' ನೊಂದಿಗೆ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಾಲನಟಿಯಾಗಿ, ಅವರು 'ಸಾವಿತ್ರಿ - ಏಕ್ ಪ್ರೇಮ್ ಕಹಾನಿ', 'ಏಕ್ ಮುತ್ತಿ ಆಸ್ಮಾನ್', 'ಚಂದ್ರ ನಂದಿನಿ' ಮತ್ತು 'ಅಲ್ಲಾದ್ದೀನ್ - ನಾಮ್ ತೋ ಸುನಾ ಹೋಗಾ' ನಂತಹ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. 2014 ರಲ್ಲಿ ಅವನೀತ್ ರಾಣಿ ಮುಖರ್ಜಿಯವರ 'ಮರ್ದಾನಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2023 ರಲ್ಲಿ ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ 'ಟಿಕು ವೆಡ್ಸ್ ಶೇರು' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.