ಸರ್ಕಾರ ಆಯೋಜಿಸಿದ್ದ ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಪ್ರಾಣ ಹೋದ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್​ ಸ್ವಯಂ ಪ್ರೇರಿತ ದೂರು ದಾಖಲಿಸಿದೆ.  

ಸರ್ಕಾರ ಆಯೋಜಿಸಿದ್ದ ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಅತ್ತ ವೇದಿಕೆಯ ಮೇಲೆ ಗಣ್ಯಾತಿಗಣ್ಯರು ಫೋಟೋಶೂಟ್​ ಮಾಡಿಸಿಕೊಳ್ಳುತ್ತಿದ್ದರೆ, ಇತ್ತ 11 ಮಂದಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿರುವ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಸರ್ಕಾರ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಹೀಗೆಲ್ಲಾ ಅವಾಂತರವಾಗಿದೆ ಎಂದು ಭಾರಿ ಆರೋಪಗಳು ಕೇಳಿಬರುತ್ತಿರುವ ನಡುವೆಯೇ, ಸರ್ಕಾರಿ ಮೃತ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ. ಈ ಗಲಾಟೆ, ಗಲಭೆ, ಸಾವಿನ ಪ್ರಕರಣಗಳ ಬಗ್ಗೆ ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಹೊರಿಸುತ್ತಿರುವುದು ಮುಂದುವರೆಯುತ್ತಿದೆ. ಆದರೆ ಇದರ ನಡುವೆಯೇ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್​, ಘಟನೆಯ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು (Suo Moto case) ದಾಖಲು ಮಾಡಿಕೊಂಡು ಅದರ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ಇಂದು ಹಂಗಾಮಿ ಮುಖ್ಯನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಈ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಪೀಠವು ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್​ ಜನರಲ್​ ಶಶಿಕಿರಣ್ ಶೆಟ್ಟಿ ಅವರಿಗೆ ನ್ಯಾಯಮೂರ್ತಿಗಳು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಇಂಥ ಬೃಹತ್​ ಸಂಭ್ರಮ ನಡೆದ ಸಂದರ್ಭದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿತ್ತೆ? ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲಿ ಇದ್ದರೆ? ಆ್ಯಂಬುಲೆನ್ಸ್ ವ್ಯವಸ್ಥೆ ಇರಬೇಕಲ್ಲವೇ, ಇವೆಲ್ಲಾ ಅಲ್ಲಿ ಇತ್ತೆ ಎಂಬಿತ್ಯಾದಿ ಪ್ರಶ್ನೆಗಳನ್ನು ನ್ಯಾಯಮೂರ್ತಿಗಳು ಕೇಳಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿರುವ ಕೋರ್ಟ್​ ವಿಚಾರಣೆಯನ್ನು ಮುಂದೂಡಿದೆ.

ಇದೇ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಂಡಿದ್ದ ಕ್ರಮಗಳ ಬಗ್ಗೆ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದರು. ರ RCB ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭದ್ರತೆಗಾಗಿ ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದರು. ರಾಜ್ಯದ ವಿವಿಧದ ಭಾಗಗಳಿಂದ 2.5 ಲಕ್ಷ ಜನರು ಬಂದಿದ್ದರು. ಬಂದೋಬಸ್ತ್​ ಗಾಗಿ 1,643 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. KSRP ತುಕಡಿ, ವಾಟರ್ ಟ್ಯಾಂಕರ್ ಸೇರಿದಂತೆ ಹಲವು ವ್ಯವಸ್ಥೆಗಲನ್ನು ಮಾಡಲಾಗಿತ್ತು. ಆದರೆ ಅಭಿಮಾನಿಗಳ ಸಂಖ್ಯೆ ಹೆಚ್ಚಾದ ಕಾರಣ, ಕಾಲ್ತುಳಿತ ಸಂಭವಿಸಿ 56 ಜನರು ಗಾಯಗೊಂಡು. ಐವರು ಮಹಿಳೆಯರು ಹಾಗೂ 6 ಪುರುಷರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಜಯೋತ್ಸವ ವೀಕ್ಷಿಸಲು ಉಚಿತ ಪ್ರವೇಶ ಎಂಬ ವದಂತಿ ಹಬ್ಬಿದ್ದ ಕಾರಣ ನೂಕುನುಗ್ಗಲು ಉಂಟಾಯಿತು. ಕಿರಿದಾದ ಪ್ರವೇಶ ದ್ವಾರಗಳಲ್ಲಿ ಜನಸಂದಣಿ ಹೆಚ್ಚಾಯಿತು. ಸಾವಿರಾರು ಜನರು ಒಳಗೆ ನುಗ್ಗಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿತು. ಸಂಜೆ 5 ಗಂಟೆಯ ವೇಳೆಗೆ ಕಾಲ್ತುಳಿತ ಹೆಚ್ಚಾಯಿತು. ಅನೇಕರು ಗಾಯಗೊಂಡರು ಮತ್ತು ಕೆಲವರು ಪ್ರಜ್ಞಾಹೀನರಾದರು.