ಬೆಂಗಳೂರು (ಜು. 21): ಬೆಳಗಾವಿ ಮೂಲದ ಬಹುಭಾಷಾ ನಟಿ ಲಕ್ಷ್ಮೀ ರೈ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಈ ಬಾರಿ ಝಾನ್ಸಿ ಅವತಾರ ಎತ್ತಲಿದ್ದಾರೆ. ಕನ್ನಡದಲ್ಲಿ ಸೆಟ್ಟೇರುತ್ತಿರುವ ‘ಝಾನ್ಸಿ’ ಚಿತ್ರದಲ್ಲಿ ಲಕ್ಷ್ಮೀ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಪತ್ತಿ ವಿಎಸ್ ಗುರುಪ್ರಸಾದ್. ಈ ಹಿಂದೆ ಕೋಮಲ್ ಅಭಿನಯದ ‘ಮರ್ಯಾದೆ ರಾಮಣ್ಣ’ ಚಿತ್ರವನ್ನು ನಿರ್ದೇಶಿಸಿದವರು. ನಿರ್ದೇಶನ, ನಿರ್ಮಾಣ ಅಂತ ಕಳೆದ 38 ವರ್ಷಗಳಿಂದ ಚಿತ್ರರಂಗದಲ್ಲಿರುವ ಗುರುಪ್ರಸಾದ್, ‘ಮರ್ಯಾದೆ ರಾಮಣ್ಣ’ ಚಿತ್ರದ ನಂತರ ಬಂದ ಏಳೆಂಟು ಚಿತ್ರಗಳನ್ನು ಬೇರೆ ಬೇರೆ ಕಾರಣಗಳಿಗೆ ಕೈ ಬಿಟ್ಟವರು. ಈಗ ‘ಝಾನ್ಸಿ’ ಚಿತ್ರ ಶುರು ಮಾಡಿದ್ದಾರೆ.

ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ  ನಟನೆಯ ‘ಮಿಂಚಿನ ಓಟ’, ಉಪೇಂದ್ರ ಜೊತೆ ‘ಕಲ್ಪನಾ’ ಚಿತ್ರದಲ್ಲಿ ನಟಿಸಿದ್ದ ಲಕ್ಷ್ಮೀ ವಾಪಸ್ ಕನ್ನಡಕ್ಕೆ ಬಂದಿರುವುದು ವಿಶೇಷ. ಬಾಂಬೆ ಮೂಲದ ಉದ್ಯಮಿ ರಾಜೇಶ್ ಈ ಚಿತ್ರವನ್ನು  ನಿರ್ಮಾಣ ಮಾಡುತ್ತಿದ್ದು, ಆಗಸ್ಟ್ 29 ಕ್ಕೆ ಅದ್ದೂರಿಯಾಗಿ ಸೆಟ್ಟೇರಲಿದೆ.

‘ಸದ್ಯಕ್ಕೆ ನಾನು ಸಿಂಹಪುರಿಯ ಸಿಂಹ’ ಚಿತ್ರದಲ್ಲಿ  ಬ್ಯುಸಿಯಾಗಿದ್ದೇನೆ. ಈ ನಡುವೆ ನಾನೇ ಬರೆದುಕೊಂಡಿದ್ದ  ಕತೆಯನ್ನು ‘ಝಾನ್ಸಿ’ ಹೆಸರಿನಲ್ಲಿ ಮಾಡುತ್ತಿದ್ದು, ಇಲ್ಲಿ ಟೈಟಲ್  ರೋಲ್ ಮಾಡುವುದಕ್ಕೆ ಲಕ್ಷ್ಮೀ ರೈ ಒಪ್ಪಿಕೊಂಡಿದ್ದಾರೆ. ಆರು ಚಿತ್ರಗಳು ಅವರ ಕೈಯಲ್ಲಿದ್ದು, ಎಲ್ಲದರ ಚಿತ್ರೀಕರಣ  ನಡೆಯುತ್ತಿದೆ. ಆದರೂ ನನಗೆ ಕಾಲ್‌ಶೀಟ್ ಕೊಟ್ಟಿದ್ದಾರೆ. ಅದಕ್ಕೆ  ಕಾರಣ ಚಿತ್ರದ ಕತೆ ಮತ್ತು ಝಾನ್ಸಿ ಪಾತ್ರ.

ಅವರೇ ಚಿತ್ರದ ಕತೆಯನ್ನು ತರಿಸಿಕೊಂಡು ಓದಿದ ಮೇಲೆ ಶೂಟಿಂಗ್  ನಡೆಯುತ್ತಿದ್ದ ಕೊಡೈಕೆನಾಲ್‌ಗೆ ನನ್ನ ಕರೆಸಿಕೊಂಡು ಝಾನ್ಸಿ ಚಿತ್ರದಲ್ಲಿ ಮಾಡುತ್ತಿರುವುದಾಗಿ ಹೇಳಿದರು. ಇದು ಯಾವ ರೀತಿಯ ಕತೆ ಎಂಬುದನ್ನು ಆಗಸ್ಟ್ 29 ರಂದೇ ಹೇಳುತ್ತೇನೆ.’ ಎನ್ನುತ್ತಾರೆ ನಿರ್ದೇಶಕ ಗುರುಪ್ರಸಾದ್.