ನಟಿ ಅನ್ನಾ ರಾಜನ್ ತಮ್ಮ ಇನ್‌ಸ್ಟಾಗ್ರಾಂ ಸಬ್‌ಸ್ಕ್ರಿಪ್ಷನ್ ಬಗ್ಗೆ ಎದ್ದಿದ್ದ ಚರ್ಚೆಗಳಿಗೆ ಉತ್ತರ ನೀಡಿದ್ದಾರೆ. ಸಬ್‌ಸ್ಕ್ರಿಪ್ಷನ್ ಒಂದು ಆದಾಯದ ಮೂಲ ಅನ್ನೋದು ನಿಜ, ಆದರೆ ಇನ್‌ಸ್ಟಾಗ್ರಾಂನ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಕೆಟ್ಟ ಕಂಟೆಂಟ್ ಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಲಯಾಳಂನ 'ಅಂಗಮಾಲಿ ಡೈರೀಸ್' ಸಿನಿಮಾ ಮೂಲಕ ಫೇಮಸ್ ಆದ ನಟಿ ಅನ್ನಾ ರಾಜನ್, ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್. ಇತ್ತೀಚೆಗೆ ಅನ್ನಾ, ತಮ್ಮ ಇನ್‌ಸ್ಟಾಗ್ರಾಂ ಸಬ್‌ಸ್ಕ್ರಿಪ್ಷನ್‌ಗೆ ಎಲ್ಲರನ್ನೂ ಸ್ವಾಗತಿಸಿ ಒಂದು ವಿಡಿಯೋ ಹಾಕಿದ್ದರು. ಇದನ್ನು ನೋಡಿದ ಅನೇಕರು, ಅನ್ನಾ ಈಗಷ್ಟೇ ಸಬ್‌ಸ್ಕ್ರಿಪ್ಷನ್ ಶುರು ಮಾಡಿದ್ದಾರೆ ಅಂದುಕೊಂಡಿದ್ದರು. ಆದರೆ, ಈ ಬಗ್ಗೆ ಸ್ವತಃ ಅನ್ನಾ ರಾಜನ್ ಸ್ಪಷ್ಟನೆ ನೀಡಿದ್ದು, ತಾನು ಮೂರೂವರೆ ವರ್ಷಗಳ ಹಿಂದೆಯೇ ಈ ಫೀಚರ್ ಶುರು ಮಾಡಿದ್ದಾಗಿ ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿದ್ದರೆ ಸಿನಿಮಾ ಅವಕಾಶ ಸಿಗುತ್ತೆ ಅನ್ನೋದು ಸುಳ್ಳು ಅಂತ ಅನ್ನಾ ರಾಜನ್ ಸ್ಪಷ್ಟಪಡಿಸಿದ್ದಾರೆ. "ಇನ್‌ಸ್ಟಾಗ್ರಾಂ ಮತ್ತು ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಅದು ಬೇರೆಯೇ ಪ್ರಪಂಚ. ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದರೆ ಸಿನಿಮಾ ಸಿಗುತ್ತೆ ಅಂತ ನಾನು ಹೇಳಲ್ಲ, ಹಾಗೆ ಸಿಗುವುದೂ ಇಲ್ಲ. ನಟನಾ ಕೌಶಲ್ಯ ಇದ್ದರೆ ಮಾತ್ರ ಅವಕಾಶಗಳು ಸಿಗುತ್ತವೆ. ಹಿಂದಿನ ಸಿನಿಮಾಗಳ ಯಶಸ್ಸು ಕೂಡಾ ಮುಖ್ಯವಾಗುತ್ತದೆ," ಎಂದು ಅನ್ನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂ ಸಬ್‌ಸ್ಕ್ರಿಪ್ಷನ್ ಬಗ್ಗೆ ಮಾತನಾಡಿದ ಅವರು, "ಮೊದಮೊದಲು ನನಗೆ ಇನ್‌ಸ್ಟಾಗ್ರಾಂ ಜಗತ್ತು ಅಂದ್ರೆ ಭಯ ಇತ್ತು. ಹೇಗೋ ಮಾಡಿ ಅದಕ್ಕೆ ಕಾಲಿಟ್ಟೆ. ನಾನು ಸಬ್‌ಸ್ಕ್ರಿಪ್ಷನ್ ಶುರು ಮಾಡಿ ಈಗಾಗಲೇ ಮೂರೂವರೆ ವರ್ಷಗಳಾಗಿವೆ. ಮೊಬೈಲ್ ಬಂದಾಗ ಮೊದಲು ಏನು ಹೇಳುತ್ತಿದ್ದರು? ಮಕ್ಕಳಿಗೆ ಕೊಡಬಾರದು, ಅದು ಹಾಳು, ಇದು ಹಾಳು ಅಂತೆಲ್ಲಾ ಹೇಳಿದರು. ಈಗ ಮೊಬೈಲ್ ಇಲ್ಲದವರು ಇದ್ದಾರಾ? ಎಲ್ಲದರಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತೆ. ನಾವು ಬಳಸುವ ರೀತಿ ಮುಖ್ಯ," ಎಂದರು.

"ನನ್ನ ಸಬ್‌ಸ್ಕ್ರಿಪ್ಷನ್ ಚಾಟ್‌ನಲ್ಲಿ ಕೆಲವರು, 'ಅಕ್ಕಾ, ಇದರಲ್ಲಿ ಏನೂ ಇಲ್ಲವಲ್ಲಾ? ಇದಕ್ಕಿಂತ 'ನೀಲಕುಯಿಲ್' ಸೀರಿಯಲ್ ನೋಡೋದು ವಾಸಿ' ಅಂತ ಮೆಸೇಜ್ ಮಾಡ್ತಾರೆ. ಆದರೆ, ಇನ್ನು ಕೆಲವರು ನನ್ನನ್ನು ಸಪೋರ್ಟ್ ಮಾಡ್ತಾರೆ. 'ಪಾಪ, ಆ ಹುಡುಗಿ ನಿಮಗೊಂದು ಹಾಯ್ ಆದ್ರೂ ಹೇಳ್ತಿದ್ದಾಳಲ್ಲ' ಅಂತ ನನಗೆ ಬೆಂಬಲವಾಗಿ ನಿಲ್ತಾರೆ. ಒಂದು ಸತ್ಯ ಒಪ್ಪಿಕೊಳ್ಳಬೇಕು, ಇದರಿಂದ ಒಳ್ಳೆ ದುಡ್ಡು ಕೈಗೆ ಬರುತ್ತೆ. ಯಾರು ಏನೇ ಅಂದರೂ ಇದೊಂದು ಒಳ್ಳೆಯ ಆದಾಯದ ಮೂಲ," ಎಂದು ಅನ್ನಾ ಒಪ್ಪಿಕೊಂಡರು.

ವಾರ್ನಿಂಗ್ ಕೊಟ್ಟರು

"ಸಬ್‌ಸ್ಕ್ರಿಪ್ಷನ್ ಹೆಸರಲ್ಲಿ ಕೆಲವರು ಏನೇನೋ ಹಾಕ್ತಾರೆ. ಆದರೆ ಇನ್‌ಸ್ಟಾಗ್ರಾಂ ಈಗ ತುಂಬಾನೇ ಸ್ಟ್ರಿಕ್ಟ್ ಆಗಿದೆ. ಒಮ್ಮೆ ಒಬ್ಬ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ. ಅದಕ್ಕೆ ನಾನು 'ನಿಮ್ಮ ಮನೆಯವರನ್ನು ನೆನಪಿಸಿಕೊಳ್ತೀನಿ' ಅಂತ ರಿಪ್ಲೈ ಮಾಡಿದ್ದೆ. ತಕ್ಷಣ ನನ್ನ ಪೇಜ್ ಅನ್ನೇ ತೆಗೆದುಹಾಕಿ, ವಾರ್ನಿಂಗ್ ಕೊಟ್ಟರು. ಅಷ್ಟರಮಟ್ಟಿಗೆ ಅವರು ಫಿಲ್ಟರ್ ಮಾಡ್ತಾರೆ. ಹಾಗಾಗಿ ಕೆಟ್ಟ ಕಂಟೆಂಟ್ ಹಾಕೋಕೆ ಸಾಧ್ಯವೇ ಇಲ್ಲ," ಎಂದು ಅನ್ನಾ ವಿವರಿಸಿದ್ದಾರೆ. ಒಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅನ್ನಾ ಈ ಎಲ್ಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.