ತಮಿಳಿನ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ಒಂದು ಸಿನಿಮಾದಲ್ಲಿ ನಟಿಸಿದ್ದು ನಾನು ಮಾಡಿದ ಅತಿದೊಡ್ಡ ತಪ್ಪು ಎಂದು ನಟಿ ನಯನತಾರಾ ಸಂದರ್ಶನವೊಂದರಲ್ಲಿ ಓಪನ್ ಆಗಿ ಹೇಳಿಕೊಂಡಿದ್ದಾರೆ. ಆ ಸಿನಿಮಾ ಯಾವುದು? ಇಲ್ಲಿದೆ ವಿವರ.

ತಮಿಳು ಚಿತ್ರರಂಗಕ್ಕೆ ಅನೇಕ ನಟಿಯರು ಬಂದು ಹೋಗಿದ್ದಾರೆ. ಆದರೆ, ಕೆಲವರು ಮಾತ್ರ ಕಾಲನ ಸವಾಲು ಮೀರಿ ನಿಲ್ಲುತ್ತಾರೆ. ಅವರಲ್ಲಿ ನಯನತಾರಾ ಕೂಡ ಒಬ್ಬರು. 'ಅಯ್ಯಾ' ಚಿತ್ರದ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು. ಆರಂಭದಲ್ಲಿ 'ಚಂದ್ರಮುಖಿ'ಯಂತಹ ದೊಡ್ಡ ಸಿನಿಮಾಗಳಲ್ಲಿ ನಟಿಸಿದರೂ, ಅವರಿಗೆ ಸ್ಟಾರ್ ನಟಿಯಾಗಿ ಬೆಳೆಯಲು ಕೆಲವು ವರ್ಷಗಳು ಬೇಕಾಯಿತು. ಈಗ ನಯನತಾರಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ರಜನಿಕಾಂತ್, ಚಿರಂಜೀವಿ, ವಿಜಯ್, ಅಜಿತ್, ವಿಕ್ರಂ, ಸೂರ್ಯರಂತಹ ಟಾಪ್ ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ಸದ್ಯ ಅವರು ಮಹಿಳಾ ಪ್ರಧಾನ ಕಥೆಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟಿ ನಯನತಾರಾ ಅವರ ಸಿನಿ ಕೆರಿಯರ್‌ನಲ್ಲಿ 'ಗಜನಿ' ಸಿನಿಮಾ ಒಂದು ರೀತಿಯಲ್ಲಿ ತಿರುವು ನೀಡಿತು. ಆದರೆ ಅದು ಒಳ್ಳೆಯ ರೀತಿಯಲ್ಲಿ ಅಲ್ಲ. ಎ.ಆರ್. ಮುರುಗದಾಸ್ ನಿರ್ದೇಶನದಲ್ಲಿ ಸೂರ್ಯ-ಅಸಿನ್ ಜೋಡಿಯಾಗಿ ನಟಿಸಿದ್ದ ಆ ಸಿನಿಮಾ ಸೂಪರ್‌ಹಿಟ್ ಆಗಿದ್ದು ನಿಜ. ಆದರೆ, 'ಏನಾದ್ರೂ ಆಗ್ಲಿ, ಆ ಸಿನಿಮಾದಲ್ಲಿ ನಟಿಸಬಾರದಿತ್ತು' ಎಂದು ನಯನತಾರಾ ಫೀಲ್ ಮಾಡುವಂತೆ ಮಾಡಿದ ಚಿತ್ರವೂ ಇದೇ. ಕೆಲವು ವರ್ಷಗಳ ಹಿಂದೆ ರೇಡಿಯೋ ಸಂದರ್ಶನವೊಂದರಲ್ಲಿ ನಯನತಾರಾ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.

ಎ.ಆರ್. ಮುರುಗದಾಸ್ ನಿರ್ದೇಶನದ 'ಗಜನಿ' ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಮಾತನಾಡಿದ ಅವರು, ಅದು ತಮ್ಮ ಕೆರಿಯರ್‌ನಲ್ಲೇ ತೆಗೆದುಕೊಂಡ ತಪ್ಪು ನಿರ್ಧಾರ ಎಂದು ಹೇಳಿದ್ದಾರೆ. ಆ ಚಿತ್ರದಲ್ಲಿ 'ಚಿತ್ರಾ' ಎಂಬ ಪಾತ್ರದಲ್ಲಿ ನಯನತಾರಾ ನಟಿಸಿದ್ದರು. ಅಸಿನ್ ನಟಿಸಿದ್ದ 'ಕಲ್ಪನಾ' ಪಾತ್ರದಷ್ಟೇ ಪ್ರಾಮುಖ್ಯತೆ ತನ್ನ ಪಾತ್ರಕ್ಕೂ ಇರುತ್ತದೆ ಎಂದು ಅವರು ನಿರೀಕ್ಷಿಸಿದ್ದರು. ಆದರೆ ಸಿನಿಮಾ ಬಿಡುಗಡೆಯಾದಾಗ, ಆ ನಿರೀಕ್ಷೆ ಹುಸಿಯಾದ ಕಾರಣ ನಿರಾಸೆಯಾಯಿತು ಎಂದು ಅವರು ಹಂಚಿಕೊಂಡಿದ್ದಾರೆ. ಈ ಅನುಭವವೇ ಮುಂದೆ ಕಥೆಗಳನ್ನು ಆಯ್ಕೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂಬುದನ್ನು ಕಲಿಸಿತು ಎಂದೂ ನಯನತಾರಾ ತಿಳಿಸಿದ್ದಾರೆ.

ನಂತರ ನಯನತಾರಾ ಅವರು ವಿಜಯ್, ಅಜಿತ್, ಸೂರ್ಯ, ಧನುಷ್, ಸಿಂಬು ಸೇರಿದಂತೆ ತಮಿಳಿನ ಎಲ್ಲಾ ಪ್ರಮುಖ ನಟರೊಂದಿಗೆ ನಟಿಸಿದರು. ಎರಡು ಪ್ರೇಮ ವೈಫಲ್ಯಗಳು ಅವರ ಕೆರಿಯರ್‌ಗೆ ಅಡ್ಡಿಯಾಗಿದ್ದವು. ಒಂದು ಹಂತದಲ್ಲಿ ಪ್ರಭುದೇವ ಅವರನ್ನು ಮದುವೆಯಾಗುವ ನಿರ್ಧಾರ ಮಾಡಿದ್ದ ನಯನತಾರಾ, ಅವರಿಗಾಗಿ ಸಿನಿಮಾವನ್ನೇ ಬಿಡುವ ತೀರ್ಮಾನ ಮಾಡಿದ್ದರು. ಆದರೆ ಕೆಲವು ಭಿನ್ನಾಭಿಪ್ರಾಯಗಳಿಂದ ಇಬ್ಬರೂ ಬೇರೆಯಾದರು. ಆ ಸಮಯದಲ್ಲಿ ನಯನತಾರಾ ಅವರ ಸಿನಿಮಾ ಕೆರಿಯರ್ ಮುಗಿದೇ ಹೋಯಿತು ಎಂದು ಹಲವರು ಮಾತನಾಡಿಕೊಂಡಿದ್ದರು.

ಬ್ಯುಸಿಯಾದ ನಯನತಾರಾ

ಟೀಕೆಗಳಿಗೆಲ್ಲಾ ಉತ್ತರ ನೀಡಲು ನಯನತಾರಾ ಮತ್ತೆ ನಟನೆಗೆ ಮರಳಿ ಸತತ ಹಿಟ್ ಚಿತ್ರಗಳನ್ನು ನೀಡಿದರು. ಇದರಿಂದ ತಮಿಳು ಅಭಿಮಾನಿಗಳೇ ಅವರಿಗೆ "ಲೇಡಿ ಸೂಪರ್‌ಸ್ಟಾರ್" ಎಂಬ ಬಿರುದು ನೀಡಿದರು. ವೈಯಕ್ತಿಕ ಜೀವನದಲ್ಲೂ ಅವರು ಹೊಸ ಅಧ್ಯಾಯ ಆರಂಭಿಸಿದರು. 'ನಾನುಂ ರೌಡಿದಾನ್' ಚಿತ್ರದ ಸಮಯದಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗಿನ ಪ್ರೀತಿ ಮದುವೆಯಲ್ಲಿ ಕೊನೆಗೊಂಡು, ಈಗ ಇಬ್ಬರು ಗಂಡು ಮಕ್ಕಳೊಂದಿಗೆ ಸಂತೋಷವಾಗಿದ್ದಾರೆ. ಇಂದಿಗೂ ಸಿನಿಮಾದಲ್ಲಿ ಬ್ಯುಸಿ ನಾಯಕಿಯಾಗಿರುವ ನಯನತಾರಾ, 'ಮಣ್ಣಂಗಟ್ಟಿ', ಯಶ್ ನಟನೆಯ 'ಟಾಕ್ಸಿಕ್' ಮತ್ತು ಒಂದು ಮಲಯಾಳಂ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.