ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವ ಶರ್ಮಾ ಅವರು ಘೇಂಡಾಮೃಗ ಸಂರಕ್ಷಣೆಯ ಯಶಸ್ಸನ್ನು ಸಾರಲು 'ಕಾಂತಾರ' ಶೈಲಿಯ ಪೋಸ್ಟರ್ ಹಂಚಿಕೊಂಡಿದ್ದಾರೆ. ಪ್ರಾಜೆಕ್ಟ್ ರೈನೋ ಮತ್ತು ಆಪರೇಷನ್ ಫಾಲ್ಕನ್ ಮೂಲಕ ಶೂನ್ಯ ಬೇಟೆಯ ಗುರಿ ಸಾಧಿಸಿದ್ದು, 48 ಜನರನ್ನು ಬಂಧಿಸಲಾಗಿದೆ. ಅರಣ್ಯ ಸಂರಕ್ಷಣೆಯ ಸಂದೇಶ ಸಾರುವ ಈ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಯಾಂಡಲ್​ವುಡ್​ ಇತಿಹಾಸದಲ್ಲಿ ಕಾಂತಾರಾ ಸಿನಿಮಾ ಸಾಕಷ್ಟು ಹಲ್​ಚಲ್​ ಸೃಷ್ಟಿಸಿರುವುದು ಗೊತ್ತೇ ಇದೆ. ಹಳ್ಳಿಗರ ಜಮೀನು ಮತ್ತು ದೇವರ ಕಾಡಿನ (ಪವಿತ್ರ ವನ) ಹಕ್ಕುಗಳ ವಿಚಾರವಾಗಿ ಶಿವ ಹಾಗೂ ಅರಣ್ಯ ಅಧಿಕಾರಿ ಮುರಳಿ ನಡುವೆ ಸಂಘರ್ಷ ಏರ್ಪಡುತ್ತದೆ. ದೇವೇಂದ್ರ ಭೂಮಿ ಕಬಳಿಸಲು ಕಿತಾಪತಿ ನಡೆಸಿ, ಶಿವನ ಅಣ್ಣ ಗುರುವಾಗಳನ್ನು ಕೊಲೆ ಮಾಡಿಸುತ್ತಾನೆ. ದೈವದ ಶಕ್ತಿಯಿಂದ ಶಿವನು ದೇವೇಂದ್ರ ಮತ್ತು ಅವನ ಗ್ಯಾಂಗ್ ಅನ್ನು ಸಂಹರಿಸಿ ಊರನ್ನು ರಕ್ಷಿಸುತ್ತಾನೆ ಎನ್ನುವುದನ್ನು ಕಥೆ ತೋರಿಸುತ್ತದೆ. ಇದೀಗ ಇದರ ಚಾಪ್ಟರ್​-2 ಯಾವಾಗ ಬರುತ್ತದೆ ಎಂದು ವೀಕ್ಷಕರು ಕಾಯುತ್ತಿದ್ದಾರೆ.

ಇದರ ನಡುವೆಯೇ, ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವ ಶರ್ಮಾ ಅವರು ಕಾಂತಾರಾ ಹೆಸರಿನ ಒಂದು ಫೋಟೋ ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದೀಗ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಕಾಂತಾರಾ ಎಂದು ಹೆಸರು ಕೊಟ್ಟು ಈ ಫೋಟೋಶೇರ್​ ಮಾಡಲಾಗಿದೆ. ಆದರೆ ಕಾಂತಾರದ ಮುಖದಲ್ಲಿ ಘೇಂಡಾಮೃಗದ ತಲೆ ಹಚ್ಚಿರುವುದನ್ನು ನೋಡಬಹುದು. ಇದೇನಿದು ಎಂದು ಹಲವರು ಅಚ್ಚರಿಗೊಂಡಿದ್ದಾರೆ. ಅದರಲ್ಲಿ ಅವರು, ಘೇಂಡಾಮೃಗ ಬೇಟೆ ಶೂನ್ಯದತ್ತ ತಲುಪಿದೆ. ಈಗ ಅದು ರಕ್ಷಿಸಲು ಯೋಗ್ಯವಾದ ಕಥಾವಸ್ತುವಾಗಿದೆ. ಇಲ್ಲಿಯವರೆಗೆ 48 ಮಂದಿಯನ್ನು ಬಂಧಿಸಲಾಗಿದೆ. ಈ ಅರಣ್ಯ ಥ್ರಿಲ್ಲರ್ ಬೇಟೆಗಾರರಿಗೆ ಸುಖಾಂತ್ಯವನ್ನು ಹೊಂದಿಲ್ಲ. ಪ್ರಾಜೆಕ್ಟ್​ ರೈನೋ ಸಂರಕ್ಷಣೆಯ ಮುಂದಿನ ಅಧ್ಯಾಯವು ಈಗಾಗಲೇ ನಡೆಯುತ್ತಿದೆ ಎಂದು ಬರೆದುಕೊಂಡು ಕಾಂತಾರದ ಫೋಟೋ ಶೇರ್​ ಮಾಡಿದ್ದಾರೆ.

ಏನಿದು ಪೋಸ್ಟ್​ ಅರ್ಥ?

ಅಷ್ಟಕ್ಕೂ ಇದೇನೆಂದು ಹೇಳುವುದಾದರೆ, ಅಸ್ಸಾಂ ಒಂಟಿ ಕೊಂಬಿನ ಘೇಂಡಾಮೃಗದ ತಾಣ. ಆದರೆ ಈ ಹಿಂದೆ ಅವ್ಯಾಹತವಾಗಿ ಇದರ ಬೇಟಿ ನಡೆಯುತ್ತಿತ್ತು. ಇದನ್ನು ಸಂರಕ್ಷಿಸುವ ಸಲುವಾಗಿ ಸಿಎಂ ಹಿಮಂತ್​ ಅವರು ಪ್ರಾಜೆಕ್ಟ್​ ರೈನೋ (Project Rhino- ಘೇಂಡಾಮೃಗ ಯೋಜನೆ), ಆಪರೇಷನ್​ ಫಾಲ್ಕನ್​ ಯೋಜನೆ ಆರಂಭಿಸಿದ್ದಾರೆ. ಇದು ಅವುಗಳ ರಕ್ಷಣೆಯಲ್ಲಿ ಮೈಲಿಗಲ್ಲಾಗಿದೆ. ಈ ಘೋಷಣೆಯು ಅಸ್ಸಾಂನ ಕಠಿಣ ಬೇಟೆ-ವಿರೋಧಿ ಕಾರ್ಯಾಚರಣೆಗಳು ಮತ್ತು ರಕ್ಷಣೆಗಾಗಿ ಅರಣ್ಯ ಇಲಾಖೆಯ ಶಿಸ್ತುಕ್ರಮಗಳ ಮೇಲೆ ನಿರಂತರ ಒತ್ತು ನೀಡುವುದನ್ನು ಪ್ರತಿಬಿಂಬಿಸುತ್ತದೆ.

48 ಮಂದಿ ಅರೆಸ್ಟ್​

ಇದರ ಫಲವಾಗಿ, ಇಂದು ಅಸ್ಸಾಂ ಶೂನ್ಯ ಘೇಂಡಾಮೃಗ ಬೇಟೆಯನ್ನು ವರದಿ ಮಾಡಿದೆ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರಾಜ್ಯದ ಐಕಾನಿಕ್ ವನ್ಯಜೀವಿಗಳನ್ನು ರಕ್ಷಿಸುವಲ್ಲಿ ಆಪರೇಷನ್ ಫಾಲ್ಕನ್ ಪಾತ್ರವನ್ನು ಇದೀಗ ಸೋಷಿಯಲ್​ ಮೀಡಿಯಾ ಮೂಲಕ ಎತ್ತಿ ತೋರಿಸಿದ್ದಾರೆ. ಅವರ ಪ್ರಕಾರ, ಘೇಂಡಾಮೃಗವನ್ನು ಭಾರಿ ಪ್ರಮಾಣದಲ್ಲಿ ಬೇಟೆಯಾಡಲು ಬಂದಿದ್ದ ಒಂಬತ್ತು ಮಂದಿ ಗುಂಪನ್ನು ವಿಫಲಗೊಳಿಸಲಾಗಿದೆ. ಈ ಸಂಬಂಧ 48 ಜನರನ್ನು ಬಂಧಿಸಲಾಗಿದೆ.

ಅರಣ್ಯ ಸಂರಕ್ಷಣೆಯ ಕಥಾವಸ್ತು ಇರುವ ಕಾಂತಾರಾ ಅನ್ನು ತಮ್ಮ ಈ ಯೋಜನೆಗೆ ಲಿಂಕ್​ಮಾಡಿರುವ ಮುಖ್ಯಮಂತ್ರಿ ಕಾಂತಾರಾ ಎಂದು ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ರಿಷಬ್​ ಶೆಟ್ಟಿ ಅವರ ಕಾಂತಾರಾ ಸಿನಿಮಾ ಯಾವ ಪರಿಯಲ್ಲಿ ಬೇರೆ ರಾಜ್ಯದವರ ಗಮನವನ್ನೂ ಸೆಳೆದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಹಲವರು ಕಾಂತಾರಾ ಚಾಪ್ಟರ್​-2 ಎಂದು ಹೇಳುತ್ತಿದ್ದಾರೆ.