ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ತಮ್ಮ ವೈಯಕ್ತಿಕ ಜೀವನದ ಕಠಿಣ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪ್ಯಾನಿಕ್ ಅಟ್ಯಾಕ್, ಆತಂಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳಿಂದ ತಾವು ಅನುಭವಿಸಿದ ನೋವನ್ನು ಹಂಚಿಕೊಂಡಿದ್ದಾರೆ.
ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ತಮ್ಮ ವೈಯಕ್ತಿಕ ಜೀವನದ ಕಠಿಣ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪ್ಯಾನಿಕ್ ಅಟ್ಯಾಕ್, ಆತಂಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳಿಂದ ತಾವು ಅನುಭವಿಸಿದ ನೋವನ್ನು ಹಂಚಿಕೊಂಡಿರುವ ಅವರು, ಒಂದು ಹಂತದಲ್ಲಿ ಬದುಕೇ ಹೀಗೆಯೇ ಮುಂದುವರಿಯುತ್ತದೆ ಎಂದುಕೊಂಡಿದ್ದೆ, ಆದರೆ ಈಗ ಸುಧಾರಣೆ ಕಂಡಿದ್ದೇನೆ ಎಂದು ಹೇಳಿದ್ದಾರೆ.
ಕಡಕ್ ಟಾಕ್ಸ್ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ನಮ್ರತಾ, 2025 ಮತ್ತು 2026ರ ವರ್ಷಗಳು ತಮಗೆ ಸಾಕಷ್ಟು ಸವಾಲುಗಳನ್ನು ತಂದಿದ್ದವು ಎಂದು ವಿವರಿಸಿದ್ದಾರೆ. ತಾವು ಹಲವು ವಿಚಾರಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡು, ಕೆಟ್ಟ ಸನ್ನಿವೇಶಗಳ ಬಗ್ಗೆಯೇ ಅತಿಯಾಗಿ ಯೋಚಿಸುವ ಸ್ವಭಾವ ಹೊಂದಿದ್ದೇನೆ. ಹೀಗೆ ಯೋಚಿಸುತ್ತಿದ್ದಾಗ ಕೆಲವೊಮ್ಮೆ ಉಸಿರಾಟದ ತೊಂದರೆ, ಹೃದಯ ಬಡಿತ ಹೆಚ್ಚಾಗುವುದು, ಎದೆ ಬಡಿದುಕೊಳ್ಳುವುದು ಮತ್ತು ಗಂಟಲು ಕಟ್ಟಿಕೊಂಡಂತಾಗುವ ಅನುಭವವಾಗುತ್ತಿತ್ತು ಎಂದು ಹೇಳಿದ್ದಾರೆ.
ಹೃದಯಾಘಾತವಾಗುತ್ತಿದೆ ಎಂದು ಭಯಪಟ್ಟಿದ್ದ ನಟಿ
ಆರಂಭದಲ್ಲಿ ಈ ಲಕ್ಷಣಗಳು ಪ್ಯಾನಿಕ್ ಅಟ್ಯಾಕ್ ಅಥವಾ ಆತಂಕದಿಂದ ಉಂಟಾಗುತ್ತಿವೆ ಎಂಬುದು ನಮ್ರತಾ ಅವರಿಗೆ ತಿಳಿದಿರಲಿಲ್ಲ. ಹೃದಯಾಘಾತದ ಲಕ್ಷಣಗಳೇ ಕಾಣಿಸುತ್ತಿವೆ ಎಂದು ಭಯಪಟ್ಟಿದ್ದ ಅವರು, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇರಬಹುದು ಎಂದುಕೊಂಡು ಹಲವು ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದರು. ಬೆಳಗ್ಗೆ ಎದ್ದ ತಕ್ಷಣವೇ, ‘ಇವತ್ತು ನನಗೆ ಏನಾದರೂ ಆಗಿಬಿಡುತ್ತದೆಯೇ? ನಾನು ಸತ್ತುಹೋಗಬಹುದೇ?’ ಎಂಬ ಭಯ ಕಾಡುತ್ತಿತ್ತು. ಈ ವಿಚಾರಗಳನ್ನು ತಾಯಿ ಮತ್ತು ಆಪ್ತ ಸ್ನೇಹಿತರ ಬಳಿಯೂ ಹೇಳಿಕೊಳ್ಳುತ್ತಿದ್ದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಪರೀಕ್ಷೆಗಳ ಬಳಿಕ ಹೃದಯ ಮತ್ತು ರಕ್ತದ ವರದಿಗಳು ಸರಿಯಾಗಿವೆ ಎಂದು ಹೃದ್ರೋಗ ತಜ್ಞರು ತಿಳಿಸಿದ್ದರು. ಬಳಿಕ ಮನೋವೈದ್ಯರನ್ನು ಭೇಟಿಯಾಗುವಂತೆ ಸಲಹೆ ನೀಡಿದ್ದರು. ವೈದ್ಯರನ್ನು ಸಂಪರ್ಕಿಸಿದಾಗ ತಮಗೆ ಪ್ಯಾನಿಕ್ ಅಟ್ಯಾಕ್ ಮತ್ತು ಆತಂಕದ ಸಮಸ್ಯೆ ಹೆಚ್ಚಾಗಿರುವುದು ತಿಳಿಯಿತು ಎಂದು ನಮ್ರತಾ ಹೇಳಿದ್ದಾರೆ.
ಔಷಧಿ, ಥೆರಪಿಯಿಂದ ಸುಧಾರಣೆ
ಈ ಸಮಸ್ಯೆಗಳಿಂದಾಗಿ ಪ್ರತಿದಿನವೂ ಆರೋಗ್ಯ ಸರಿಯಿಲ್ಲದ ಅನುಭವವಾಗುತ್ತಿತ್ತು. ವಾಂತಿ ಸೇರಿದಂತೆ ದೈಹಿಕ ಲಕ್ಷಣಗಳೂ ಕಾಣಿಸಿಕೊಳ್ಳುತ್ತಿದ್ದವು. ವೈದ್ಯರ ಸಲಹೆಯಂತೆ ಔಷಧಿ ಪಡೆಯಲು ಆರಂಭಿಸಿದೆ. ಔಷಧಿ, ಥೆರಪಿ ಮತ್ತು ವೈದ್ಯರ ಸಹಾಯದಿಂದ ಈಗ ಸಾಕಷ್ಟು ಸುಧಾರಣೆ ಕಂಡಿದ್ದೇನೆ ಎಂದು ತಿಳಿಸಿದ್ದಾರೆ. ಒಂದು ಕಾಲದಲ್ಲಿ ತಾನು ಹೀಗೆಯೇ ಬದುಕಬೇಕು, ಮುಂದಿನ ಜೀವನವೂ ಇದೇ ರೀತಿ ಇರುತ್ತದೆ ಎಂದುಕೊಂಡಿದ್ದೆ. ಆದರೆ ಈಗ ಆ ಸ್ಥಿತಿಯಿಂದ ಹೊರಬಂದು ಮಾತನಾಡಲು ಸಾಧ್ಯವಾಗಿದೆ. ಔಷಧಿಗಳು ಮತ್ತು ಥೆರಪಿ ತನಗೆ ಬಹಳ ಸಹಾಯ ಮಾಡಿವೆ ಎಂದು ನಮ್ರತಾ ಹೇಳಿದ್ದಾರೆ.
ಮಾನಸಿಕವಾಗಿ ಕುಗ್ಗಿದ್ದ ದಿನಗಳು
ಪಾಡ್ಕಾಸ್ಟ್ನಲ್ಲಿ ತಮ್ಮ ಕಠಿಣ ದಿನಗಳನ್ನು ನೆನಪಿಸಿಕೊಂಡ ನಮ್ರತಾ, ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ತುಂಬಾ ಅಸಮಾಧಾನದಿಂದ ಇರುತ್ತಿದ್ದೆ. ಅಳುತ್ತಿದ್ದೆ, ಊಟವನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ಒಂದು ಹಂತದಲ್ಲಿ ಬದುಕನ್ನೇ ಕೊನೆಗೊಳಿಸಬೇಕು ಎಂಬಂತಹ ಆಲೋಚನೆಗಳೂ ಬಂದಿದ್ದವು ಎಂದು ನೋವು ಹಂಚಿಕೊಂಡಿದ್ದಾರೆ. ಈ ವಿಚಾರಗಳನ್ನು ವೈದ್ಯರೊಂದಿಗೆ ಮುಕ್ತವಾಗಿ ಹಂಚಿಕೊಂಡಾಗ ಸಹಾಯ ಪಡೆಯುವುದು ಅಗತ್ಯ ಎಂದು ಅವರು ಸಲಹೆ ನೀಡಿದರು. ಔಷಧಿಗಳಿಂದ ಸುಧಾರಣೆ ಕಂಡ ಬಳಿಕ, ತಮ್ಮ ಇಚ್ಛಾಶಕ್ತಿಯ ಮೂಲಕವೂ ಚೇತರಿಕೆಯ ಪ್ರಯತ್ನ ಮುಂದುವರಿಸಿದೆ ಎಂದು ಹೇಳಿದ್ದಾರೆ.
‘ಸಹಾಯ ಕೇಳಲು ಹಿಂಜರಿಯಬೇಡಿ’ ಎಂದ ನಮ್ರತಾ
ಮಾನಸಿಕ ಆರೋಗ್ಯದ ಸಮಸ್ಯೆಗಳ ಬಗ್ಗೆ ಮಾತನಾಡಲು ಹಲವರು ಹಿಂಜರಿಯುತ್ತಾರೆ. ಜನರು ತಮ್ಮನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬಹುದು, ಮಾನಸಿಕವಾಗಿ ದುರ್ಬಲರು ಎಂದುಕೊಳ್ಳಬಹುದು ಎಂಬ ಭಯ ಇರುತ್ತದೆ. ತಮಗೂ ಈ ರೀತಿಯ ಮುಜುಗರವಿತ್ತು ಎಂದು ನಮ್ರತಾ ಹೇಳಿದ್ದಾರೆ. ಆದರೆ ಇಂತಹ ಸಮಸ್ಯೆಗಳನ್ನು ಒಬ್ಬರೇ ಸಹಿಸಿಕೊಂಡು ಕೂರಬಾರದು. ಅಗತ್ಯವಿದ್ದರೆ ಸಹಾಯ ಕೇಳಬೇಕು, ವೈದ್ಯರನ್ನು ಸಂಪರ್ಕಿಸಬೇಕು. ಸಹಾಯ ಪಡೆಯುವುದು ಮುಖ್ಯ. ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಮಾತನಾಡಿ, ಸೂಕ್ತ ನೆರವು ಪಡೆದು ಸುಧಾರಣೆಯತ್ತ ಹೆಜ್ಜೆ ಇಡಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.












