ಆರ್ಸಿಬಿ ಸಹ ಮಾಲಕಿ ಅನನ್ಯಾ ಬಿರ್ಲಾ ಅವರು 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಒಂದೇ ವ್ಯಕ್ತಿಯಿಂದ ಹಲವು ಬಾರಿ ಮದುವೆ ಪ್ರಸ್ತಾಪ ಬಂದಿದ್ದಾಗಿ ಹೇಳಿದ್ದು, ತೀವ್ರ ಕುತೂಹಲ ಮೂಡಿಸಿದೆ. ಆ ವ್ಯಕ್ತಿ ಯಾರೆಂಬುದನ್ನು ತಿಳಿಯಲು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಮುಂಬೈ(ನ.19): ಆರ್ಸಿಬಿ ತಂಡದ ಸಹ ಮಾಲಕಿ, ಉದ್ಯಮಿ ಅನನ್ಯಾ ಬಿರ್ಲಾ ಅವರು ಇತ್ತೀಚೆಗೆ 'ಕಾಫಿ ವಿತ್ ಕರಣ್' ಸೀಸನ್ 9ರಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದಲ್ಲಿ ಹಂಚಿಕೊಂಡ ವೈಯಕ್ತಿಕ ವಿಚಾರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಒಂದೇ ವ್ಯಕ್ತಿಯಿಂದ ಹಲವು ಬಾರಿ ಮದುವೆ ಪ್ರಸ್ತಾಪ ಬಂದಿತ್ತು ಎಂದು ಅನನ್ಯಾ ಬಹಿರಂಗಪಡಿಸಿದ್ದಾರೆ. ಆ ವ್ಯಕ್ತಿ ಯಾರು ಎಂಬುದನ್ನು ತಿಳಿದುಕೊಳ್ಳಲು ನೆಟ್ಟಿಗರು ನಾನಾ ರೀತಿಯ ಊಹಾಪೋಹಗಳನ್ನು ಮಾಡುತ್ತಿದ್ದಾರೆ.
ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್, ಶ್ರೀಮಂತ ಕುಟುಂಬವೊಂದರಿಂದ ಕೇವಲ ಎರಡು ಕುಟುಂಬಗಳ ಬ್ರ್ಯಾಂಡ್ ಮತ್ತು ಸ್ಥಾನಮಾನ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಮದುವೆ ಪ್ರಸ್ತಾಪ ಬಂದಿದೆಯೇ ಎಂದು ಅನನ್ಯಾ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅನನ್ಯಾ, “ಅದನ್ನು ಬ್ರ್ಯಾಂಡ್ ಮೀಟ್ಸ್ ಬ್ರ್ಯಾಂಡ್ ಎಂದು ಹೇಳಬೇಕೋ ಗೊತ್ತಿಲ್ಲ. ಆದರೆ, ಒಂದೇ ವ್ಯಕ್ತಿಯಿಂದ ಹಲವು ಬಾರಿ ದೊಡ್ಡ ಮಟ್ಟದ ಮದುವೆ ಪ್ರಸ್ತಾಪ ಬಂದಿತ್ತು” ಎಂದು ಹೇಳಿದರು.
ಮದುವೆ ಗುಟ್ಟು ಬಿಚ್ಚಿಟ್ಟ ಅನನ್ಯಾ ಬಿರ್ಲಾ?
“ಒಂದೇ ವ್ಯಕ್ತಿಯಿಂದಲೇ?” ಎಂದು ಕರಣ್ ಜೋಹರ್ ಅಚ್ಚರಿ ವ್ಯಕ್ತಪಡಿಸಿದರು. ಆ ವ್ಯಕ್ತಿ ಯಾರು ಎಂದು ಕೇಳಿದಾಗ, “ಅದನ್ನು ಈಗ ನಾನು ಹೇಳಲು ಸಾಧ್ಯವಿಲ್ಲ” ಎಂದು ಅನನ್ಯಾ ಉತ್ತರಿಸಿದರು. ಈ ಘಟನೆಯಿಂದ ತಮ್ಮ ಪೋಷಕರಿಗೂ ಬೇಸರವಾಗಿತ್ತು ಎಂದು ಅವರು ತಿಳಿಸಿದರು. ಏಕೆಂದರೆ, ಆ ವ್ಯಕ್ತಿಯ ಮದುವೆ ಪ್ರಸ್ತಾಪವನ್ನು ಅನನ್ಯಾ ಈಗಾಗಲೇ ಒಂದು ಬಾರಿ ತಿರಸ್ಕರಿಸಿದ್ದರು. ಆದರೂ ಮತ್ತೆ ಮತ್ತೆ ಪ್ರಸ್ತಾಪ ಬಂದಿದ್ದರಿಂದ ಕುಟುಂಬದಲ್ಲಿ ಈ ವಿಚಾರ ಚರ್ಚೆಗೆ ಕಾರಣವಾಗಿತ್ತು.
ಕಾರ್ಯಕ್ರಮದ ಈ ಸಂಚಿಕೆ ಪ್ರಸಾರವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಆ ವ್ಯಕ್ತಿಯ ಗುರುತು ಪತ್ತೆಹಚ್ಚುವ ಪ್ರಯತ್ನ ಆರಂಭವಾಗಿದೆ. ನೆಟ್ಟಿಗರು ತಮ್ಮದೇ ಆದ ಊಹೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. “ನನ್ನ ಊಹೆಯ ಪ್ರಕಾರ ಅದು ಕವಿನ್ ಮಿತ್ತಲ್ ಇರಬಹುದು. ಏಕೆಂದರೆ ಅವರು ಬ್ರ್ಯಾಂಡ್ ಮೀಟ್ಸ್ ಬ್ರ್ಯಾಂಡ್ ಎಂದು ಮಾತನಾಡಿದ್ದಾರೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮತ್ತೊಬ್ಬರು, “ಅಂಬಾನಿ ಕುಟುಂಬವೊಂದೇ ಶ್ರೀಮಂತ ಕುಟುಂಬವಲ್ಲ. ಗೋದ್ರೆಜ್, ಬಜಾಜ್, ಹಿಂದೂಜಾ ಮತ್ತು ಜಿಂದಾಲ್ ಸೇರಿದಂತೆ ಹಲವು ಶ್ರೀಮಂತ ಉದ್ಯಮ ಕುಟುಂಬಗಳಿವೆ. ಹೀಗಾಗಿ ನಮಗೆ ಆ ವ್ಯಕ್ತಿ ಯಾರೆಂದು ತಿಳಿದಿಲ್ಲ” ಎಂದು ಬರೆದಿದ್ದಾರೆ.
ಇನ್ನೊಬ್ಬ ನೆಟ್ಟಿಗರು ಈ ಕುತೂಹಲದ ಚರ್ಚೆಗೆ ಮತ್ತಷ್ಟು ಮೋಜು ಸೇರಿಸಲು “@grok, ಆ ವ್ಯಕ್ತಿ ಯಾರು?” ಎಂದು ಪ್ರಶ್ನಿಸಿದ್ದಾರೆ. ಆದರೆ, ಅನನ್ಯಾ ಬಿರ್ಲಾ ಮಾತ್ರ ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ.
ಯಾರು ಈ ಅನನ್ಯಾ ಬಿರ್ಲಾ?
ಫಾರ್ಚೂನ್ ಇಂಡಿಯಾದಲ್ಲಿ ಪ್ರಕಟವಾದ ಅನನ್ಯಾ ಬಿರ್ಲಾ ಅವರ ಪ್ರೊಫೈಲ್ ಪ್ರಕಾರ, ಉದ್ಯಮಿಯಾಗಿ ಗುರುತಿಸಿಕೊಂಡಿರುವ ಅವರು ಆರಂಭದಲ್ಲಿ ಸಂಗೀತ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವ ಆಸಕ್ತಿ ಹೊಂದಿದ್ದರು. ಬಳಿಕ ಹಣಕಾಸು ಸೇವೆಗಳು, ಸೌಂದರ್ಯ ಉತ್ಪನ್ನಗಳು, ರಿಯಲ್ ಎಸ್ಟೇಟ್ ಮತ್ತು ಸಿನಿಮಾ ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಉದ್ಯಮ ಆಸಕ್ತಿಯನ್ನು ವಿಸ್ತರಿಸಿದ್ದಾರೆ. ಕಳೆದ ವರ್ಷದಿಂದ ಅನನ್ಯಾ ಬಿರ್ಲಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಮಾಲೀಕರಾಗಿಯೂ ಕ್ರೀಡಾಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.
ಭಾರತದ ಪ್ರಮುಖ ಉದ್ಯಮ ಕುಟುಂಬಗಳಲ್ಲಿ ಒಂದಾದ ಬಿರ್ಲಾ ಕುಟುಂಬದ ಹಿನ್ನೆಲೆಯೂ ಅನನ್ಯಾ ಅವರ ವೃತ್ತಿಜೀವನದೊಂದಿಗೆ ಬೆಸೆದುಕೊಂಡಿದೆ. ಖ್ಯಾತ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರಿಯಾಗಿರುವ ಅನನ್ಯಾ, ಆದಿತ್ಯ ಬಿರ್ಲಾ ಗ್ರೂಪ್ನಲ್ಲಿಯೂ ಪ್ರಮುಖ ನಾಯಕತ್ವದ ಜವಾಬ್ದಾರಿಗಳನ್ನು ಹೊಂದಿದ್ದಾರೆ.
ಇತ್ತೀಚೆಗೆ ಇಮ್ತಿಯಾಜ್ ಅಲಿ ನಿರ್ದೇಶನದ 'ಮೇನ್ ವಾಪಸ್ ಆವೂಂಗಾ' ಚಿತ್ರದ ಮೂಲಕ ಸಿನಿಮಾ ನಿರ್ಮಾಪಕಿಯಾಗಿಯೂ ಅವರು ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ದಿಲ್ಜಿತ್ ದೋಸಾಂಜ್, ನಾಸಿರುದ್ದೀನ್ ಶಾ, ಶಾರ್ವರಿ ಮತ್ತು ವೇದಾಂಗ್ ರೈನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಜಯ್ ಮೆಹ್ತಾ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ ಮುಂಬರುವ 'ಪ್ರಳಯ್' ಚಿತ್ರಕ್ಕೂ ಅನನ್ಯಾ ಬಂಡವಾಳ ಹೂಡುತ್ತಿದ್ದಾರೆ. ವರದಿಗಳ ಪ್ರಕಾರ, ಈ ಚಿತ್ರವು ಝಾಂಬಿ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. 'ಧುರಂಧರ್' ಸರಣಿಯ ಬಳಿಕ ರಣವೀರ್ ಸಿಂಗ್ ಅಭಿನಯದ ಮುಂದಿನ ಚಿತ್ರವಾಗಿ ಇದು ಬಿಡುಗಡೆಯಾಗುವ ನಿರೀಕ್ಷೆಯಿದೆ.
'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿಯೂ 'ಪ್ರಳಯ್' ಚಿತ್ರದ ಬಗ್ಗೆ ಮಾತನಾಡಿದ್ದ ಅನನ್ಯಾ, ಇದೊಂದು ಅದ್ಭುತ ದೃಶ್ಯಾನುಭವ ನೀಡುವ ಚಿತ್ರವಾಗಲಿದೆ (Spectacle) ಎಂದು ಬಣ್ಣಿಸಿದ್ದರು. ಪ್ರೇಕ್ಷಕರು ಚಿತ್ರವನ್ನು ಇಷ್ಟಪಡಲಿದ್ದಾರೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದರು. ಒಟ್ಟಿನಲ್ಲಿ, ಅನನ್ಯಾ ಬಿರ್ಲಾ ಅವರ ಮದುವೆ ಪ್ರಸ್ತಾಪದ ಕುರಿತ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲ ಮೂಡಿಸಿದ್ದು, ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ.














