ಬಂದ್ ಹೆಸರಲ್ಲಿ ಜನರಿಗೆ ತೊಂದರೆ ಮಾಡಿದರೆ ಕ್ರಮ: ಡಿ.ಕೆ.ಶಿವಕುಮಾರ್
ರಾಜ್ಯದ ಹಿತರಕ್ಷಣೆಗೆ ಪ್ರತಿಭಟನೆ ಮಾಡಲು ನಾವು ಸಹಕಾರ ನೀಡುತ್ತೇವೆ. ಯಾರ ಹೋರಾಟಗಳಿಗೂ ಸರ್ಕಾರ ಅಡ್ಡಿಪಡಿಸುವುದಿಲ್ಲ. ಆದರೆ ಬಂದ್ ಹೆಸರಿನಲ್ಲಿ ಜನರಿಗೆ ತೊಂದರೆ ಮಾಡಬಾರದು. ಶಾಂತಿಯುತ ಹೋರಾಟಗಳಿಗೆ ಸರ್ಕಾರದ ಸಹಕಾರ ಇದ್ದೇ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಸೆ.28): ರಾಜ್ಯದ ಹಿತರಕ್ಷಣೆಗೆ ಪ್ರತಿಭಟನೆ ಮಾಡಲು ನಾವು ಸಹಕಾರ ನೀಡುತ್ತೇವೆ. ಯಾರ ಹೋರಾಟಗಳಿಗೂ ಸರ್ಕಾರ ಅಡ್ಡಿಪಡಿಸುವುದಿಲ್ಲ. ಆದರೆ ಬಂದ್ ಹೆಸರಿನಲ್ಲಿ ಜನರಿಗೆ ತೊಂದರೆ ಮಾಡಬಾರದು. ಶಾಂತಿಯುತ ಹೋರಾಟಗಳಿಗೆ ಸರ್ಕಾರದ ಸಹಕಾರ ಇದ್ದೇ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟಿಸುವುದು ಪ್ರಜಾಪ್ರಭುತ್ವದ ಹಕ್ಕು, ಯಾವ ಪಕ್ಷದವರಿಗೂ ತೊಂದರೆ, ಅಡಚಣೆ ಮಾಡಲು ನಾವು ಮುಂದಾಗುವುದಿಲ್ಲ. ನಾವು ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ನಮ್ಮ ಪಕ್ಷದವರು ಸಹ ಏನು ಮಾಡುವುದು ಎಂದು ಕೇಳಿದರು. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡಿ ಎಂದು ಹೇಳಿದ್ದೇವೆ ಎಂದರು. ತನ್ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ನವರಿಗೂ ಪ್ರತಿಭಟನೆಗೆ ಬೆಂಬಲ ನೀಡಲು ಸೂಚಿಸಿರುವುದಾಗಿ ಹೇಳಿದರು.
ಪ್ರಚಾರಕ್ಕಾಗಿ ಬಂದ್ ಗೆ ಕರೆ ನೀಡಬಾರದು: ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪು ಬಾಕಿ ಇದೆ. ಮಾಧ್ಯಮಗಳಲ್ಲಿ ಹೆಸರು ಬರುತ್ತದೆ, ಪ್ರಚಾರ ಸಿಗುತ್ತದೆ ಎಂದು ಹೋರಾಟಕ್ಕೆ ಕರೆ ನೀಡಿದರೆ ಲಾಭವೇನು? ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದರೆ ಏನು ಮಾಡುತ್ತಾರೆ ಎಂದು ಬಂದ್‌ಗೆ ಕರೆ ನೀಡಿದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸೆ.29ಕ್ಕೆ ಮತ್ತೊಂದು ಬಂದ್ ಅಗತ್ಯವಿಲ್ಲ, ಮಳೆಗಾಗಿ ಪ್ರಾರ್ಥನೆ ಮಾಡೋಣ: ಡಿ.ಕೆ.ಶಿವಕುಮಾರ್
ಹೋರಾಟಗಳಿಂದ ಕಾನೂನಾತ್ಮಕ ತೊಂದರೆ ಆಗುವುದಿಲ್ಲವೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಂತ್ರಿಯಾಗಿ ಇದಕ್ಕೆ ಉತ್ತರ ನೀಡಲು ಆಗುವುದಿಲ್ಲ. ನ್ಯಾಯಾಲಯಕ್ಕೆ ಹಾಗೂ ಜನ ಇಬ್ಬರಿಗೂ ಗೌರವ ಕೊಡಬೇಕು. ಜನ ಸಹಕಾರ ಕೊಡದೇ ಇದ್ದರೆ ಬಂದ್ ಎನ್ನುವ ಹೋರಾಟಕ್ಕೆ ಮರ್ಯಾದೆ ಇರುವುದಿಲ್ಲ. ಡೆವಿಲ್ ಅಂಡ್ ದಿ ಡೀಪ್ ಸೀ (ದೆವ್ವ ಹಾಗೂ ಆಳವಾದ ಸಮುದ್ರ) ಪರಿಸ್ಥಿತಿಯಲ್ಲಿದ್ದೇವೆ. ಹೇಗೆ ಉತ್ತರಿಸುವುದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.