Asianet Suvarna News Asianet Suvarna News

ದಶಕಗಳ ಹಾದಿ ಪೂರೈಸಿದ ಕಲಾಕದಂಬ!

ಡಾ. ರಾಧಾಕೃಷ್ಣ ಉರಾಳ ಕೆ ಅವರ ಕಲ್ಪನೆಯ ಕೂಸಾಗಿ 2009ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡಿದ್ದು ಕಲಾಕದಂಬ ಆರ್ಟ್‌ ಸೆಂಟರ್‌. ಯಕ್ಷಗಾನ, ನಾಟಕ, ನೃತ್ಯ, ವಾದ್ಯ ಸಂಗೀತ, ಜಾನಪದ, ಸಿನೆಮಾ.. ಹೀಗೆ ಎಲ್ಲಾ ರಂಗದಲ್ಲೂ ಹತ್ತು ವರ್ಷಗಳಿಂದ ತನ್ನ ಛಾಪನ್ನು ಮೂಡಿಸುತ್ತಾ ಬಂದಿದೆ. ಭಾರತೀಯ ರಂಗ ಕಲೆಗಳ ಪ್ರದರ್ಶನ, ಪರಿಚಯ, ತರಬೇತಿ, ಪರಿಣತಿ, ಶಾಲಾ ಮಕ್ಕಳಿಗೆ ಕಲಾ ಶಿಕ್ಷಣದ ಆಶಯಗಳನ್ನಿರಿಸಿಕೊಂಡು ಸಾಗುತ್ತಾ ಬಂದಿದೆ ಈ ಸಂಸ್ಥೆ.

Sridhar hebbar grabs Navada Award Kalakadamba Art Studio
Author
Bangalore, First Published Aug 24, 2019, 10:45 AM IST
  • Facebook
  • Twitter
  • Whatsapp

ಬೆಂಗಳೂರಿನ ಹಲವಾರು ರಂಗ ತಂಡಗಳಿಗೆ ನೃತ್ಯ ತರಬೇತಿ, ದೂರದರ್ಶನಗಳಲ್ಲಿನ ಯಕ್ಷ ನೃತ್ಯಗಳಿಗೂ ನೃತ್ಯ ಸಂಯೋಜನೆ ಮಾಡಿ, ನಟನೆಯಲ್ಲಿಯೂ ಸಹಭಾಗಿಯಾಗಿರುವ ಕಲಾಕದಂಬ ಲಂಡನ್‌ನ ಬಾರ್ಡರ್‌ ಕ್ರಾಸಿಂಗ್ಸ್‌ ಸಂಸ್ಥೆಯೊಂದಿಗೆ ಯಕ್ಷಗಾನ ಅಂಶಗಳನ್ನೊಳಗೊಂಡ ನಾಟಕ ನಿರ್ಮಿತಿಯಲ್ಲಿ ಭಾಗಿಯಾಗಿದೆ. ಚೈನಾ, ಸ್ವೀಡನ್‌, ಲಂಡನ್‌ಗಳಲ್ಲಿ ಓರಿಯೆಂಟೇಷನ್ಸ್‌ ರೀ ಓರಿಯಂಟೇಷನ್ಸ್‌ ನಾಟಕ, ಯಕ್ಷಗಾನ ಪ್ರದರ್ಶನಗಳನ್ನು ನೀಡಿದೆ. ಇದರೊಂದಿಗೆ ‘ಅಮ್ಮಚ್ಚಿಯೆಂಬ ನೆನಪು’ ಚಲನಚಿತ್ರ ನಿರ್ಮಿತಿಯಲ್ಲೂ ಇದು ಪಾಲ್ಗೊಂಡಿದೆ.

ಮುರಳೀಧರ ನಾವಡ, ನಿತ್ಯಾನಂದ ನಾಯಕ್‌, ವಿಶ್ವನಾಥ ಉರಾಳ, ಅಂಬರೀಶ್‌ ಭಟ್‌, ದೇವರಾಜ ಕರಬ, ಮಮತಾ ಆರ್‌.ಕೆ., ರಮಾ ದೇವಿ ಸುಧೀಂದ್ರ ಹೊಳ್ಳ, ಸಂತೋಷ್‌, ಸುರೇಶ್‌, ಭರತ್‌ ಗೌಡ, ಸುಜನ್‌, ಪವನ್‌, ಅಮೃತ, ಛಾಯಾಪತಿ ಮೊದಲಾದವರು ಕಟ್ಟಿಬೆಳೆಸಿದ ಈ ಸಂಸ್ಥೆ ಇಂದು ತಮ್ಮ ದಶಮಾನೋತ್ಸವವನ್ನು ಆಚರಿಸಿಕ್ಳೊಳ್ಳುತ್ತಿದೆ.

ಗುರು ನಾರ್ಣಪ್ಪ ಉಪ್ಪೂರರ ಶಿಷ್ಯರಾದ ಕರಾವಳಿ ಗಾನ ಕೋಗಿಲೆ ಖ್ಯಾತಿಯ ಕಾಳಿಂಗ ನಾವಡರ ನೆನೆಪಿನಲ್ಲಿ ಸಂಸ್ಥೆಯು ಕಳೆದ 9 ವರ್ಷಗಳಿಂದ ಕಾಳಿಂಗ ನಾವಡ ಪ್ರಶಸ್ತಿಯನ್ನು ಯಕ್ಷಲೋಕದ ಗಣ್ಯರಿಗೆ ಕೊಡುತ್ತಾ ಬಂದಿದ್ದು, ಈ ಭಾರಿಯ ದಶಮಾನದ ಪ್ರಶಸ್ತಿಗೆ ಶ್ರೀ ಎಂ. ಶ್ರೀಧರ ಹೆಬ್ಬಾರ್‌ ಕರ್ಜೆ ಅವರು ಭಾಜನರಾಗಿದ್ದಾರೆ.

ಶ್ರೀಧರ ಹೆಬ್ಬಾರ್‌ ಕರ್ಜೆಗೆ ಕಾಳಿಂಗ ನಾವಡ ಪ್ರಶಸ್ತಿ

ಶ್ರೀಧರ ಹೆಬ್ಬಾರ್‌ ಕರ್ಜೆ ಅವರು ತೆಂಕು ಹಾಗೂ ಬಡಗು ತಿಟ್ಟುಗಳೆರಡರಲ್ಲೂ, ವೇಷಧಾರಿಯಾಗಿಯೂ ಅನುಭವವುಳ್ಳ ಗುರುವಾಗಿಯೂ ಗುರುತರದ ಕೆಲಸ ಮಾಡುತ್ತಿರುವ ಕಲಾವಿದರು. ಉಡುಪಿಯ ಬಾರ್ಕೂರಿನಲ್ಲಿ ಗೋವಿಂದ ಹೆಬ್ಬಾರ್‌ ಹಾಗೂ ಶ್ರೀದೇವಿ ದಂಪತಿಗಳಿಗೆ ಮಗನಾಗಿ ಜನಿಸಿದ ಇವರು ಕುಂದಾಪುರದ ಆಜ್ರಿಯಲ್ಲಿ ಬ್ರಹ್ಮಾವರದ ಎಸ್‌.ಎಂ.ಎಸ್‌ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದರು. ಸೋದರಮಾವ ಮಂಜುನಾಥ ಹೆಬ್ಬಾರ್‌ ಅವರ ಹಾಡುಗಾರಿಕೆಯ ಪರಿಣಾಮ ಶಾಲಾ ಶಿಕ್ಷಣಕ್ಕಿಂತ ಯಕ್ಷಗಾನದ ಬಣ್ಣವೇ ಇವರನ್ನು ಹೆಚ್ಚು ಸೆಳೆಯಿತು. ಬಾಲಕಲಾವಿದರಾಗಿ ಯಕ್ಷಲೋಕಕ್ಕೆ ಕಾಲಿರಿಸಿ ನಾರದ, ರತ್ನಾವತಿ, ಸುಧನ್ವ, ಮೊದಲಾದ ಪಾತ್ರದ ಮೂಲಕ ಬೆಳೆವ ಸಿರಿ ಮೊಳಕೆಯಲ್ಲೇ ಎನ್ನುವುದನ್ನು ತೋರಿದರು. ಆ ಪ್ರತಿಭೆಯ ಕಾರಣದಿಂದಾಗಿ 1971ರಲ್ಲೇ ಕೇಂದ್ರ ಸರ್ಕಾರದಿಂದ ಶಿಷ್ಯವೇತನವನ್ನೂ ಪಡೆದು, ಮನೆಯವರ ಅಸಮಧಾನದ ನಡುವೆಯೂ ಉಡುಪಿಯ ಯಕ್ಷಗಾನ ಕೇಂದ್ರ ಸೇರಿ ನಿಮ್ಮ ಯಕ್ಷ ಮಹಲಿಗೆ ಭದ್ರ ಬುನಾದಿ ಹಾಕಿಕೊಂಡರು.

ವೃತ್ತಿಪರ ಮೇಳ ತಿರುಗಾಟದಿಂದ 1992ರಲ್ಲಿನಿವೃತ್ತರಾದರೂ ಕಲಾ ಬದುಕಿನಿಂದ ವಿಮುಖರಾಗದೆ ಹತ್ತಾರು ಸಂಘ ಸಂಸ್ಥೆಗಳ ಯುವ ಪೀಳೆಗೆಗೆ ಯಕ್ಷಗಾನ ಕಲಿಸುವಲ್ಲಿ ಪ್ರಮುಖರೆನಿಸಿದವರು ಹೆಬ್ಬಾರ್‌ರವರು ಇಂದಿಗೂ ನಿಮ್ಮ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಸ್ಥಳ: ಉದಯಭಾನು ಕಲಾಸಂಘ, ಚಾಮರಾಜಪೇಟೆ, ಬೆಂಗಳೂರು

ಸಮಯ: ಆ. 25 ಭಾನುವಾರ

ಹೆಚ್ಚಿನ ವಿವರಗಳಿಗೆ: ದೂ. 9886066732, 9845663646

 

Follow Us:
Download App:
  • android
  • ios