ಹೊಸದಾಗಿ ಮದುವೆಯಾದ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಹಾಗೂ ನಟ ಯಶಸ್ ಸೂರ್ಯಗೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಜೂನ್ 8ರಂದು ನಡೆದ ಪಾರ್ಟಿಯಲ್ಲಿ ಇವರು ಭಾಗಿಯಾಗಿದ್ದರಿಂದ ಇವರನ್ನು ಪ್ರಮುಖ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ.
ಹೊಸದಾಗಿ ಮದುವೆಯಾದ ಖುಷಿಯಲ್ಲಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ಹಾಸ್ಯ ನಟ ಚಿಕ್ಕಣ್ಣನಿಗೆ ಶಾಕ್ ಒಂದು ಎದುರಾಗಿದೆ. ಅದೇನೆಂದರೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ನ ಪ್ರಖ್ಯಾತ ಹಾಸ್ಯ ನಟ ಚಿಕ್ಕಣ್ಣ ಅವರಿಗೆ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯವು ಅಧಿಕೃತವಾಗಿ ಸಮನ್ಸ್ ಜಾರಿ ಮಾಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಮತ್ತೊಬ್ಬ ನಟನಿಗೂ ನೋಟಿಸ್!
ಚಿಕ್ಕಣ್ಣ ಅಷ್ಟೇ ಅಲ್ಲ, ಈಗ ಅವರೊಂದಿಗೆ ನಟ ಯಶಸ್ ಸೂರ್ಯ ಅವರಿಗೂ ಸಹ ಕೋರ್ಟ್ ಹಾಜರಾಗುವಂತೆ ಸಮನ್ಸ್ ನೀಡಿದೆ. ಪ್ರಕರಣದಲ್ಲಿ ಚಿಕ್ಕಣ್ಣ ಅವರಿಗೆ CW-80 ಹಾಗೂ ಯಶಸ್ ಸೂರ್ಯ ಅವರಿಗೆ CW-98 ಸಾಕ್ಷಿ ಎಂದು ಗುರುತಿಸಲಾಗಿದೆ. ಹಾಗಾಗಿ ಈಗ ಮದುವೆಯಾದ ಚಿಕ್ಕಣ್ಣ ದೇವರು ದಿಂಡರು ಅಂತ ಸುತ್ತಾಡ ಬೇಕಿದ್ದವರು, ಈಗ ಕೋರ್ಟ್ ಸುತ್ತಾಡುವ ಪರಿಸ್ಥಿತಿ ನಟ ಚಿಕ್ಕಣ್ಣ ಅವರಿಗೆ ಎದುರಾಗಿದೆ.
ಕೋರ್ಟ್ ಹೇಳಿದ್ದೇನು?
ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಇಬ್ಬರೂ ಅ.13 ಅಥವಾ ಅಕ್ಟೋಬರ್ 15 ರೊಳಗೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಪ್ರಕರಣದ ಕುರಿತು ತಮ್ಮ ಸಾಕ್ಷ್ಯ ಹಾಗೂ ಹೇಳಿಕೆಗಳನ್ನು ದಾಖಲಿಸಬೇಕಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, 2024ರ ಜೂನ್ 8ರಂದು ರೇಣುಕಾಸ್ವಾಮಿ ಹತ್ಯೆ ನಡೆದ ದಿನದಂದು, ನಟ ದರ್ಶನ್ ಆರ್‌ಆರ್ ನಗರದ ಸ್ಟೋನಿಬ್ರೂಕ್ ಪಬ್‌ನಲ್ಲಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಪಾಲ್ಗೊಂಡಿದ್ದರು ಎನ್ನಲಾದ ಹಿನ್ನೆಲೆಯಲ್ಲಿ ಇವರನ್ನು ಪ್ರಮುಖ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ.
ಸಂಭ್ರಮದಲ್ಲಿದ್ದ ನಟನಿಗಡ ಆತಂಕ!
ಇತ್ತೀಚೆಗಷ್ಟೇ ನಟ ಚಿಕ್ಕಣ್ಣ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಮದುವೆಯ ಸಪ್ತಪದಿ ತುಳಿದ ಸಂಭ್ರಮದಲ್ಲಿದ್ದಾರೆ. ಆದರೆ ಈ ಖುಷಿಯ ನಡುವೆಯೇ ಕೊಲೆ ಪ್ರಕರಣದಲ್ಲಿ ಸಾಕ್ಷಿ ನುಡಿಯಲು ಕೋರ್ಟ್ ಸಮನ್ಸ್ ನೀಡಿರುವುದು ನಟನಿಗೆ ತುಸು ಆಘಾತ ಉಂಟುಮಾಡಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಗಳು ಮುಗಿದಿದ್ದು, ಈಗ ನಟರಿಬ್ಬರ ಸಾಕ್ಷ್ಯ ವಿಚಾರಣೆ ಈ ಹೈಪ್ರೊಫೈಲ್ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ತಿರುವು ಪಡೆದುಕೊಳ್ಳುವಂತೆ ಮಾಡಿದೆ.


