Anupama Parameswaran: ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಅವರ ವೈಯಕ್ತಿಕ ಜೀವನವೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಅವರ ವೈಯಕ್ತಿಕ ಜೀವನವೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬ್ರೇಕಪ್‌, ಮಾನಸಿಕ ನೆಮ್ಮದಿ ಹಾಗೂ ವಿಷಕಾರಿ ಸಂಬಂಧದ ಕುರಿತು ಅವರು ಮಾಡಿದ್ದ ಪೋಸ್ಟ್‌ಗಳು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದವು. ಇದೀಗ ಪಾಡ್‌ಕಾಸ್ಟ್‌ವೊಂದರಲ್ಲಿ ತಮ್ಮ ಹಿಂದಿನ ಸಂಬಂಧದ ಬಗ್ಗೆ ಅನುಪಮಾ ಮೊದಲ ಬಾರಿಗೆ ಸುದೀರ್ಘವಾಗಿ ಮಾತನಾಡಿದ್ದು, ಅವರ ಹೇಳಿಕೆಗಳು ಸದ್ದು ಮಾಡುತ್ತಿವೆ.

ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅನುಪಮಾ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಈ ನಡುವೆ ಅವರ ಪ್ರೀತಿ ಮತ್ತು ಬ್ರೇಕಪ್‌ ಕುರಿತು ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇದ್ದಕ್ಕಿದ್ದಂತೆ ಅನುಪಮಾ ಮಾನಸಿಕ ನೆಮ್ಮದಿ ಮತ್ತು ಅನಗತ್ಯ ಸಂಬಂಧಗಳಿಂದ ದೂರ ಉಳಿಯುವ ಕುರಿತು ಪೋಸ್ಟ್‌ ಮಾಡಿದ್ದು ಅಭಿಮಾನಿಗಳ ಗಮನ ಸೆಳೆದಿತ್ತು. ಇದೀಗ ಆ ಪೋಸ್ಟ್‌ ಹಿಂದಿನ ಕಾರಣವನ್ನು ಅನುಪಮಾ ಸ್ವತಃ ಬಹಿರಂಗಪಡಿಸಿದ್ದಾರೆ.

“ಎರಡು ವರ್ಷ ನಾರ್ಸಿಸಿಸ್ಟಿಕ್ ಅಬ್ಯೂಸ್‌ ಅನುಭವಿಸಿದೆ!”

ತಮ್ಮ ಜೀವನದ ಅತ್ಯಂತ ಕಠಿಣ ಅವಧಿಯ ಬಗ್ಗೆ ಮಾತನಾಡಿದ ಅನುಪಮಾ, ಸುಮಾರು ಎರಡು ವರ್ಷಗಳ ಕಾಲ ತಾವು ನಾರ್ಸಿಸಿಸ್ಟಿಕ್ ಅಬ್ಯೂಸ್‌ ಎದುರಿಸಿದ್ದಾಗಿ ಹೇಳಿದ್ದಾರೆ. “ನಾನು ಎರಡು ವರ್ಷಗಳ ಕಾಲ ನಾರ್ಸಿಸಿಸ್ಟಿಕ್ ಅಬ್ಯೂಸ್‌ ಅನುಭವಿಸಿದೆ. ಆ ಸಮಯದಲ್ಲಿ ಮಾನಸಿಕವಾಗಿ ಮಾತ್ರವಲ್ಲ, ದೈಹಿಕವಾಗಿಯೂ ಸಾಕಷ್ಟು ನೋವು ಅನುಭವಿಸಿದ್ದೆ. ಆ ವ್ಯಕ್ತಿಯ ಹೆಸರನ್ನು ನಾನು ಬಹಿರಂಗಪಡಿಸಲು ಬಯಸುವುದಿಲ್ಲ. ಆದರೆ ನಾನು ಅನುಭವಿಸಿದ ನೋವು ತುಂಬಾ ಕಠಿಣವಾಗಿತ್ತು” ಎಂದು ಅವರು ಹೇಳಿದ್ದಾರೆ. ತಮ್ಮ ಮಾತುಗಳನ್ನು ಕೇಳಿದಾಗ ಈ ರೀತಿಯ ಸಂಬಂಧವನ್ನು ಎದುರಿಸುತ್ತಿರುವವರಿಗೆ ತಮ್ಮ ಅನುಭವ ಅರ್ಥವಾಗಬಹುದು ಎಂದಿರುವ ಅನುಪಮಾ, ಇಂತಹ ಪರಿಸ್ಥಿತಿಯನ್ನು ಗುರುತಿಸದೇ ಇರುವವರೇ ಹೆಚ್ಚು ಅಪಾಯದಲ್ಲಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಮೊದಲು ಪ್ರೀತಿ… ಮರುದಿನವೇ ಸಂಪೂರ್ಣ ನಿರ್ಲಕ್ಷ್ಯ!”

ಆ ಸಂಬಂಧದ ಸ್ವರೂಪವನ್ನು ವಿವರಿಸಿದ ಅನುಪಮಾ, ಆರಂಭದಲ್ಲಿ ಆ ವ್ಯಕ್ತಿ ತಮ್ಮ ಮೇಲೆ ಅಪಾರ ಪ್ರೀತಿ ತೋರಿಸುತ್ತಿದ್ದ ಎಂದು ಹೇಳಿದ್ದಾರೆ. “ಆ ವ್ಯಕ್ತಿ ನನ್ನ ಜೀವನದಲ್ಲಿ ಸಿಕ್ಕಿದ್ದು ನಿಜವೇ? ಇದು ಕನಸೇನೋ ಎಂದು ಅನಿಸುವಷ್ಟು ಪ್ರೀತಿ ತೋರಿಸುತ್ತಿದ್ದರು. ಆದರೆ ಮರುದಿನವೇ ಸಂಪೂರ್ಣ ಬದಲಾಗುತ್ತಿದ್ದರು. ಯಾವುದೇ ಕಾಳಜಿ ಇಲ್ಲದಂತೆ, ತೀವ್ರ ನಿರ್ಲಕ್ಷ್ಯ ತೋರಿಸುತ್ತಿದ್ದರು. ನಂತರ ಮತ್ತೆ ಪಶ್ಚಾತ್ತಾಪಪಟ್ಟು ಮಗುವಿನಂತೆ ಅಳುತ್ತಾ, ಕ್ಷಮೆ ಕೇಳಿ, ಮುಂದೆ ಹೀಗೆ ಮಾಡುವುದಿಲ್ಲ ಎಂದು ಭರವಸೆ ನೀಡುತ್ತಿದ್ದರು. ಮತ್ತೆ ಅದೇ ರೀತಿಯ ಪ್ರೀತಿ ತೋರಿಸಿ, ಕೆಲವೇ ದಿನಗಳಲ್ಲಿ ಮತ್ತೆ ಅದೇ ವರ್ತನೆ ಶುರುವಾಗುತ್ತಿತ್ತು” ಎಂದು ಅನುಪಮಾ ವಿವರಿಸಿದ್ದಾರೆ.

“3 ತಿಂಗಳಲ್ಲೇ ಮದುವೆ ಮಾತು; ನನ್ನ ವೃತ್ತಿಯನ್ನೇ ಬಿಡಿಸಲು ಪ್ರಯತ್ನ!”

ತಮ್ಮ ಸಂಬಂಧದ ಮತ್ತೊಂದು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ ಅನುಪಮಾ, ಕೇವಲ ಮೂರು ತಿಂಗಳ ಪರಿಚಯದಲ್ಲೇ ನಿಶ್ಚಿತಾರ್ಥ ಹಾಗೂ ಡೆಸ್ಟಿನೇಶನ್‌ ವೆಡ್ಡಿಂಗ್‌ ಬಗ್ಗೆ ಚರ್ಚೆಯಾಗಿತ್ತು ಎಂದು ಹೇಳಿದ್ದಾರೆ. ಆದರೆ ಕ್ರಮೇಣ ಆ ವ್ಯಕ್ತಿಯ ಉದ್ದೇಶ ತಮ್ಮನ್ನು ವೃತ್ತಿಯಿಂದ ದೂರ ಮಾಡಿ ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿದೆ ಎಂಬುದು ಅರ್ಥವಾಯಿತು ಎಂದು ಅವರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ನಿಶ್ಚಿತಾರ್ಥವನ್ನು ಪದೇಪದೇ ಮುಂದೂಡುತ್ತಾ ಬಂದಿದ್ದಾಗಿ ಹೇಳಿದ್ದಾರೆ. “ಆ ಒತ್ತಡದಿಂದ ಹೊರಬರಲು ನಾನು ಔಷಧಿಗಳನ್ನೂ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ನನ್ನ ವೃತ್ತಿಜೀವನದ ದೊಡ್ಡ ಹಿಟ್‌ಗಳಲ್ಲಿ ಒಂದಾದ ‘ಡ್ರ್ಯಾಗನ್‌’ ಸಿನಿಮಾದ ಪ್ರಮೋಷನ್‌ಗಳನ್ನೂ ಸರಿಯಾಗಿ ಮಾಡಲು ಸಾಧ್ಯವಾಗಲಿಲ್ಲ” ಎಂದು ಅನುಪಮಾ ಹೇಳಿದ್ದಾರೆ.

“ಮದುವೆಯಾಗಿದ್ದರೆ ಖಂಡಿತಾ ವಿಚ್ಛೇದನ ಪಡೆಯುತ್ತಿದ್ದೆ!”

ತಮ್ಮ ಜೀವನದ ಆ ಹಂತವನ್ನು ನೆನಪಿಸಿಕೊಂಡ ಅನುಪಮಾ, ಒಂದು ವೇಳೆ ಆ ವ್ಯಕ್ತಿಯನ್ನು ಮದುವೆಯಾಗಿದ್ದರೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗುತ್ತಿತ್ತು ಎಂದು ಹೇಳಿದ್ದಾರೆ. “ನಾನು ಆ ವ್ಯಕ್ತಿಯನ್ನು ಮದುವೆಯಾಗಿದ್ದರೆ ಖಂಡಿತವಾಗಿಯೂ ವಿಚ್ಛೇದನ ಪಡೆಯುತ್ತಿದ್ದೆ” ಎಂದು ಅನುಪಮಾ ನೇರವಾಗಿ ಹೇಳಿದ್ದಾರೆ. ಸದ್ಯ ಆ ಕಠಿಣ ಹಂತದಿಂದ ಸಂಪೂರ್ಣವಾಗಿ ಹೊರಬಂದಿರುವುದಾಗಿ ತಿಳಿಸಿರುವ ಅವರು, ತಮ್ಮ ಜೀವನದಲ್ಲಿ ಮತ್ತೆ ಸಂತೋಷ ಮತ್ತು ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಅನುಪಮಾ ತಮ್ಮ ಹಿಂದಿನ ಸಂಬಂಧದ ಬಗ್ಗೆ ಮಾಡಿರುವ ಈ ಮುಕ್ತ ಮಾತುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಅಭಿಮಾನಿಗಳು ಅವರ ಧೈರ್ಯವನ್ನು ಮೆಚ್ಚುತ್ತಿದ್ದಾರೆ.