ನವದೆಹಲಿ(ಏ.10):‘ರಾಮಾಯಣ’ ಧಾರಾವಾಹಿಯಲ್ಲಿ ಸುಗ್ರೀವನ ಪಾತ್ರ ನಿರ್ವಹಿಸಿದ್ದ ಖ್ಯಾತ ನಟ ಶ್ಯಾಮಸುಂದರ್‌ ಕಲಾನಿ ಅವರು ಗುರುವಾರ ನಿಧನರಾಗಿದ್ದಾರೆ ಎಂದು ನಟ, ನಿರ್ಮಾಪಕ ಅರುಣ್ ಗೋವಿಲ್ ಅವರು ಟ್ವೀಟ್‌ ಮಾಡಿದ್ದಾರೆ. 

80-90ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ರಮಾನಂದ ಸಾಗರ್‌ ಅವರ ನಿರ್ದೇಶನದ ರಾಮಾಯಣ ಧಾರಾವಾಹಿಯಲ್ಲಿ ಶ್ಯಾಮಸುಂದರ್‌ ಅವರು ಸುಗ್ರೀವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶ್ಯಾಮಸುಂದರ್‌ ಅವರು ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್‌ನಿಂದಾಗಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. 

 

ರಾಮಾಯಣ ಮತ್ತೊಮ್ಮೆ ಸೂಪರ್‌ಹಿಟ್‌: ಭರ್ಜರಿ 17 ಕೋಟಿ ವೀಕ್ಷಕರು!

ಕಲಾನಿ ನಿಧನಕ್ಕೆ ರಾಮನ ಪಾತ್ರ ನಿರ್ವಹಿಸಿದ ಅರುಣ್‌ ಗೋವಿಲ್‌, ಲಕ್ಷ್ಮಣನ ಪಾತ್ರ ನಿರ್ವಹಿಸಿದ ಸುನಿಲ್‌ ಲಾಹ್ರಿ ಸೇರಿದಂತೆ ಇನ್ನೂ ಅನೇಕ ಗಣ್ಯರು ಗುರುವಾರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದ ಬೆನ್ನಲ್ಲೇ ದೂರದರ್ಶನ ಇದೇ ಧಾರಾವಾಹಿಯನ್ನು ಮಾರ್ಚ್‌ 28ರಿಂದ ಮರುಪ್ರಸಾರ ಮಾಡುತ್ತಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 9 ಗಂಟೆಯಿಂದ ಪ್ರಸಾರವಾಗುತ್ತಿದೆ.