ಕಾವೇರಿಗಾಗಿ ಕರ್ನಾಟಕ ಬಂದ್: ಶಿವಣ್ಣ ನೇತೃತ್ವದಲ್ಲಿ ಕನ್ನಡ ಚಿತ್ರರಂಗದಿಂದ ಹೋರಾಟಕ್ಕೆ ಬೆಂಬಲ!
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಸ್ಯಾಂಡಲ್ವುಡ್ ಕೂಡ ಬಂದ್‌ಗೆ ಬೆಂಬಲಿಸಿದೆ. ಶಿವರಾಜ್ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ.

ಬೆಂಗಳೂರು (ಸೆ.29): ಕನ್ನಡಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಈ ಹೋರಾಟಕ್ಕೆ ಕನ್ನಡ ಚಿತ್ರರಂಗ ಕೂಡ ಬೆಂಬಲ ಸೂಚಿಸಿತ್ತು. ಚಿತ್ರೋದ್ಯಮ ಬಂದ್ ಮಾಡುವ ಮೂಲಕ ಹೋರಾಟಕ್ಕೆ ಇಳಿಯುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬುಧವಾರ ಹೇಳಿಕೆ ನೀಡಿತ್ತು. ಆದರೆ, ಈ ಹೋರಾಟದ ನೇತೃತ್ವವನ್ನು ವಹಿಸುವವರು ಯಾರು ಎನ್ನುವ ಪ್ರಶ್ನೆ ಕೂಡ ಮೂಡಿತ್ತು.
ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶಿವರಾಜ್ ಕುಮಾರ್ ನಿವಾಸಕ್ಕೆ ಆಗಮಿಸಿ, ನಾಳೆಯ ಹೋರಾಟಕ್ಕೆ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಹೀಗಾಗಿ ಶಿವರಾಜ್ ಕುಮಾರ್ ನೇತೃತ್ವದಲ್ಲಿ ನಾಳೆ ಗುರುರಾಜ್ ಕಲ್ಯಾಣ ಮಂಟಪದ ಬಳಿ ಚಿತ್ರೋದ್ಯಮ ಹೋರಾಟಕ್ಕೆ ಇಳಿಯಲಿದೆ. ಸಾಕಷ್ಟು ವರ್ಷಗಳಿಂದ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸೆ.29ರಂದು ಕರ್ನಾಟಕ ಬಂದ್ ಕರೆ ನೀಡಿದ್ದು, ಸೀರಿಯಲ್, ಸಿನಿಮಾ ಚಿತ್ರೀಕರಣ, ಚಿತ್ರ ಪ್ರದರ್ಶನ ಸೇರಿದಂತೆ ಎಲ್ಲಾ ಚಟುವಟಿಕೆಗಳು ಬಂದ್ ಮೂಲಕ ಚಿತ್ರೋದ್ಯಮ ಸಾಥ್ ನೀಡುತ್ತಿದೆ.
ಬಂದ್ ಹೆಸರಲ್ಲಿ ಜನರಿಗೆ ತೊಂದರೆ ಮಾಡಿದರೆ ಕ್ರಮ: ಡಿ.ಕೆ.ಶಿವಕುಮಾರ್
ಪ್ರತಿಭಟನೆಯಲ್ಲಿ ಶಿವಣ್ಣ, ಉಪೇಂದ್ರ, ರಾಘಣ್ಣ, ನೆನಪಿರಲಿ ಪ್ರೇಮ್, ಅಜಯ್ ರಾವ್, ಪ್ರಜ್ವಲ್ ದೇವರಾಜ್, ರಂಗಾಯಣ ರಘು, ಸಾಧು ಕೋಕಿಲಾ ಸೇರಿದಂತೆ ಕಿರುತೆರೆ ನಟ- ನಟಿಯರು ಭಾಗಿಯಾಗುವ ಸಾಧ್ಯತೆ ಇದೆ. ಫಿಲ್ಮ್ ಚೇಂಬರ್ ಅಂಗ ಸಂಸ್ಥೆಗಳಾದ, ನಿರ್ಮಾಪಕರ ಸಂಘ, ಕಲಾವಿದರ ಸಂಘ, ನಿರ್ದೇಶಕರ ಸಂಘದಿಂದ, ಒಕ್ಕೂಟದಿಂದಲೂ ಕರ್ನಾಟಕ ಬೆಂಬಲಿಸಲಿದ್ದಾರೆ. ಇಂದು ಸಂಜೆಯವರೆಗೆ ಯಾವುದೇ ಸಿನಿಮಾ ಪ್ರದರ್ಶನ ಇರುವುದಿಲ್ಲ. ಹಲವು ಕಲಾವಿದರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದು, ಶೂಟಿಂಗ್ ಕೂಡ ಇರುವುದಿಲ್ಲ.