ಬಾಲಿವುಡ್ ನಟ ರಣವೀರ್ ಸಿಂಗ್‌ನಂಥಾ ಲುಕ್ ಮತ್ತು ದೇಹಧಾರ್ಡ್ಯ ಹೊಂದಿರುವ ಧೀರೇನ್ ಸಿದ್ಧರಾಗಿಯೇ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇವರ ಹಿನ್ನೆಲೆಯೇ ಇವರ ದೊಡ್ಡ ಶಕ್ತಿ. ನಟ ರಾಮ್ ಕುಮಾರ್ ಪುತ್ರ ಇವರು. 

ಬೆಂಗಳೂರು (ಅ. 08): ಚೂಪಾದ ಹುರಿ ಮೀಸೆ, ಭಾರಿ ಗಡ್ಡ, ಗಮನ ಸೆಳೆಯುವ ಹೇರ್ ಸ್ಟೈಲ್ ಜೊತೆಗೆ ಫೋಟೋಶೂಟ್ ಮಾಡಿಸಿಕೊಂಡಾಗಲೇ ಧೀರೇನ್ ರಾಮ್‌ಕುಮಾರ್ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ ಅನ್ನುವುದು ಸಾಬೀತಾಗಿತ್ತು.

ಇದೀಗ ಚಿತ್ರರಂಗ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಪ್ರಖ್ಯಾತ ನಿರ್ಮಾಪಕ ಜಯಣ್ಣ- ಭೋಗೇಂದ್ರ ಅವರು ರಾಮ್‌ಕುಮಾರ್ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಯಶ್ ಅಭಿನಯದ ‘ಮೈ ನೇಮ್ ಇಸ್ ಕಿರಾತಕ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಯಶ್ ಸಿನಿಮಾ ಮುಗಿದ ಕೂಡಲೇ ಈ ಚಿತ್ರ ಆರಂಭವಾಗಲಿದೆ.

ಬಾಲಿವುಡ್ ನಟ ರಣವೀರ್ ಸಿಂಗ್‌ನಂಥಾ ಲುಕ್ ಮತ್ತು ದೇಹಧಾರ್ಡ್ಯ ಹೊಂದಿರುವ ಧೀರೇನ್ ಸಿದ್ಧರಾಗಿಯೇ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇವರ ಹಿನ್ನೆಲೆಯೇ ಇವರ ದೊಡ್ಡ ಶಕ್ತಿ. ತಾತ ಡಾ.ರಾಜ್ ಕುಮಾರ್, ತಂದೆ ರಾಮ್‌ಕುಮಾರ್, ಮಾವಂದಿರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಎಲ್ಲರೂ ಕನ್ನಡ ಚಿತ್ರರಂಗದ ಆಸ್ತಿಗಳು. ಇದೀಗ ಅವರ ದಾರಿಯಲ್ಲೇ ಧೀರೇನ್ ಬಂದಿದ್ದಾರೆ.

ಧೀರೇನ್ ಅವರು ರಾಮ್‌ಕುಮಾರ್- ಪೂರ್ಣಿಮಾ ಅವರ ಪುತ್ರ. ಈಗ ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಬ್ಯಾನರ್ ಮೂಲಕ ಸಿನಿಮಾ ಜಗತ್ತಿಗೆ ಕಾಲಿಡುತ್ತಿದ್ದು, ಅದಕ್ಕೆ ತೆರೆ ಮರೆಯಲ್ಲಿ ಸಿದ್ಧತೆ ಶುರುವಾಗಿದೆ. ಈ ಹಿಂದೆ ಧೀರೇನ್ ರಾಮ್‌ಕುಮಾರ್ ಸಿನಿಮಾ ಎಂಟ್ರಿ ಕುರಿತು ಈ ಹಿಂದೆಯೇ ಚರ್ಚೆ ಆಗಿತ್ತು.

ಅದಕ್ಕೆ ಕಾರಣವಾಗಿದ್ದು ಧೀರೇನ್ ಮಾಡಿಸಿದ್ದ ಚೆಂದದ ಫೋಟೋಶೂಟ್. ಆನಂತರ ಏನಾಯಿತು ಎನ್ನುವ ಹೊತ್ತಿಗೀಗ ಗಾಂಧಿನಗರದ ಬಹು ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಜಯಣ್ಣ ಕಂಬೈನ್ಸ್ ಮೂಲಕ ಧೀರೇನ್ ಸಿನಿಮಾ ಎಂಟ್ರಿಗೆ ತಯಾರಿ ನಡೆಯುತ್ತಿದೆ.

ಧೀರೇನ್ ಚಿತ್ರರಂಗಕ್ಕೆ ಬರಬೇಕು ಅಂತಲೇ ನಟನೆ ತರಬೇತಿ ಪಡೆದುಕೊಂಡಿದ್ದರು. ಅಲ್ಲದೇ ಸಿಕ್ಸ್ ಪ್ಯಾಕ್ ಮಾಡಿಸಿಕೊಂಡು ಸಿದ್ಧರಾಗಿದ್ದರು. ಈಗ ಡಾನ್ಸ್, ಫೈಟು, ಜಿಮ್ ವರ್ಕೌಟ್ ಜತೆಗೆ ನಟನೆಯಲ್ಲೂ ಪಕ್ಕಾ ಆಗಿದ್ದಾರೆ. ಹಾಗಾಗಿಯೇ ನಿರ್ಮಾಪಕ ಜಯಣ್ಣ ಸಿನಿಮಾ ನಿರ್ಮಾಣಕ್ಕೂ ರೆಡಿ ಆಗಿದ್ದಾರೆ. ಧೀರೇನ್ ಲುಕ್‌ಗೆ, ಗೆಟಪ್ಗೆ ತಕ್ಕಂತೆ ಪಕ್ಕಾ ಯೂತ್‌ಫುಲ್ ಕತೆಯನ್ನು ನಿರ್ದೇಶಕ ಅನಿಲ್ ರೆಡಿ ಮಾಡುತ್ತಿದ್ದಾರೆ.

ಈ ಸಿನಿಮಾ ಸೆಟ್ಟೇರುವುದಕ್ಕೆ ಇನ್ನಷ್ಟು ಸಮಯ ಬೇಕಿದೆ. ಕಾರಣ ಯಶ್ ನಟನೆಯ ಮೈ ನೇಮ್ ಈಸ್ ಕಿರಾತಕ ಮುಗಿಯಬೇಕಿದೆ. ನಿರ್ದೇಶಕ ಅನಿಲ್ ಮತ್ತು ಜಯಣ್ಣ ಈಗ ಅದರ ಒತ್ತಡದಲ್ಲಿದ್ದಾರೆ. ಅದು ಮುಗಿದ ನಂತರವೇ ಈ ಸಿನಿಮಾ ಕೆಲಸ. ಹಾಗಂತ ಈ ಸಿನಿಮಾದ ಮುಹೂರ್ತಕ್ಕಾಗಿ ಅಲ್ಲಿಯವರೆಗೂ ಕಾಯುವ ಅವಶ್ಯಕತೆಯಿಲ್ಲ, ಸದ್ಯದಲ್ಲೇ ಈ ಚಿತ್ರವನ್ನು ಅಧಿಕೃತವಾಗಿ ಅನೌನ್ಸ್ ಮಾಡುವ ಯೋಚನೆಯಲ್ಲಿ ನಿರ್ಮಾಪಕರು ಇದ್ದಾರೆ ಎನ್ನಲಾಗಿದೆ.