ಚಿತ್ರದಿಂದ ತಾವು ಹೊರಬಂದಿರುವ ಬಗ್ಗೆ ಸೋಮವಾರ ನಟ ರಿಷಿ ಸೋಷಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ‘ಹಲವು ಬದಲಾವಣೆಗಳು ಹಾಗೂ ಚಿತ್ರೀಕರಣದ ದಿನಾಂಕ ಹೊಂದಾಣಿಕೆ ಆಗದ ಕಾರಣ ಈ ಸಿನಿಮಾದಿಂದ ಹೊರಬರಲು ನಿರ್ಧರಿಸಿದ್ದೇನೆ. ಜತೆಗೆ ಬದಲಾವಣೆ ಅನಿವಾರ್ಯವೂ ಆಗಿತ್ತು. ಇದು ಒಳ್ಳೆಯ ಕತೆ . ಹಾಗೆಯೇ ಮತ್ತೊಂದು ಬ್ಲಾಕ್‌ ಬ್ಲಸ್ಟರ್‌ ಚಿತ್ರ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇಡೀ ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆ’ ಎಂದು ರಿಷಿ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲಿಗೆ ಯೋಗರಾಜ್‌ ಭಟ್ಟರ ಹೊಸ ಸಿನಿಮಾ ‘ಗಾಳಿಪಟ 2 ’ ನಲ್ಲಿ ಬದಲಾವಣೆ ಆಗಿದೆ ಎನ್ನುವುದು ಗ್ಯಾರಂಟಿ ಆಗಿದೆ.

ರಿಷಿ ಜತೆಗೆ ನಟ ಶರಣ್‌ ಕೂಡ ಈ ಚಿತ್ರದಲ್ಲಿದ್ದರು. ಅವರ ಎಂಟ್ರಿಯ ಕಾರಣಕ್ಕೆ ಈ ಹಿಂದೆ ಈ ಚಿತ್ರದ ಸಾಕಷ್ಟುಸುದ್ದಿಯೂ ಆಗಿತ್ತು. ಈಗ ಅವರು ಕೂಡ ಚಿತ್ರದಿಂದ ಹೊರ ಬಂದಿದ್ದಾರೆನ್ನುವ ಮಾಹಿತಿಯಿದೆ. ಶರಣ್‌ ಜಾಗಕ್ಕೆ ಗಣೇಶ್‌, ರಿಷಿ ಜಾಗಕ್ಕೆ ದಿಗಂತ್‌ ಬಂದಿದ್ದಾರೆ. ಭಟ್‌ರ ಜತೆಗೆ ಮತ್ತೆ ಒಂದಾದ ಗಣೇಶ್‌ ಹಾಗೂ ದಿಗಂತ್‌ ‘ಗಾಳಿಪಟ’ದ ಹಳೇ ಜೋಡಿಯೇ ಎನ್ನುವುದು ನಿಮಗೂ ಗೊತ್ತು. ಅವರಿಬ್ಬರ ಜತೆಗೆ ಅಲ್ಲಿ ಗಾಯಕ ರಾಜೇಶ್‌ ಕೃಷ್ಣ ಕೂಡ ಇದ್ದರು. ಈಗ ಅವರ ಜಾಗಕ್ಕೆ ಪವನ್‌ ಇದ್ದಾರೆ. ಅದು ಬಿಟ್ಟರೆ ಗಣೇಶ್‌ ಮತ್ತು ದಿಗಂತ್‌ ಹೊಸದಾಗಿ ಸೇರ್ಪಡೆ ಆಗಿದ್ದಾರೆ. ಇವಿಷ್ಟುಬದಲಾವಣೆ ಮೂಲಕ ಯೋಗರಾಜ್‌ ಭಟ್‌ ಮತ್ತೊಂದು ಗಾಳಿಪಟ ಹಾರಿಸುವುದಕ್ಕೆ ರೆಡಿ ಆಗಿದ್ದಾರೆ. ಆದರೆ ದಿಢೀರ್‌ ಈ ಬದಲಾವಣೆ ಯಾಕೆ ?

ಗಾಳಿಪಟ 2 ಗೆ ದೂದ್‌ಪೇಡ-ಗಣಿ ಕಮ್ ಬ್ಯಾಕ್

ಈ ಬದಲಾವಣೆ ಯಾಕಾಗಿ ಎನ್ನುವ ಬಗ್ಗೆ ಯೋಗರಾಜ್‌ ಭಟ್‌ ಕಾರಣ ಕೊಟ್ಟಿಲ್ಲ. ದೂರವಾಣಿ ಮೂಲಕ ಸಂಪರ್ಕ ಮಾಡಿದರೆ, ಆ ಮೇಲೆ ಹೇಳುತ್ತೇನೆ ಎನ್ನುತ್ತಾರೆ. ಆದ್ರೆ ಮೂಲಗಳ ಪ್ರಕಾರ ಅದಕ್ಕೆ ಎರಡು ಕಾರಣಗಳಿವೆ. ಕತೆಯಲ್ಲಾದ ಬದಲಾವಣೆ, ಜತೆಗೆ ಸಕ್ಸಸ್‌ಫುಲ್‌ ಸಿನಿಮಾದ ಸೀಕ್ವೆಲ್‌ಗೆ ಹಳಬರೇ ಸೂಕ್ತ ಎನ್ನುವ ಅಭಿಪ್ರಾಯಕ್ಕೂ ಅವರು ಮಣೆ ಹಾಕಿದ್ದಾರೆನ್ನುವ ಮಾತುಗಳಿವೆ. ಇದೇ ಕಾರಣಕ್ಕೆ ಭಟ್ಟರ ಮನಸ್ಸು ಬದಲಾವಣೆ ಬಯಸಿದೆ ಎನ್ನಲಾಗಿದೆ. ಅದೇನೆ ಇದ್ದರೂ, ಗಣೇಶ್‌ ಹಾಗೂ ದಿಗಂತ್‌ ಅವರನ್ನು ಒಂದೊಮ್ಮೆ ಗಾಳಿಪಟದಲ್ಲಿ ನೋಡಿ ಖುಷಿ ಪಟ್ಟಸಿನಿ ಪ್ರೇಕ್ಷಕರಿಗೆ ಮತ್ತೊಮ್ಮೆ ಅದೇ ಜೋಡಿಯನ್ನು ಗಾಳಿಪಟ 2 ನಲ್ಲೂ ನೋಡುವ ಕುತೂಹಲ ಹೆಚ್ಚಿದೆ.