ಒಂದು ವಿಶೇಷವಾದ ಕಾಂಬಿನೇಷನ್‌ ಜತೆಯಾಗುತ್ತಿದೆ. ನಿರ್ದೇಶಕರಾಗಿ ಸಿಂಪಲ್‌ ಸುನಿ, ನಿರ್ಮಾಪಕರಾಗಿ ಪುಷ್ಕರ್‌ ಮಲ್ಲಿಕಾರ್ಜುನಯ್ಯ, ನಾಯಕ ನಟರಾಗಿ ಶರಣ್‌. ಈ ಮೂವರು ಸೇರಿ ಹೊಸ ವರ್ಷಕ್ಕೆ ಹೊಸ ರೀತಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ ಎಂಬುದು ಸದ್ಯದ ಹಾಟ್‌ ಟಾಪಿಕ್‌. 

ಈಗಷ್ಟೇ ಮಾತುಕತೆ ಮಾಡಿಕೊಂಡಿದ್ದು, ಜನವರಿ 16ಕ್ಕೆ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆಯಲಿದ್ದು, ಜನವರಿ 20ರಿಂದ ರೆಗ್ಯುಲರ್‌ ಶೂಟಿಂಗ್‌ ನಡೆಯಲಿದೆ. ಇದು ಪುಷ್ಕರ್‌ ಅವರೇ ಸೋಲೋ ನಿರ್ಮಾಪಕರಾಗಿರುವ ಸಿನಿಮಾ. ಸುನಿ ಮತ್ತು ಶರಣ್‌ ಕಾಂಬಿನೇಷನ್‌ ಅಂದ ಮೇಲೆ ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಸ್ವತಃ ನಟ ಶರಣ್‌ ಕೂಡ ಈ ಚಿತ್ರದ ಬಗ್ಗೆ ಎಕ್ಸೈಟ್‌ ಆಗಿದ್ದಾರೆ. ಚಿತ್ರದ ಕುರಿತು ಶರಣ್‌, ಪುಷ್ಕರ್‌, ಸುನಿ ಹೇಳಿದ್ದೇನು?

ಮಹಾಭಾರತದ ಎಪಿಸೋಡ್‌: ಪುಷ್ಕರ್‌

ನನಗೆ ಹಾಸ್ಯದಿಂದ ಕೂಡಿರುವ ಸಿನಿಮಾಗಳೆಂದರೆ ನನಗೆ ಇಷ್ಟ. ಹೀಗಾಗಿ ಶರಣ್‌ ಜತೆ ಸಿನಿಮಾ ಮಾಡುವುದಕ್ಕೆ ತುಂಬಾ ಖುಷಿ ಆಗುತ್ತಿದೆ. ಇನ್ನೂ ಸಿಂಪಲ್‌ ಸುನಿ ನಿರ್ದೇಶನ ಅಂದ ಮೇಲೆ ಹಾಸ್ಯಕ್ಕೆ ಕೊರತೆ ಇರಲ್ಲ ಎನ್ನುವ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಅವರು ತಮ್ಮ ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರುವ ಕತೆ ಮಹಾಭಾರತದಲ್ಲಿ ಬರುವ ತ್ರಿಶಂಕು ಎಪಿಸೋಡ್‌. ಇದನ್ನು ಚಿತ್ರದ ಕತೆಗೆ ಅಡಾಪ್ಟ್‌ ಮಾಡಿಕೊಂಡಿರುವುದೇ ವಂಡರ್‌ಫುಲ್‌ ಯೋಚನೆ ಆಗಿದ್ದು, ಇದೇ ಸಿನಿಮಾ ಮಜಾ ಎಂಬುದು ಪುಷ್ಕರ್‌ ಹೇಳಿಕೊಳ್ಳುತ್ತಾರೆ. ಸದ್ಯಕ್ಕೆ ಇವರ ನಿರ್ಮಾಣದ ನಳಮಹರಾಜ ಭೀಮಸೇನ ಹಾಗೂ ಅವನೇ ಶ್ರೀಮನ್ನಾರಾಯಣ, ಚಾರ್ಲಿ ಚಿತ್ರಗಳು ಬಿಡುಗಡೆಯಾಗಬೇಕಿದೆ.

ಸವಾಲಿನ ಪಾತ್ರ: ಶರಣ್‌

ಮುಂದಿನ 2019ನೇ ವರ್ಷದಲ್ಲಿ ಹೊಸ ರೀತಿಯಲ್ಲಿ ನನ್ನ ಖಾತೆ ತೆರೆದುಕೊಳ್ಳುತ್ತಿದೆ. ನಮ್ಮ ಈ ಕಾಂಬಿನೇಷನ್‌ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದು ನನ್ನ ರೆಗ್ಯುಲರ್‌ ಸಿನಿಮಾ ಅಲ್ಲ. ಹಾಗಂತ ಇದು ಪ್ರಯೋಗವಲ್ಲ. ನನ್ನ ಜಾನರ್‌ನಲ್ಲೇ ಹೊಸದಾಗಿ ಪ್ರಯತ್ನ ಮಾಡುತ್ತಿರುವ ಸಿನಿಮಾ. ಹೀಗಾಗಿ ಕಾಮಿಡಿ ಬಿಟ್ಟು ಹೊರಗೆ ಹೋಗಲ್ಲ. ಆದರೆ, ಒಂದು ಸವಾಲಿನ ಪಾತ್ರ ಇಲ್ಲಿದೆ. ನನಗೇ ಸವಾಲು ಸ್ವೀಕರಿಸುವುದು ತುಂಬಾ ಇಷ್ಟ. ಯಾಕೆಂದರೆ ನನ್ನ ಹಿಂದಿನ ಚಿತ್ರದಲ್ಲಿ ಕತೆ ಬೇಡಿಕೆಗೆ ತಕ್ಕಂತೆ 35- 40ರಷ್ಟುದೃಶ್ಯಗಳಲ್ಲಿ ಲೇಡಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಹೀಗಾಗಿ ಸುನಿ ಜತೆ ಮಾಡುತ್ತಿರುವ ಸಿನಿಮಾದ್ದು, ನಾನು ಇದುವರೆಗೂ ಟಚ್‌ ಮಾಡದ ಕತೆ. ಹ್ಯೂಮರ್‌ ಬರೆಯುವುದು ಕೂಡ ಒಂದು ಆರ್ಟ್‌. ಅದನ್ನು ಅದ್ಭುತವಾಗಿ ಮಾಡಿಕೊಂಡಿದ್ದಾರೆ. ಇನ್ನೂ ಪುಷ್ಕರ್‌ ಅವರು ತುಂಬಾ ಕ್ಲ್ಯಾರಿಟಿ ಇರುವ ನಿರ್ಮಾಪಕ. ಹೀಗಾಗಿ ಇದೊಂದು ಎಂಟರ್‌ಟೈನ್‌ಮೆಂಟ್‌ ಪ್ಯಾಕೇಜ್‌ ಟೀಮ್‌.

ಒಳ್ಳೆಯ ತಂಡ: ಸಿಂಪಲ್‌ ಸುನಿ

ನನ್ನ ನಿರ್ದೇಶನದ ‘ಬಜಾರ್‌’ ಇನ್ನೇನು ತೆರೆಗೆ ಬರುತ್ತಿದೆ. ಇದರ ನಡುವೆ ನಟ ಶರಣ್‌ ಅವರೊಂದಿಗೆ ಸಿನಿಮಾ ಮಾಡುವುದಕ್ಕೆ ಒಪ್ಪಿಕೊಂಡಿದ್ದೇನೆ. ಮಹಾಭಾರತದ ಕತೆಯನ್ನು ಮನರಂಜನೆಯಾಗಿ ಈ ಕಾಲಕ್ಕೆ ಹೇಳುವಂತಹ ಪ್ರಯತ್ನ ಇದು. ಶರಣ್‌ ಅವರ ಇಮೇಜ್‌ಗೆ ತಕ್ಕಂತೆ ಈ ಸಿನಿಮಾ ಮೂಡಿ ಬರಲಿದೆ. ಚಿತ್ರದ ನಾಯಕಿ, ಚಿತ್ರದ ಹೆಸರು ಹಾಗೂ ಉಳಿದ ತಾರಾಗಣ ಇನ್ನಷ್ಟೆಆಯ್ಕೆ ಆಗಬೇಕಿದೆ.