Asianet Suvarna News Asianet Suvarna News

ಅನ ಸುಬ್ಬರಾಯರ ಕಲಾಮಂದಿರಕ್ಕೆ ಶತಕದ ಸಂಭ್ರಮ!

ಕನ್ನಡ ನಾಡು ಲಲಿತ ಕಲೆಗಳ ಬೀಡು. ಕಲಾವಿದರ ನೆಲೆವೀಡು. ಈ ನಾಡಿನ ಪ್ರತಿಯೊಂದು ಕಲೆಗೂ ಅದರದ್ದೇ ಆದ ವಿಶೇಷತೆ-ಭಿನ್ನತೆಯುಂಟು. ಸರ್ವ ಪ್ರಕಾರದಲ್ಲೂ ಶ್ರೇಷ್ಠತೆಯ ಗಮ್ಯ ಮುಟ್ಟಿದ, ಸಾಧನೆಯ ಶಿಖರವೇರಿದ ಕಲಾವಿದರ ದೊಡ್ಡ ಪಡೆ ಕರುನಾಡಿನ ಹಿರಿಮೆ.

Anna Subbarayara Kalamandira School of Arts completes centenary
Author
Bangalore, First Published Aug 24, 2019, 11:20 AM IST

ಅಕ್ಷರ

ಕಲೆ ಜೀವನವನ್ನು ಸುಂದರಗೊಳಿಸುತ್ತದೆ ಎಂಬ ಮಾತೆಷ್ಟುಸತ್ಯವೋ, ಕಲೆ ಜೀವನ ರೂಪಿಸುವ ಸಾಧನವೂ ಹೌದು. ಕಲೆ ಸರ್ವಾಂತರ್ಯಾಮಿ. ಎಲ್ಲರನ್ನು ಕೈಬೀಸಿ ಕರೆದರೂ ಕೆಲವರನ್ನು ಮಾತ್ರ ಆಯ್ದುಕೊಳ್ಳುತ್ತದೆ. ಅಪ್ಪಿ ಮುದ್ದಾಡುತ್ತದೆ. ಅಂತಹ ಕಲೆಯನ್ನು ನಂಬಿ ಬದುಕುವುದು ಒಂದು ವಿಧಾನವಾದರೆ, ಕಲೆಯನ್ನು ಹಂಚಿ ಬದುಕುವುದು ಮತ್ತೊಂದು ಪ್ರಧಾನ ವಿಧಾನ. ಈ ಎರಡನೇ ವರ್ಗಕ್ಕೆ ಸೇರಿದ ಮಹನೀಯರಲ್ಲಿ ಕಲಾಮಂದಿರದ ಅ.ನ.ಸುಬ್ಬರಾಯರು ಪ್ರಮುಖರು. ಕಲಾಮಂದಿರ ಮತ್ತು ಅ.ನ.ಸುಬ್ಬರಾಯರು ಒಂದೇ ನಾಣ್ಯದ ಎರಡು ಮುಖಗಳು.

ಅಂತರ್ಗತವಾದ ಕಲೆ, ಅಮೂರ್ತವಾಗಿರುವ ಕಲಾಸಕ್ತಿಗೆ ಸಮರ್ಪಕ ದಿಕ್ಕುದೆಸೆ ದೊರೆತಾಗ ಕಲೆಯ ನೈಜ ಅನಾವರಣವಾಗುವುದು ನಿಶ್ಚಿತ. ಇಂತಹದೊಂದು ಅನಾವರಣಕ್ಕೆ ವೇದಿಕೆ-ತರಬೇತಿ-ಶಾಸ್ತ್ರೀಯ ಕಲಿಕೆ ಅತ್ಯವಶ್ಯ. ಅ.ನ.ಸುಬ್ಬರಾಯರು ಕರ್ನಾಟಕದಲ್ಲಿ ಅಂತಹ ವೇದಿಕೆಯನ್ನು ಸೃಷ್ಟಿಸಿದ ಮಹೀಮರು.

ಅಖಂಡ ಭಾರತದಲ್ಲೇ ಚಿತ್ರಕಲೆಯ ಕಲಿಕೆಗಾಗಿ ಮೊಟ್ಟಮೊದಲ ಕಲಾ ಶಾಲೆ ತೆರೆದ ಕೀರ್ತಿ ಅ.ನ.ಸುಬ್ಬರಾಯರದು. 1919 ರಲ್ಲಿ ಅ.ನ.ಸುಬ್ಬರಾಯರು ಸ್ಥಾಪಿಸಿದ ‘ಕಲಾಮಂದಿರ’ ಕಲಾವಿದರ ಪಾಲಿಗೆ ಸದಾ ಮಂದಿರವೇ. ರವೀಂದ್ರನಾಥ್‌ ಟ್ಯಾಗೂರ್‌ ಅವರು ಅದೇ ಸಮಯದಲ್ಲಿ ಶಾಂತಿನಿಕೇತನ ಕಲಾ ಶಾಲೆಯನ್ನು ತೆರೆದರೆಂಬುದು ವಿಶೇಷ. ಒಂದೇ ಕಾಲದಲ್ಲಿ ಉತ್ತರದಲ್ಲೂ ದಕ್ಷಿಣದಲ್ಲೂ ಏಕಕಾಲಕ್ಕೆ ಕಲಾಶಾಲೆಗಳು ತಲೆಯೆತ್ತಿದ್ದು ಇತಿಹಾಸದ ಹೊಸ ಮಗ್ಗಲುಗಳೆಂದರೆ ತಪ್ಪಾಗಲಾರದು.

ದಶಕಗಳ ಹಾದಿ ಪೂರೈಸಿದ ಕಲಾಕದಂಬ!

ಮಂಡ್ಯ ಜಿಲ್ಲೆ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದ ಸುಬ್ಬರಾಯರು ವಾರಾನ್ನದ ಆಸರೆಯಲ್ಲಿ ಅಕ್ಷರದ ಬೆಳಕು ಕಂಡವರು. ನಾಗಮಂಗಲದಲ್ಲಿ ಪ್ರಾಥಮಿಕ ಶಿಕ್ಷಣದ ವ್ಯಾಸಂಗ ಮಾಡುವಾಗಲೇ ಸುತ್ತಮುತ್ತಲಿದ್ದ ಹೊಯ್ಸಳ ಶೈಲಿಯ ದೇವಾಲಯಗಳ ಕಂಡು ಕಲಾವಿದನಾಗುವ ಕನಸು ಕಂಡವರು. ಮೈಸೂರಿನಲ್ಲಿ ಪ್ರೌಢಶಿಕ್ಷಣ ಮುಗಿಸಿ ಜಯಚಾಮರಾಜೇಂದ್ರ ಟೆಕ್ನಿಕಲ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಡಿಪ್ಲೊಮಾ ಪೂರೈಸಿ ಬೆಂಗಳೂರಿನ ಬಿಷಪ್‌ ಕಾಟನ್‌ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ಸುಬ್ಬರಾಯರಿಗೆ ಆ ವೃತ್ತಿಯೇಕೋ ಬೇಸರವೆನಿಸಿದ್ದು, ಕರ್ನಾಟಕದಲ್ಲಿ ಹೊಸ ಕಲಾಚರಿತ್ರೆಗೆ ನಾಂದಿ ಹಾಡಿದ್ದು ಸೋಜಿಗ.

ಸರ್‌.ಎಂ.ವಿಶ್ವೇಶ್ವರಯ್ಯ ಅವರ ಸಲಹೆ ಮೇರೆಗೆ ಸ್ವಂತದ್ದೊಂದು ಕಲಾ ಶಾಲೆ ತೆರೆಯುವ ಮನಸ್ಸು ಮಾಡಿದ್ದು ಚಾರಿತ್ರಿಕ ಘಟನೆ. ಅದರ ಸತ್ಫಲವೇ 1919ರಲ್ಲಿ ಕಲಾಮಂದಿರದ ಸ್ಥಾಪನೆ. ಸೈಕಲ್‌ನಲ್ಲೇ ಬೆಂಗಳೂರಿನ ಮೂಲೆಮೂಲೆಗೆ ಸಂಚರಿಸಿ ಆಪ್ತೇಷ್ಠರಲ್ಲಿ ಕಲಾಸಕ್ತಿ ಮೂಡಿಸಿ ಸೈಕಲ್‌ ಸುಬ್ಬರಾಯರೆಂದೇ ಜನಜನಿತರಾಗಿದ್ದ ಅ.ನ.ಸು ಹಂತಹಂತವಾಗಿ ಕಲಾಮಂದಿರವನ್ನು ಬೆಳೆಸಿದ ಪರಿ ನಿಜಕ್ಕೂ ಮಾದರಿ.

ಹೊಸ ತಲೆಮಾರಿಗೆ ಚಿತ್ರಕಲೆಯ ಗಂಧ ಹಚ್ಚುವ ಕಾರ್ಯದಲ್ಲಿ ತಲ್ಲೀನವಾದ ಕಲಾಮಂದಿರ ವರ್ಷದಿಂದ ವರ್ಷಕ್ಕೆ, ದಶಕದಿಂದ ದಶಕಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕರ್ನಾಟಕದ ಕಲಾವಲಯದಲ್ಲಿ ಮೇರು ಸಂಸ್ಥೆಯಾಗಿ ರೂಪುಗೊಳ್ಳುವಲ್ಲಿನ ಹಿಂದಿರುವ ಅ.ನ.ಸುಬ್ಬರಾಯರ ಶ್ರಮ-ತ್ಯಾಗ-ಪ್ರತಿಭೆ-ದೂರದರ್ಶಿತ್ವ-ಕಾರ್ಯತತ್ಪರತೆ ಅಪಾರ.

ಕಲಾಪ್ರದರ್ಶನ

ಕಲಾಸಕ್ತ ವಿದ್ಯಾರ್ಥಿಗಳಿಗೆ ದೃಶ್ಯಕಲೆಯ ತರಬೇತಿ ನೀಡುತ್ತಲೇ ಕಲಾಪ್ರದರ್ಶನಗಳಿಗೆ ವೇದಿಕೆಯಾಗಿದ್ದು ಕಲಾಮಂದಿರದ ಹೆಗ್ಗಳಿಕೆ. 1921ರಲ್ಲಿ ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಅಖಿಲ ಭಾರತ ಚಿತ್ರಕಲಾ, ಛಾಯಾಚಿತ್ರ ಮತ್ತು ಕರಕುಶಲ ಪ್ರದರ್ಶನ ಏರ್ಪಡಿಸಿದ್ದು ಸ್ಥಳೀಯ ಕಲಾವಿದರು-ಕಲೆಗೆ ದೊರೆತ ಬಹುದೊಡ್ಡ ಪುಷ್ಠಿ. ಅನಂತರ ಮತ್ತೆ 1927 ಮತ್ತು 29 ರಲ್ಲೂ ಸಹ ಅಖಿಲ ಭಾರತ ಮಟ್ಟದ ಚಿತ್ರಕಲಾ ಪ್ರದರ್ಶನ ನಡೆಯಿತೆಂಬುದು ಹೆಮ್ಮೆಯ ವಿಚಾರ. ಮೊದಲ ಪ್ರದರ್ಶನವನ್ನು ಮೈಸೂರು ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌, ಎರಡನೇ ಪ್ರದರ್ಶನವನ್ನು ನೇಪಾಳದ ಮಹಾರಾಜ ಜೈ ಬಹದ್ದೂರ್‌ ಸಿಂಗ್‌ ಹಾಗೂ ತೃತೀಯ ಕಲಾ ಪ್ರದರ್ಶನವನ್ನು ಹೈದರಾಬಾದ್‌ ಮಹಾರಾಣಿ ದುರೇಶಾ ಅವರು ಉದ್ಘಾಟಿಸಿದ್ದು ಕಲಾಮಂದಿರದ ಘನತೆಗೆ ಹಿಡಿದ ಕೈಗನ್ನಡಿಯೇ ಸರಿ.

ಆರನೇ ವಸಂತಕ್ಕೆ ಪ್ರವರ ಆರ್ಟ್‌ ಸ್ಟುಡಿಯೋ!

1934ರಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರೊಡಗೂಡಿ ಸುಬ್ಬರಾಯರು ಏರ್ಪಡಿಸಿದ್ದ ಖಾದಿ ಕಲಾ ಪ್ರದರ್ಶನಕ್ಕೆ ಮಹಾತ್ಮಾಗಾಂಧಿ ಮತ್ತು ಅನಿ ಬೆಸೆಂಟ್‌ ಅವರು ಭೇಟಿ ಕೊಟ್ಟಿದ್ದರೆಂಬುದು ಕಲಾಮಂದಿರ ಸಾಕ್ಷಿಯಾದ ಅವಿಸ್ಮರಣೀಯ ಕ್ಷಣಗಳಲ್ಲೊಂದು.

ಚರ್ಚಾ ಸ್ಥಳ..!

ಸ್ವಾತಂತ್ರ್ಯ ಹೋರಟದ ರೂಪುರೇಷೆಗಳ ಚರ್ಚೆಗೆ ಕಲಾಮಂದಿರ ವೇದಿಕೆಯಾಗಿತ್ತೆಂಬುದು ಐತಿಹಾಸಿಕ ಸಂಗತಿ. ಸಮಕಾಲೀನ ರಾಜಕೀಯ-ಸಾಮಾಜಿಕ ಬಿಕ್ಕಟ್ಟುಗಳಿಗೆ ಸಂಬಂಧಿಸಿದ ಚರ್ಚೆ-ಸಂವಾದಗಳು ಕಲಾಮಂದಿರದಲ್ಲಿ ನಡೆಯುತ್ತಿದ್ದವು. ಹಗಲಿನಲ್ಲಿ ವಿಚಾರ ಮಂಥನವಾದರೆ, ಸಂಜೆಯ ನಂತರ ಸಾಹಿತ್ಯ-ಸಂಸ್ಕೃತಿ-ಕಾವ್ಯ ಸಿಂಚನ.

ಕಲಾಪತ್ರಿಕೆ

ಕನ್ನಡದಲ್ಲಿ ಕಲೆಗೆ ಸಂಬಂಧಿಸಿದ ಅದರಲ್ಲೂ ಚಿತ್ರಕಲೆ ಕುರಿತ ಪತ್ರಿಕೆ ಆರಂಭಿಸಿದ ಕೀರ್ತಿಯೂ ಅ.ನ.ಸುಬ್ಬರಾಯರಿಗೇ ಸಲ್ಲಬೇಕು. 1930ರಲ್ಲಿ ಅವರು ಆರಂಭಿಸಿದ ‘ಕಲಾ’ ಪತ್ರಿಕೆಯು ಕಲೆಯ ವಿವಿಧ ವಿಚಾರಗಳ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿರುವುದು ನಿಜ. ಮೂರು ವರ್ಷಗಳ ಕಾಲ ಹೊರಬಂದ ‘ಕಲಾ’ ಪತ್ರಿಕೆಯಲ್ಲಿ ಸುಬ್ಬರಾಯರು ಬರೆದ ಹಲವು ಲೇಖನಗಳು ಕಲಾ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವುದು ವಿಶೇಷ.

ರಂಗನಂಟು

ಕಲಾಮಂದಿರದ ಚಟುವಟಿಕೆಗಳು ರಂಗಭೂಮಿಗೆ ವಿಸ್ತಾರಗೊಂಡಿದ್ದರಿಂದ ಈ ಕಲಾ ಶಾಲೆಗೂ ರಂಗಭೂಮಿಗೂ ಅವಿನಾಭಾವ ನಂಟು ಕುದುರಿದೆ. ವೃತ್ತಿ ರಂಗಭೂಮಿಯ ದಿಗ್ಗಜರೆನಿಸಿರುವ ಗುಬ್ಬಿ ವೀರಣ್ಣ, ಪೀರ್‌ ಸಾಹೇಬರು, ಬಳ್ಳಾರಿಯ ರಾಘವಾಚಾರ್‌, ತೀತಾಶರ್ಮಾ ಮತ್ತಿತರೆ ಕಲಾವಿದರು ಕಲಾಮಂದಿರದ ಚಟುವಟಿಕೆಗಳ ಭಾಗವಾಗಿದ್ದರೆಂಬುದು ಬಲು ವಿಶೇಷ. ಆಕಾಶಾವಾಣಿಯ ಈರಣ್ಣರೆಂದೇ ಹೆಸರುವಾಸಿಯಾದ ಎ.ಎಸ್‌.ಮೂರ್ತಿ ಅವರಿಂದಾಗಿ ಕಲಾಮಂದಿರ ರಂಗಭೂಮಿಯ ಮಂದಿರವೂ ಆಗಿದ್ದು ಹೆಗ್ಗಳಿಕೆಯೇ ಸರಿ.

ಎ.ಎಸ್‌.ಮೂರ್ತಿ ಅವರ ಒತ್ತಾಸೆಯ ಫಲವಾಗಿ ಆರಂಭವಾದ ‘ಅಭಿನಯ ತರಂಗ’ ಶಾಲೆ ನೂರಾರು ಪ್ರತಿಭೆಗಳನ್ನು ರಂಗಭೂಮಿಗೆ ಸಮರ್ಪಿಸಿರುವುದು ರಂಗಾಭಿವೃದ್ಧಿಗೆ ನೀಡಿದ ಅಪೂರ್ವ ಕಾಣಿಕೆಯಾಗಿದೆ. ಪ್ರತೀ ದಿನ ಸಂಜೆ ‘ಅಭಿನಯ ತರಂಗ’ ದಲ್ಲಿ ನಡೆವ ಅಭಿನಯದ ವಿವಿಧ ಪ್ರಕಾರಗಳ ಕುರಿತ ಶಾಸ್ತ್ರೀಯ ತರಬೇತಿ ನೀಡಲಾಗುತ್ತಿದೆ.

ಪೀಳಿಗೆಯಿಂದ ಪೀಳಿಗೆ

ಅ.ನ.ಸುಬ್ಬರಾಯರ ಮಾರ್ಗದರ್ಶನ-ದೂರದೃಷ್ಟಿಯಲ್ಲಿ ಮೈದಳೆದ ಕಲಾಮಂದಿರ ಅವರ ಕಾಲಾನಂತರವೂ ಸಕ್ರಿಯವಾಗಿರುವಲ್ಲಿ, ಕಲಾ ಚಟುವಟಿಕೆಗಳ ಕೇಂದ್ರವಾಗಿರುವಲ್ಲಿ ದಿವಂಗತ ಎ.ಎಸ್‌.ಮೂರ್ತಿ ಹಾಗೂ ಹಾಲಿ ಪ್ರಾಂಶುಪಾಲರಾದ ಕಲಾವಿದ ಎ.ಎಂ. ಪ್ರಕಾಶ್‌ ಅವರ ಕೊಡುಗೆ ನಿಜಕ್ಕೂ ಆದರಣೀಯವೇ. ಕಲಾ ತರಬೇತಿ, ಕಲಾ ಪ್ರದರ್ಶನ, ಕಲಾ ವಿಚಾರ ಸಂಕಿರಣ, ಕಲಾ ಸಂವಾದಗಳಿಂದ ಕಳೆಗಟ್ಟುತ್ತಾ ಅರಳಿದ ಕಲಾಮಂದಿರದ ಚಟುವಟಿಕೆಗಳು ಕನ್ನಡದ ಸಾರಸ್ವತಲೋಕದ ದಿಗ್ಗಜರಾದ ಗೋಪಾಲಕೃಷ್ಣ ಅಡಿಗರು, ಶಿವರಾಮಕಾರಂತ, ಚಂದ್ರಶೇಖರ ಕಂಬಾರರು, ಗಿರೀಶ್‌ ಕಾರ್ನಾಡ್‌, ಪಿ.ಲಂಕೇಶ್‌, ಅ.ನ.ಕೃ, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌, ಡಿ.ವಿ.ಗುಂಡಪ್ಪ, ವಿ.ಕೃ.ಗೋಕಾಕ್‌ ಮುಂತಾದವರ ಪಾಲ್ಗೊಳ್ಳುವಿಕೆಯಿಂದ ಸಂಪನ್ನಗೊಂಡಿದೆ, ಸಾರ್ಥಕತೆಯ ಸಾಫಲ್ಯವನ್ನು ಪಡೆದಿದೆ.

ಕಾಲದೊಂದಿಗೆ ಹೆಜ್ಜೆ

ಕಾಲದ ಜೊತೆಜೊತೆಗೆ ಹೆಜ್ಜೆಯಿರಿಸುತ್ತ ಬೆಳೆದ ಕಲಾಮಂದಿರ ವರ್ತಮಾನದ ಅಗತ್ಯಗಳಿಗನುಗುಣವಾಗಿ ನವ್ಯ ಪಠ್ಯಕ್ರಮವನ್ನು ಅಳವಡಿಸಿಕೊಂಡಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದೊಂದಿಗೆ ಸಂಲಗ್ನಗೊಂಡು ಪೂರ್ಣಾವಧಿಯ ಪದವಿ ಶಿಕ್ಷಣವನ್ನು ನೀಡುತ್ತಿರುವುದು ವಿಶೇಷ.

ಶತಮಾನದ ಸಂಭ್ರಮ

ಕರ್ನಾಟಕದ ಕಲಾ ಚರಿತ್ರೆಯಲ್ಲಿ ಘನ ಇತಿಹಾಸ ಹೊಂದಿರುವ ಕಲಾಮಂದಿರಕ್ಕೀಗ ಶತಮಾನದ ಸಂಭ್ರಮ. ಕಲಾ ಶಾಲೆಯೊಂದು ನೂರು ವರ್ಷಗಳ ನಿರಂತರ ಚಲನೆ-ಕ್ರಿಯಾಶೀಲತೆಯನ್ನು ಹೊಂದಿರುವುದು ಈ ಕಾಲಘಟ್ಟದ ಮಟ್ಟಿಗೆ ಬಹುದೊಡ್ಡ ವಿಸ್ಮಯವೇ ಆಗಿದೆ. 1919ರ ಆಗಸ್ಟ್‌ನಲ್ಲಿ ಆರಂಭಗೊಂಡ ಕಲಾಮಂದಿರ ಇದೀಗ ನೂರರ ಗಡಿದಾಟಿ ಮುನ್ನಡೆದಿದ್ದು ಕಲಾಮಂದಿರದ ಶತಮಾನೋತ್ಸವದ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಆಗಸ್ಟ್‌ 24 ಮತ್ತು 25 ರಂದು ಕಲಾಮಂದಿರದ ಶತಮಾನೋತ್ಸವ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ರಾಜ್ಯದ ಹಿರಿಯ ಕಲಾವಿದರ ಕಲಾ ಶಿಬಿರವೂ ಜರುಗಲಿದೆ.

ಶತಮಾನದ ಹೆಜೆ ್ಜಗುರುತುಗಳನ್ನು ದಾಖಲಿಸುವ ಪುಸ್ತಕಗಳ ಬಿಡುಗಡೆ ಮತ್ತಿತರೆ ವರ್ಣರಂಜಿತ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು ಕಲಾಮಂದಿರದ ಶತಕಕ್ಕೆ ಹೊನ್ನಗರಿ ಮುಡಿಸಲಿವೆ. ಅದೇನೇ ಇರಲಿ, ಕಲಾ ಶಾಲೆಯೊಂದು ನೂರು ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವುದು ಕರುನಾಡಿಗೆ ಮಾತ್ರವಲ್ಲ, ಇಡೀ ದೇಶವೇ ಬೀಗುವಂತಹ ಸಾಧನೆಯೆಂಬುದು ಅತಿಗರ್ವದ ಸಂಗತಿಯೇ ಸರಿ.

 

*********

ಮೈಲುಗಲ್ಲುಗಳು

1919 : ಅ.ನ.ಸುಬ್ಬರಾಯರಿಂದ ಕಲಾಮಂದಿರ ಸ್ಥಾಪನೆ, ಸರ್‌.ಎಂ.ವಿಶ್ವೇಶ್ವರಯ್ಯ ಪ್ರೇರಣೆ

1921 : ರಾಷ್ಟ್ರೀಯ ಚಿತ್ರಕಲಾ, ಕರಕುಶಲ ವಸ್ತುಗಳ ಪ್ರದರ್ಶನ

1927 : ದ್ವಿತೀಯ ರಾಷ್ಟ್ರೀಯ ಚಿತ್ರಕಲಾ, ಕರಕುಶಲ ಪ್ರದರ್ಶನ

1929-30 : ಕಲೆಗೆ ಸಂಬಂಧಿಸಿದ ‘ಕಲಾ’ ಮಾಸಿಕ ಪತ್ರಿಕೆಗಳ ಪ್ರಕಟಣೆ

1930 : ಚಿತ್ರಕಲಾ ಡಿಪ್ಲೊಮಾದೊಂದಿಗೆ ಛಾಯಾಚಿತ್ರಣದ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ, ಫೋಟೋ ಸ್ಟುಡಿಯೋ ಆರಂಭ.

1932 : ತೃತೀಯ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ

1934 : ಖಾದಿ ವಸ್ತುಗಳ ಪ್ರದರ್ಶನ

1942 : ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರಪ್ರಥಮ ರಂಗಭೂಮಿ ಸಮ್ಮೇಳನ.

1945 : ದೇಶೀ ಚಿಂತನೆಯ ಫೋಟೋ ಫ್ರೆಂಯಂತ್ರ ತಯಾರಿಕೆ.

1945 : ಬಾಟಿಕ್‌ ಕಲೆ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ, ಕಲಾಸಾಧ್ಯತೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ.

1969 : ಕಲಾಮಂದಿರದ ಸುವರ್ಣ ಮಹೋತ್ಸವ ಆಚರಣೆ.

1973 : ಅ.ನ.ಸು. ಅವರಿಂದ ‘ದೃಗ್ದರ್ಶನ’ ಜ್ಯಾಮಿತಿಗೆ ಸಂಬಂಧಿಸಿದ ಅತ್ಯಮೂಲ್ಯ ಪುಸ್ತಕ ಪ್ರಕಟಣೆ.

1991 : ಅ.ನ.ಸು ಜನ್ಮಶತಮಾನೋತ್ಸವ ಆಚರಣೆ.

1985 : ಹನುಮಂತನಗರದಲ್ಲಿ ಕಲಾಮಂದಿರದ ಸ್ವಂತ ಕಟ್ಟಡದ ಪ್ರಾರಂಭೋತ್ಸವ.

1994 : ಕಲಾಮಂದಿರ ವಜ್ರಮಹೋತ್ಸವ ಆಚರಣೆ.

2006 : ಕಲಾಮಂದಿರದಲ್ಲಿ ಚಿತ್ರಕಲಾ ಪದವಿ ಶಿಕ್ಷಣ (ಬಿ.ವಿ.ಎ) ಆರಂಭ. ಕನ್ನಡ ವಿವಿಯ ಸಂಲಗ್ನ.

2018 : ಚಿತ್ರಕಲಾ ಪದವಿಯೊಂದಿಗೆ ಅಭಯ್‌ ಸಂಸ್ಥೆಯ ಸಹಯೋಗದಲ್ಲಿ ಡಿಜಿಟಲ್‌ ಆರ್ಟ್‌ ತರಬೇತಿ ಶಿಕ್ಷಣ (ಕಂಪ್ಯೂಟರ್‌).

2018 : ಕಲಾಮಂದಿರ ಶತಮಾನೋತ್ಸವದ ಹಿನ್ನೆಲೆಯಲ್ಲಿ ವರ್ಷವಿಡೀ ತಿಂಗಳಿಗೊಂದು ಕಾರ್ಯಕ್ರಮದಡಿ ಕಲೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು.

2019 : ಶತಮಾನೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮ.

Follow Us:
Download App:
  • android
  • ios