ಆರ್​ಸಿಬಿಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತದ ಸಾವಿನ ಬೆನ್ನಲ್ಲೇ ನಟ ದರ್ಶನ ಹಳೆಯ ವಿಡಿಯೊ ವೈರಲ್​ ಆಗಿದೆ. ಅಭಿಮಾನ ಅತಿರೇಕವಾದರೆ ಏನಾಗುತ್ತದೆ ಎನ್ನುವ ಬಗ್ಗೆ ನಟ ಹೇಳಿದ್ದೇನು ಕೇಳಿ...

ಅತಿಯಾದರೆ ಅಮೃತವೂ ವಿಷವೇ ಎನ್ನುವ ಮಾತಿನಂತೆಯೇ, ಅಭಿಮಾನವು ಅತಿರೇಕಕ್ಕೆ ಹೋದರೆ ಆಗಬಾರದ್ದು ಆಗುತ್ತದೆ ಎನ್ನುವ ಮಾತು ಪದೇ ಪದೇ ಸಾಬೀತು ಆಗುತ್ತಲೇ ಇರುತ್ತದೆ. ಚಿತ್ರತಾರೆಯರು, ಕ್ರಿಕೆಟಿಗರು ಇವರನ್ನೇ ದೇವರು ಎಂದುಕೊಂಡು ನಂಬುವ ದೊಡ್ಡ ವರ್ಗವೇ ಇದೆ. ಬದುಕಿರುವಾಗ ಒಮ್ಮೆಯಾದರೂ ಇವರನ್ನು ಹತ್ತಿರದಿಂದ ನೋಡಬೇಕು ಎಂದುಕೊಂಡು ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿಲ್ಲ ಹೇಳಿ? ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾದಾಗ ಅತಿರೇಕದಿಂದ ವರ್ತಿಸಿ ಪ್ರಾಣ ಕಳೆದುಕೊಂಡವರು ಅದೆಷ್ಟೋ ಮಂದಿ. ಹಾಲಿನ ಅಭಿಷೇಕ, ಕಟೌಟ್​ ಅದೂ ಇದೂ ಎಂತೆಲ್ಲಾ ಮಾಡಲು ಹೋಗಿ ಮನೆಗೆ ಆಧಾರವಾಗಿರೋ ಮಗನೇ ಸಾವಿನ ಹಾದಿ ಹಿಡಿದಿರುವ ಘಟನೆಗಳೂ ಇವೆ. ತಮ್ಮ ಜೀವನೋಪಾಯಕ್ಕಾಗಿ ಎಲ್ಲರಂತೆಯೇ ಈ ವೃತ್ತಿಯನ್ನು ಹಿಡಿದವರನ್ನು ದೇವರೆಂದು ಬಗೆದು ಅವರಿಗಾಗಿ ಪ್ರಾಣವನ್ನೂ ಪಣಕ್ಕಿಡುವುದು ಇಂದಿನ ಘನಘೋರ ಸತ್ಯವಾಗಿದೆ!

ಅದಕ್ಕೆ ಒಂದು ಉದಾಹರಣೆಯಾಗಿ ನಿಂತಿದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ, 11 ಮಂದಿ ಅಮಾಯಕರ ಸಾವು. 18 ವರ್ಷಗಳ ಬಳಿಕ ಆರ್​ಸಿಜಿ ವಿಜಯ ಸಾಧಿಸಿದ್ದನ್ನು ಮನೆಯಲ್ಲಿಯೇ ಕುಳಿತು ಸಂಭ್ರಮಿಸಿದವರು ಇದ್ದಾರೆ, ಬೀದಿಬೀದಿಗಳಲ್ಲಿ ಪಟಾಕಿ ಸಿಡಿಸಿ ತಮ್ಮ ಖುಷಿಯನ್ನು ಇಮ್ಮಡಿಗೊಳಿಸಿಕೊಂಡವರು ಇದ್ದಾರೆ, ಅಲ್ಲಲ್ಲಿ ಮೆರವಣಿಗೆ ಮಾಡಿ, ಸಿಹಿ ಹಂಚಿ ಕುಣಿದು ಕುಪ್ಪಳಿಸಿದವರೂ ಇದ್ದಾರೆ. ಆದರೆ ಈ ತಂಡವನ್ನು ಖುದ್ದು ನೋಡುವುದಕ್ಕಾಗಿ ಯಾವ್ಯಾವುದೋ ಮೂಲೆಗಳಿಂದ ಬೆಂಗಳೂರಿನವರೆಗೆ ತಮ್ಮ ಅಭಿಮಾನವನ್ನು ಮೆರೆಯಲು ಬಂದವರು ಹೆಣವಾಗಿದ್ದಾರೆ! ಮತ್ತೆ ಕೆಲವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ, ಇನ್ನುಳಿದವರು ಗಾಯಗಳಿಂದ ನರಳುತ್ತಿದ್ದಾರೆ.

ಈ ಸಂದರ್ಭದಲ್ಲಿ ನಟ ದರ್ಶನ್​ ಅವರ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆಗುತ್ತಿದೆ. ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ದರ್ಶನ್​ ಅವರನ್ನು ನೋಡುವುದಕ್ಕಾಗಿ ನೂಕು ನುಗ್ಗಲು ಉಂಟಾಗುವುದು ಇದ್ದೇ ಇದೆ. ಅಂಥ ಸಂದರ್ಭಗಳಲ್ಲಿ ಪ್ರಾಣಕ್ಕೆ ಕುತ್ತಾಗುವ ಸನ್ನಿವೇಶಗಳೂ ಇವೆ. ಇವುಗಳನ್ನು ಒಮ್ಮೆ ನೋಡಿದ್ದ ದರ್ಶನ್​ ಅವರು ಅಭಿಮಾನಿಗಳಲ್ಲಿ ಕಳಕಳಿಯ ಮನವಿಯೊಂದನ್ನು ಮಾಡಿಕೊಂಡಿದ್ದರು. ‘ಬದುಕಿದ್ದರೆ ಮತ್ತೊಂದು ಸಲ ನನ್ನ ನೋಡ್ತೀರಾ. ನನ್ನ ನೋಡದೇ ಇದ್ದರೂ ತೊಂದರೆ ಇಲ್ಲ. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇರುತ್ತಾರೆ. ಆಗತಾನೇ ಮದುವೆ ಮಾಡಿಕೊಂಡ ಗಂಡ-ಹೆಂಡತಿ ನೀವಾಗಿರುತ್ತೀರಿ. ಆಗತಾನೇ ಹುಟ್ಟಿದ ಮಗು ಇರುತ್ತದೆ. ನಿಮಗೇನಾದರೂ ಹೆಚ್ಚೂ ಕಮ್ಮಿ ಆದರೆ ಸಾಯೋತನಕ ನಮ್ಮನ್ನು ದೂಷಿಸುತ್ತಾರೆ. ಇದು ನಿಮಗೆ ಇಷ್ಟನಾ’ ಎಂದು ದರ್ಶನ್ ಪ್ರಶ್ನೆ ಮಾಡಿದ್ದರು. ಈ ವಿಡಿಯೋ ಅನ್ನು ಭಲೇ ಬಸವ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾಗಿದೆ. 

ಇದೇ ಮಾತು ಪ್ರತಿಯೊಬ್ಬರ ನಟನ ಬಾಯಲ್ಲಿ ಬರುವ ಅಗತ್ಯವಿದೆ. ಏಕೆಂದರೆ, ಇವರೆಲ್ಲರ ಅಭಿಮಾನಿಗಳಿಗೆ ಅವರೇ ದೇವರಾಗಿರುವ ಕಾರಣ, ಅವರ ಬಾಯಲ್ಲಿ ಬಂದರಷ್ಟೇ ಅದು ಪ್ರಸಾದವಾಗುತ್ತದೆ. ಇಲ್ಲದಿದ್ದರೆ ಕಾರ್ಯಕ್ರಮ ಆಯೋಜಿಸಿದವರೂ ನುಣುಚಿಕೊಳ್ಳುತ್ತಾರೆ, ವಿಜೇತರಾದವರು ಕೋಟಿ ಕೋಟಿ ಹಣದೊಂದಿಗೆ ಮನೆಗೆ ಹೋಗುತ್ತಾರೆ, ಚಿತ್ರನಟರಾದರೆ ತಮ್ಮ ಸಂಭಾವನೆಯನ್ನು ಎಣಿಸುವಲ್ಲಿ ನಿರತರಾಗುತ್ತಾರೆ... ಸತ್ತ ಅಭಿಮಾನಿಗಳಿಗೆ ಒಂದಿಷ್ಟು ಹಣದ ನೆರವು ಸಿಕ್ಕರೂ ಸಿಗಬಹುದು. ಆದರೆ ಕೊನೆಗೆ ಉಳಿಯುವುದು ಅಭಿಮಾನಿಗಳ ಶವ ಮಾತ್ರ... ಅದರ ಮುಂದೆ ಅವರನ್ನು ನಂಬಿದವರ ಕಣ್ಣೀರು, ಹಿಡಿ ಶಾಪ...ಅಷ್ಟೇ... ಬಡವನ ಕೋಪ...

View post on Instagram