ನಟಿ ತಮನ್ನಾ ಭಾಟಿಯಾ ಕುಟುಂಬ ಸಮೇತ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ಸುಪ್ರಭಾತ ಸೇವೆಯಲ್ಲಿ ಭಾಗವಹಿಸಿದ ನಟಿ, ದರ್ಶನದ ಬಳಿಕ ಇದು ತಮ್ಮ..

ನಟಿ ತಮನ್ನಾ ಭಾಟಿಯಾ ಸದ್ಯ ಸಿನಿಮಾಗಳಲ್ಲಿ ಸಖತ್ ಬ್ಯುಸಿ. ಎರಡು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದರೂ ಅವರ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಗ್ಲಾಮರ್ ಪಾತ್ರಗಳ ಜೊತೆಗೆ ತಮ್ಮ ಆಧ್ಯಾತ್ಮಿಕ ಒಲವಿನಿಂದಲೂ ಆಗಾಗ್ಗೆ ಸುದ್ದಿಯಾಗುವ ತಮನ್ನಾ ಇದೀಗ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕುಟುಂಬ ಸಮೇತ ತಿರುಮಲಕ್ಕೆ ತೆರಳಿದ ನಟಿ, ಸುಪ್ರಭಾತ ಸೇವೆಯಲ್ಲಿ ಭಾಗವಹಿಸಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.

ವಿಶೇಷ ದರ್ಶನ ಪಡೆದ ತಮನ್ನಾ

ಬುಧವಾರ ತಿರುಮಲಕ್ಕೆ ಭೇಟಿ ನೀಡಿದ ತಮನ್ನಾ ಭಾಟಿಯಾ, ಕುಟುಂಬದವರೊಂದಿಗೆ ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ಬಳಿಕ ದೇವರ ದರ್ಶನ ಪಡೆದು, ದೇವಸ್ಥಾನದಿಂದ ಹೊರಬಂದ ನಂತರ ತಮ್ಮ ಅನುಭವವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ತಿರುಪತಿ ದೇಗುಲಕ್ಕೆ ಚಿಕ್ಕ ವಯಸ್ಸಿನಿಂದಲೇ ಭೇಟಿ ನೀಡುತ್ತಿರುವುದಾಗಿ ಹೇಳಿಕೊಂಡಿರುವ ತಮನ್ನಾ, ಈ ಬಾರಿಯ ದರ್ಶನ ತಮ್ಮ ಪಾಲಿಗೆ ವಿಶೇಷವಾಗಿತ್ತು ಎಂದು ತಿಳಿಸಿದ್ದಾರೆ.

‘ಈ ಅನುಭವ ಹಿಂದೆಂದೂ ಆಗಿರಲಿಲ್ಲ’

ತಿರುಮಲ ದರ್ಶನದ ಬಳಿಕ ಮಾತನಾಡಿದ ತಮನ್ನಾ, ಬಹಳ ದಿನಗಳ ಬಳಿಕ ಇಲ್ಲಿಗೆ ಬಂದಿದ್ದೇನೆ. ದೇವರ ದರ್ಶನ ಅತ್ಯಂತ ಅದ್ಭುತವಾಗಿ ನೆರವೇರಿದೆ. ಲೋಕ ಕಲ್ಯಾಣ ಹಾಗೂ ಎಲ್ಲರ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ. ತಿರುಮಲಕ್ಕೆ ಬಂದಾಗಲೆಲ್ಲಾ ತಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿರುವ ನಟಿ, ಈ ಬಾರಿಯ ಅನುಭವ ಮಾತ್ರ ಮತ್ತಷ್ಟು ವಿಶೇಷವಾಗಿತ್ತು ಎಂದಿದ್ದಾರೆ.

ಚಿಕ್ಕಂದಿನಿಂದಲೂ ತಿರುಮಲಕ್ಕೆ ಬರುತ್ತಿದ್ದೇನೆ. ಆದರೆ ಇಂದಿನ ವಿಶೇಷ ದರ್ಶನದಂತಹ ಅನುಭವ ಹಿಂದೆಂದೂ ಆಗಿರಲಿಲ್ಲ. ಇಲ್ಲಿನ ಪ್ರಶಾಂತ ವಾತಾವರಣ ನನಗೆ ಅಪಾರ ಮನಸ್ಸಿನ ಶಾಂತಿ ಮತ್ತು ಸಂತೋಷ ನೀಡಿದೆ. ನಾನು ನಿಜಕ್ಕೂ ಅದೃಷ್ಟವಂತೆ ಎಂದು ಭಾವಿಸುತ್ತೇನೆ ಎಂದು ತಮನ್ನಾ ಭಾವುಕರಾಗಿ ಹೇಳಿದ್ದಾರೆ.

ದೈವಭಕ್ತಿಯಲ್ಲಿ ತಮನ್ನಾ

ತಮನ್ನಾ ಭಾಟಿಯಾ ಸಿನಿಮಾಗಳ ಹೊರತಾಗಿಯೂ ಆಧ್ಯಾತ್ಮಿಕ ವಿಚಾರಗಳಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ಅವರು, ಈ ಹಿಂದೆ ಇಶಾ ಫೌಂಡೇಶನ್‌ಗೂ ಭೇಟಿ ನೀಡಿದ್ದರು. ತಾವು ಲಿಂಗ ಭೈರವೀ ದೇವಿಯ ಆರಾಧಕಿ ಎಂದು ತಮನ್ನಾ ಈ ಹಿಂದೆಯೇ ಹೇಳಿಕೊಂಡಿದ್ದರು. ಹೀಗಾಗಿ ಅವರ ತಿರುಮಲ ಭೇಟಿ ಕೂಡ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.

ತಮನ್ನಾ ಫೋಟೋ, ವಿಡಿಯೋ ವೈರಲ್

ತಿರುಮಲ ದೇವಸ್ಥಾನಕ್ಕೆ ತಮನ್ನಾ ಭೇಟಿ ನೀಡಿರುವ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸರಳವಾಗಿ ಕಾಣಿಸಿಕೊಂಡಿರುವ ನಟಿಯ ದರ್ಶನದ ಕ್ಷಣಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ತಮನ್ನಾ ಭಾಟಿಯಾ ಇಂದಿಗೂ ಹಲವು ಭಾಷೆಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ನಟಿಸಿದ್ದ ‘ವವಾನ್’ ಹಾರರ್ ಸಿನಿಮಾ ಬಿಡುಗಡೆಯಾಗಿದ್ದು, ಹಳೆಯ ಸಂಪ್ರದಾಯವೊಂದನ್ನು ಆಧರಿಸಿದ ಕಥೆಯನ್ನು ಹೊಂದಿತ್ತು.

ತೆಲುಗಿನಲ್ಲಿ ಅವರು ಕೊನೆಯದಾಗಿ ‘ಒದೆಲ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿಯೂ ತಮನ್ನಾ ನಟಿಸುತ್ತಿದ್ದಾರೆ. ಎರಡು ದಶಕಗಳ ಸಿನಿ ಪಯಣದ ನಡುವೆಯೂ ತಮ್ಮ ಗ್ಲಾಮರ್ ಮತ್ತು ಜನಪ್ರಿಯತೆಯನ್ನು ಉಳಿಸಿಕೊಂಡಿರುವ ತಮನ್ನಾ, ಇದೀಗ ತಿರುಮಲ ದರ್ಶನದ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.