‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಹೆಸರನ್ನು ಬಳಕೆ ಮಾಡದಂತೆ ನಟಿ ಮತ್ತು ನಿಮಾರ್ಪಕಿ ರಮ್ಯಾ ಅವರಿಗೆ ನಿರ್ದೇಶಿಸಿ ಹೊರಡಿಸಲಾಗಿದ್ದ ತಾತ್ಕಾಲಿಕ ತಡೆಯಾಜ್ಞೆ ಆದೇಶವನ್ನು ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಬುಧವಾರ ತೆರವುಗೊಳಿಸಿದೆ.

ಬೆಂಗಳೂರು (ಏ.06): ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಹೆಸರನ್ನು ಬಳಕೆ ಮಾಡದಂತೆ ನಟಿ ಮತ್ತು ನಿಮಾರ್ಪಕಿ ರಮ್ಯಾ ಅವರಿಗೆ ನಿರ್ದೇಶಿಸಿ ಹೊರಡಿಸಲಾಗಿದ್ದ ತಾತ್ಕಾಲಿಕ ತಡೆಯಾಜ್ಞೆ ಆದೇಶವನ್ನು ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಬುಧವಾರ ತೆರವುಗೊಳಿಸಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಬಳಸದಂತೆ 2023ರ ಜ.16ರಂದು ನೀಡಲಾಗಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ನಟಿ ರಮ್ಯಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿದ ನಗರದ 18ನೇ ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಈ ಆದೇಶ ಮಾಡಿದೆ. ಇದರಿಂದ ಪ್ರಕರಣದಲ್ಲಿ ಮೂಲ ದಾವೆದಾರರಾದ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬುಗೆ ಹಿನ್ನಡೆಯಾಗಿದೆ.

Add Asianetnews Kannada as a Preferred SourcegooglePreferred

ಬಾಬು ಆಕ್ಷೇಪ ಏನು?: ನಟಿ ರಮ್ಯಾ ನಿರ್ಮಾಪಕರಾಗಿ, ರಾಜ್‌ ಬಿ.ಶೆಟ್ಟಿ ನಟನೆಯ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಆದರೆ, ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರು, ಸಿವಿಲ್‌ ನ್ಯಾಯಾಲಯಕ್ಕೆ ಅಸಲು ದಾವೆ ಹೂಡಿ, ಈ ಹೆಸರು ನನ್ನ ‘ಬಣ್ಣದ ಗೆಜ್ಜೆ’ ಸಿನಿಮಾದ ಹಾಡಿನ ಸಾಲಿನದ್ದಾಗಿದೆ. ಈ ಹೆಸರನ್ನು ನನ್ನ ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ಆಕ್ಷೇಪಿಸಿದ್ದರು.

ಜತೆಗೆ, ಇದೇ ಹೆಸರು ಇಟ್ಟುಕೊಂಡು ಅಂಬರೀಷ್‌ ಅವರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದೆ. ಆದರೆ, ಅದು ಸಾಧ್ಯವಾಗಿಲ್ಲ. ಹಾಗಾಗಿ, ಅವರ ಪುತ್ರ ಅಭಿಷೇಕ್‌ ಅಂಬರೀಷ್‌ ಜತೆ ಸಿನಿಮಾಗೆ ತಯಾರಿ ಮಾಡಿಕೊಳ್ಳಲಾಗಿದೆ. ಅಷ್ಟರಲ್ಲಿ ರಮ್ಯಾ ಹೆಸರು ಬಳಸಿಕೊಂಡಿದ್ದಾರೆ. ಆದ್ದರಿಂದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರು ಬಳಸಲು, ಚಿತ್ರ ನಿರ್ಮಿಸಿ ಮತ್ತು ಬಿಡುಗಡೆ ಮಾಡುವುದಕ್ಕೆ ತಡೆ ನೀಡಬೇಕು ಎಂದು ರಾಜೇಂದ್ರಸಿಂಗ್‌ ಬಾಬು ಕೋರಿದ್ದರು.

ನನ್ನನ್ನು ಬಿಜೆಪಿ ಪಕ್ಷ ಕರೆದಿಲ್ಲ, ಬೊಮ್ಮಾಯಿ ಮಾಮ ಕರೆದಿದ್ದಾರೆ: ಸುದೀಪ್‌

ಆ ಮನವಿ ಆಲಿಸಿದ್ದ ನ್ಯಾಯಾಲಯ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಬಳಕಗೆ ತಡೆಯಾಜ್ಞೆ ನೀಡಿ 2023ರ ಜ.16ರಂದು ಮಧ್ಯಂತರ ಆದೇಶ ಮಾಡಿತ್ತು. ಇದರಿಂದ ರಮ್ಯಾ ಅವರು, ದಾವೆಯಲ್ಲಿ ತಮ್ಮನ್ನು ಪ್ರತಿವಾದಿ ಮಾಡಬೇಕು. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರು ಬಳಸಲು ನೀಡಲಾಗಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಿ ಎರಡು ಪ್ರತ್ಯೇಕ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅವುಗಳನ್ನು ಪುರಸ್ಕರಿಸಿರುವ ನ್ಯಾಯಾಲಯ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರು ಬಳಕೆಗೆ ನೀಡಲಾಗಿದ್ದ ತಡೆಯಾಜ್ಞೆ ತೆರವುಗೊಳಿಸಿದೆ. ಜತೆಗೆ, ದಾವೆಯಲ್ಲಿ ರಮ್ಯಾ ಅವರನ್ನು ಪ್ರತಿವಾದಿ ಮಾಡಿದೆ.