ದಿಗಂತ್, ಗಣೇಶ್, ರಾಜೇಶ್ ಕೃಷ್ಣನ್ ಅಭಿನಯದ ಸೂಪರ್ ಹಿಟ್ ಚಿತ್ರ ಗಾಳಿಪಟ. ಗಾಳಿಪಟ ನಿರ್ದೇಶನ ಮಾಡಿದ್ದ ಯೋಗರಾಜ್ ಭಟ್ ಗಾಳಿಪಟ- 2 ನ್ನೂ ನಿರ್ದೇಶನ ಮಾಡಲಿದ್ದಾರೆ.  ಈ ಚಿತ್ರದಲ್ಲಿ  ಶರಣ್ ಹಾಗೂ ರಿಷಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಈಗ ಪಾತ್ರದಲ್ಲಿ ಬದಲಾವಣೆ ಆಗಿದೆ. 

ಗಾಳಿಪಟದಲ್ಲಿ ನಟಿಸಿದ್ದ ಗಣೇಶ್ ಹಾಗೂ ದಿಗಂತ್ ಗಾಳಿಪಟ 2 ದಲ್ಲೂ ನಟಿಸಲಿದ್ದಾರೆ. ಈ ವಿಷಯವನ್ನು ನಟ ರಿಷಿ ಟ್ವೀಟ್ ಮಾಡಿ ಅಧಿಕೃತಗೊಳಿಸಿದ್ದಾರೆ. 

 

"ಸಾಕಷ್ಟು ಬದಲಾವಣೆ, ಶೂಟಿಂಗ್ ಡೇಟ್ ಕ್ಲಾಶ್ ಸೇರಿದಂತೆ ಬೇರೆ ಬೇರೆ ಕಾರಣದಿಂದ ನಾನು ಗಾಳಿಪಟ 2 ನಿಂದ ಹೊರ ಬಂದಿದ್ದೇನೆ. ಇದೊಂದು ಒಳ್ಳೆಯ ಕಥೆ. ಇದೊಂದು ಬ್ಲಾಕ್ ಬಸ್ಟರ್ ಚಿತ್ರವಾಗುವುದರಲ್ಲಿ ಅನುಮಾನವೇ ಇಲ್ಲ. ಇಡೀ ಚಿತ್ರತಂಡಕ್ಕೆ ನನ್ನ ಹೃದಯಪೂರ್ವಕ ಹಾರೈಕೆಗಳು" ಎಂದು ಟ್ವೀಟ್ ಮಾಡಿದ್ದಾರೆ. 

ಯೋಗರಾಜ್ ಭಟ್, ದಿಗಂತ್, ಗಣೇಶ್ ಕಾಂಬಿನೇಶನ್ 11 ವರ್ಷದ ನಂತರ ಮತ್ತೆ ಒಂದಾಗಿದೆ. ಶರ್ಮಿಳಾ ಮಾಂಡ್ರೆ, ಸೋನಲ್ ಮಾಂತೆರೋ ನಾಯಕಿಯರಾಗಿ ನಟಿಸಲಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಲಿದ್ದಾರೆ.