Asianet Suvarna News Asianet Suvarna News

ಆ್ಯಂಕರ್ ಕಮ್ ಆ್ಯಕ್ಟರ್ ರೆಹಮಾನ್ ಜೊತೆ ‘ಗರ’ ಮಾತುಕತೆ!

ವಿಶಿಷ್ಟನಿರೂಪಣೆಯ ಮೂಲಕ ಯಶಸ್ವಿ ನಿರೂಪಕನಾಗಿ ಮನೆ ಮಾತಾದ ರೆಹಮಾನ್‌ ಈಗ ನಾಯಕ ನಟ. ಬಿಗ್‌ಬಾಸ್‌ ಮೂಲಕ ಸಿಕ್ಕ ಜನಪ್ರಿಯತೆಯಿಂದಲೇ‘ಗರ’ ಚಿತ್ರಕ್ಕೆ ಹೀರೋ ಆಗಿ ಆಯ್ಕೆ ಆದ ಖ್ಯಾತಿ ಅವರದ್ದು. ಮುರಳೀಕೃಷ್ಣ ನಿರ್ದೇಶನದ ಈ ಚಿತ್ರ ಇವತ್ತೇ ತೆರೆಗೆ ಬರುತ್ತಿದೆ. ಚಿತ್ರದಲ್ಲಿನ ತಮ್ಮ ಪಾತ್ರ, ಚಿತ್ರದ ವಿಶೇಷತೆ ಕುರಿತು ರೆಹಮಾನ್‌ ಜತೆಗೆ ಮಾತುಕತೆ.

Actor Anchor Rehman Gara Exclusive Interview
Author
Bangalore, First Published May 3, 2019, 10:20 AM IST

ದೇಶಾದ್ರಿ ಹೊಸ್ಮನೆ

ಜರ್ನಲಿಸ್ಟ್‌ ಆಗಿದ್ದವರು ಹೀರೋ ಆಗಿದ್ದೀರಿ, ಹೇಗಿದೆ ಹೊಸ ಜರ್ನಿಯ ಅನುಭವ ?

ಇದೊಂದು ಅದ್ಭುತ ಅನುಭವವೇ ಹೌದು. ನಾನಿಲ್ಲಿಗೆ ಈಗಷ್ಟೇ ಅಡ್ಮಿಷನ್‌ ಆದ ಸ್ಟುಡೆಂಟ್‌. ಎಲ್ಲವೂ ಹೊಸತಾಗಿದೆ. ನಟನೆಯ ಕಲಿಕೆ ಇಲ್ಲಿಂದ ಆರಂಭವಾಗಿದೆ. ಇದೆಲ್ಲ ಹೇಗೆ ಶುರುವಾಯಿತೋ ಗೊತ್ತಿಲ್ಲ. ಅದೃಷ್ಟಅಂತಾರಲ್ಲ, ಹಾಗೆ ನನ್ನ ಜೀವನದಲ್ಲಿ ಅಂದುಕೊಂಡ ಆಸೆಗಳು, ಅಂದುಕೊಳ್ಳದೇ ಇದ್ದ ಕನಸುಗಳು ಎಲ್ಲವೂ ಕೈಗೂಡುತ್ತಿವೆ. ಅಲ್ಲಿಂದಲೇ ಈಗ ನಟನೆ ಶುರುವಾಗಿದೆ. ಇಲ್ಲಿ ಯಶಸ್ವಿ ಆಗಬೇಕಾದ್ರೆ ಜನರ ಆಶೀರ್ವಾದ ಬೇಕಿದೆ.

ಜುಗಾರಿ ಬ್ರದರ್ಸ್‌ ಆಗಿ ಜಾನಿ ಲಿವರ್‌- ಸಾಧು ಕೋಕಿಲ!

ನೀವು ಆ್ಯಕ್ಟರ್‌ ಆಗೋದಿಕ್ಕೆ ನಟ ಶಿವರಾಜ್‌ ಕುಮಾರ್‌ ಕಾರಣರಾದ್ರು ಅನ್ನೋದು ನಿಜವಾ?

ಈ ಮಾತು ನಿಜ. ಅದು ಆಗಿದ್ದು ನಾನು ನಿರೂಪಕನಾಗಿದ್ದ ದಿನಗಳಲ್ಲಿ. ಅವತ್ತೊಂದು ದಿನ ಹೀಗೆಯೇ ‘ಜೋಗಯ್ಯ’ ಸಿನಿಮಾ ನೋಡಿ ಬಂದು, ಆ ಚಿತ್ರ ತಂಡದ ಜತೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದೆ. ಶಿವಣ್ಣ ಮಾತನಾಡುತ್ತಾ, ‘ರೆಹಮಾನ್‌, ನಾನು ನಿಮ್ಮ ಸಾಕಷ್ಟುಕಾರ್ಯಕ್ರಮ ನೋಡಿದ್ದೇನೆ. ಚೆನ್ನಾಗಿ ಮಾತನಾಡುತ್ತೀರಿ, ನೀವೇ ಯಾಕೆ ಒಂದು ಸಿನಿಮಾ ಮಾಡಬಾರದು’ ಅಂತ ಸಲಹೆ ಕೊಟ್ಟರು. ಅದಕ್ಕೆ ತಮಾಷೆಯಿಂದಲೇ ಒಂದು ಕೌಂಟರ್‌ ಡೈಲಾಗ್‌ ಬಿಟ್ಟೆ. ‘ಸರ್‌ ನೀವೇ ಒಂದ್‌ ಚಾನ್ಸ್‌ ಕೊಡಿಸಿದ್ರೆ, ಮಾಡ್ತೀನಿ ಸರ್‌ ಅಂದೆ. ಹಾಗೆ ಹೇಳಿದ್ದನ್ನು ಅವರು ಗಂಭೀರವಾಗಿ ತೆಗೆದುಕೊಂಡ್ರು. ಅವರ ‘ಶಿವಲಿಂಗ’ ಚಿತ್ರದಲ್ಲಿನ ಒಂದು ಪಾತ್ರಕ್ಕೂ ಆಫರ್‌ ಬಂತು. ಆದರೆ ನಾನಾಗ ಬಿಗ್‌ಬಾಸ್‌ಗೆ ಹೋದೆ. ಹಾಗಾಗಿ ಅದು ಮಿಸ್‌ ಆಯ್ತು. ಆದ್ರೂ, ‘ಗರ’ ಚಿತ್ರದೊಂದಿಗೆ ಬಂಪರ್‌ ಆವಕಾಶವೇ ಸಿಕ್ತು.

‘ಗರ’ ಚಿತ್ರಕ್ಕೆ ನೀವು ಹೀರೋ ಆಗಿ ಆಯ್ಕೆ ಆಗಿದ್ದು ಹೇಗೆ?

ಬಿಗ್‌ಬಾಸ್‌ನಿಂದ ಬಂದ ತಕ್ಷಣವೇ ಸಿಕ್ಕ ಅವಕಾಶ ಇದು. ನಿರ್ದೇಶಕ ಮುರಳೀಕೃಷ್ಣ ಸರ್‌ ಸಿನಿಮಾ ಮಾಡ್ಬೇಕು ಅನ್ನೋ ತಯಾರಿಯಲ್ಲಿದ್ದಾಗ ಬಿಗ್‌ಬಾಸ್‌ ಶುರುವಾಗಿತ್ತು. ಕುತೂಹಲಕ್ಕೆ ಅಂತ ಅವರು ಬಿಗ್‌ಬಾಸ್‌ ಎಪಿಸೋಡ್‌ ನೋಡ್ತಿದ್ರಂತೆ. ಅಲ್ಲಿ ನಾನು ಕಾಣಿಸಿಕೊಂಡ ಒಂದು ಜಗಳದ ಸೀನ್‌ ಅವರಿಗೆ ತುಂಬಾ ಇಂಪ್ರೆಸ್‌ ಆಯ್ತಂತೆ. ಪರ್‌ಫಾರ್ಮೆನ್ಸ್‌ ಕೂಡ ಚೆನ್ನಾಗಿತ್ತು ಅನ್ನೋ ಲೆಕ್ಕಾಚಾರದಲ್ಲಿ ಅವರ ಚಿತ್ರಕ್ಕೆ ನನ್ನನ್ನೇ ಹೀರೋ ಆಗಿ ಸೆಲೆಕ್ಟ್ ಮಾಡಿಕೊಳ್ಳಬೇಕು ಅಂದುಕೊಂಡಿದ್ರಂತೆ. ಆ ಪ್ರಕಾರವೇ ನಾನು ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ತಕ್ಷಣವೇ ಗುರುರಾಜ ಸ್ಟುಡಿಯೋಸ್‌ನ ಗುರುರಾಜ್‌ ಮೂಲಕ ಭೇಟಿ ಮಾಡಿ, ಕತೆ ಹೇಳಿದ್ರು. ಚಿತ್ರಕ್ಕೆ ಹೀರೋ ಆಗಿ ಆಯ್ಕೆ ಮಾಡಿಕೊಂಡ್ರು.

ಆರ್ಟಿಸ್ಟ್‌ ಆಗೋ ಕನಸಲ್ಲಿ ಹೀರೋ ಆಗುವ ಅವಕಾಶವೇ ಒದಗಿ ಬಂದಾಗ ಹೇಗನಿಸಿತು?

ಮೇ 3 ರಿಂದ 'ಗರ' ದರ್ಬಾರ್‌ ಶುರು

ನಿರ್ದೇಶಕ ಮುರುಳೀಕೃಷ್ಣ ಸರ್‌ ಮೊದಲು ನೀವೇ ಹೀರೋ ಅಂತ ಹೇಳಿರಲಿಲ್ಲ. ನಮ್ಮ ಸಿನಿಮಾದಲ್ಲಿ ಒಂದೊಳ್ಳೆ ಪಾತ್ರ ಕೊಡ್ತೀನಿ, ಮಾಡಿ ಅಂದ್ರು. ಹಾಗೆಯೇ ಕತೆ ಹೇಳುವುದಕ್ಕೆ ಶುರು ಮಾಡಿದ್ರು. ಆ ಕತೆಯಲ್ಲಿ ಇಬ್ಬರು ಹೀರೋಗಳು. ಅವರು ಕತೆ ಹೇಳುತ್ತಾ ಹೊರಟಾಗ ನನಗ್ಯಾವ ಪಾತ್ರ ಅನ್ನೋದು ಕನ್ಪ್ಯೂಸ್‌. ಕೊನೆಗೆ ಕತೆ ಹೇಳುವುದನ್ನು ಮುಗಿಸಿ, ನಿಮ್ಗೆ ಯಾವ ಪಾತ್ರ ಇಷ್ಟಆಯ್ತು ಅಂತ ಕೇಳಿದ್ರು. ನಾನು ಗೊಂದಲಕ್ಕೆ ಸಿಲುಕಿದೆ. ಕೊನೆಗೆ ಅವರೇ ಹೇಳಿದ್ರು. ನಿಶಾಂತ್‌ ಅನ್ನೋ ಹೆಸರಿನ ಪಾತ್ರ. ಅದು ಚಿತ್ರದ ಕಥಾ ನಾಯಕ. ಅದರಲ್ಲಿ ನೀವು ಅಭಿನಯಿಸಿ ಅಂದಾಗ ತುಪ್ಪ ಜಾರಿ ರೊಟ್ಟಿಮೇಲೆ ಬಿದ್ದಂತಾಯ್ತು. ಎರಡು ನಿಮಿಷ ಏನೊಂದು ಮಾತನಾಡದೆ ಮೌನ ತಾಳಿದೆ. ಆ ಮೇಲೆ ಮುರುಳಿ ಸರ್‌ಗೆ ಥ್ಯಾಂಕ್ಸ್‌ ಹೇಳಿದೆ.

ಕಥಾ ನಾಯಕ ನಿಶಾಂತ್‌ ಬಗ್ಗೆ ಹೇಳೋದಾದ್ರೆ..

ಆ ಪಾತ್ರಕ್ಕೆ ಎರಡು ಹೆಸರು. ಒಂದು ನಿಶಾಂತ್‌, ಮತ್ತೊಂದು ಗಂಗಸ್ವಾಮಿ. ನಿಶಾಂತ್‌ ಎನ್ನುವುದು ಮಾಮೂಲು. ಗಂಗಸ್ವಾಮಿ ಎನ್ನುವುದು ಟಿಪಿಕಲ್‌ ಹಳ್ಳಿ ಸೊಗಡಿನ ಹೆಸರು. ಹಾಗೆಯೇ ಇದು ಮೂರು ಶೇಡ್‌ ಇರುವಂತಹ ಪಾತ್ರ. ಆತ ಮೂಲತಃ ಒಬ್ಬ ಗ್ಯಾಂಬ್ಲರ್‌. ಕವಡೆ ಹಾಕುವ ಗ್ಯಾಂಬ್ಲರ್‌. ಆತನಿಗೊಬ್ಬ ಬಾಸ್‌ ಇದ್ದಾನೆ. ಆತನ ಕೈ ಕೆಳಗಡೆ ಈತ. ಬಾಸ್‌ ಹೇಳಿದಂತೆ ಕವಡೆ ಹಾಕಿ, ಜನರನ್ನು ವಂಚಿಸುತ್ತಿರುತ್ತಾನೆ. ಕೊನೆಗೊಮ್ಮೆ ಬಾಸ್‌ಗೂ ಆತನಿಗೂ ಜಗಳ ಆಗುತ್ತೆ. ಅಲ್ಲಿಂದ ಆತ ತಲೆ ಮರೆಸಿಕೊಳ್ಳಬೇಕಾದ ಸಂದರ್ಭ ಬರುತ್ತದೆ. ಆಗ ಗಂಗ ಸ್ವಾಮಿ ಹೆಸರಿನ ಜ್ಯೋತಿಷಿ ವೇಷ ಹಾಕುತ್ತಾನೆ. ಮತ್ತೊಂದು ಗೆಟಪ್‌ನಲ್ಲಿ ಆತ ಲವರ್‌ ಬಾಯ್‌. ಗಲ್‌ರ್‍ಫ್ರೆಂಡ್‌ ಜತೆಗೆ ಸುತ್ತುವುದು. ಈ ಮೂರಕ್ಕೂ ಒಂದು ಕನೆಕ್ಷನ್‌ ಇದೆ. ಅದೇನು ಅನ್ನೋದು ನನ್ನ ಪಾತ್ರದ ಸಸ್ಪೆನ್ಸ್‌ ಸಂಗತಿ.

ದೊಡ್ಡ ಸ್ಟಾರ್‌ ಕಾಸ್ಟಿಂಗ್‌ ಸಿನಿಮಾಕ್ಕೆ ಹೀರೋ ಆಗಿ ನಟಿಸಿದ್ದೀರಿ, ಆ ಅನುಭವ ಹೇಗಿತ್ತು?

ಅದೇನೋ ನನ್ನ ಜೀವನದಲ್ಲಿ ಎಲ್ಲವೂ ತಾನಾಗಿಯೇ ಆಗುತ್ತಿವೆ ಅಂತ. ಇದು ಕೂಡ ಹಾಗೆಯೇ ಆಗಿದ್ದು. ಮೊದಲ ಸಿನಿಮಾದಲ್ಲೇ ಹೀರೋ ಆದೆ. ಅದರ ಜತೆಗೆ ಜಾನಿ ಲಿವರ್‌, ಸಾಧು ಕೋಕಿಲ, ಮನದೀಪ್‌ ರಾಯ್‌ ಅವರಂತಹ ಹಿರಿಯ ಕಲಾವಿದರ ಜತೆಗೆ ಅಭಿನಯಿಸಿದ್ದು ಅಲ್ಲದೆ, ಬಾಲಿವುಡ್‌ನ ಹೆಸರಾಂತ ಕೋರಿಯೋಗ್ರಾಫರ್‌ ಸರೋಜ್‌ ಖಾನ್‌ ಈ ಚಿತ್ರಕ್ಕೆ ಕೋರಿಯೋಗ್ರಫಿ ಮಾಡಿದ್ದು ವಿಶೇಷವೇ ಹೌದು. ಅದರಲ್ಲೂ ಜಾನಿ ಲಿವರ್‌, ಸಾಧು ಕೋಕಿಲ ಅವರಂತಹ ಹಿರಿಯ ನಟರ ಜತೆಗೆ ಅಭಿನಯಿಸಿದ್ದು ಹೆಮ್ಮೆ ಎನಿಸುತ್ತಿದೆ. ನನಗೆ ಹಿಂದಿ ಚೆನ್ನಾಗಿಯೇ ಗೊತ್ತಿದ್ದ ಕಾರಣ ಸೆಟ್‌ನಲ್ಲಿ ಜಾನಿ ಲಿವರ್‌ ಜತೆಗೆ ತುಂಬಾ ಮಾತುಕತೆ ನಡೆಯುತ್ತಿತ್ತು. ಡೈಲಾಗ್‌ ಹೇಗೆ ಏನು ಅಂತ ಹೇಳುತ್ತಿದ್ದೆ.

ಗರ ಚಿತ್ರದಲ್ಲಿ ನೇಹಾ ಖಳನಾಯಕಿ

ಒಂದೆಡೆ ರೊಮಾನ್ಸ್‌, ಮತ್ತೊಂದೆಡೆ ಆ್ಯಕ್ಷನ್‌, ಜತೆಗೆ ಕಾಮಿಡಿ ಸೀನ್‌ಗಳಲ್ಲೂ ನೀವು ಇದ್ದೀರಂತೆ ಹೌದೆ?

ಹೊಸಬನಿಗೆ ಒಂದೇ ಸಿನಿಮಾದಲ್ಲಿ ಇಷ್ಟೆಲ್ಲ ಅವಕಾಶಗಳು ಸಿಕ್ಕಿವೆ ಅಂದ್ರೆ ಇದೊಂಥರ ಲಕ್‌ ಅಲ್ವಾ? ಅದಕ್ಕೆ ಕಾರಣ ನಿರ್ದೇಶಕರು. ಮೇಲಾಗಿ ಆ ಪಾತ್ರವೇ ಹಾಗಿದೆ. ಲವರ್‌ ಬಾಯ್‌ ಶೇಡ್‌ನಲ್ಲಿದ್ದಾಗ ರೊಮಾನ್ಸ್‌ ಇದೆ. ಆತ ಗ್ಯಾಂಬ್ಲರ್‌ ಆಗಿದ್ದಾಗ ಎರಡು ಆ್ಯಕ್ಷನ್‌ ಸೀನ್‌ಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ರವಿವರ್ಮ ಸಾಹಸ ನಿರ್ದೇಶನದಲ್ಲಿ ಇವೆರೆಡು ಆ್ಯಕ್ಷನ್‌ ಸೀನ್‌ ಶೂಟ್‌ ಮಾಡಿದ್ದೇವೆ. ಮೊದಲ ದಿನ ಆ್ಯಕ್ಷನ್‌ ಸೀನ್‌ ಶೂಟ್‌ ಮಾಡುವಾಗ ಫುಲ್‌ ನರ್ವಸ್‌ ಆಗಿದ್ದೆ. ದುರಾದೃಷ್ಟಎನ್ನುವ ಹಾಗೆ ಅವತ್ತೇ ಮುಖತ್ತೆ ಏಟು ಬಿತ್ತು. ಲಿಪ್‌ ಜಾಮ್‌ ಆಗಿ, ಮೂರು ತಾಸು ಸುಧಾರಿಸಿಕೊಂಡೆ. ಆಮೇಲೆ ಎಲ್ಲವೂ ಸರಿ ಹೋಯ್ತು. ಜತೆಗೆ ಜ್ಯೋತಿಷಿ ವೇಷದಲ್ಲಿ ಕಾಮಿಡಿಯನ್‌ ಆಗಿಯೂ ಕಾಣಿಸಿಕೊಂಡಿದ್ದೇನೆ. ಹೀಗೆ ಬಹು ವೇಷದಲ್ಲಿ ಅಭಿನಯಿಸಿರುವುದು ಖುಷಿ ಕೊಟ್ಟಿದೆ.

ನಿರ್ದೇಶಕರು ‘ಗರ’ ಕತೆಯೇ ವಿಶೇಷ, ವಿಭಿನ್ನ ಅಂತಾರೆ, ಇದು ಹೇಗೆ?

ಚಿತ್ರದ ಪಾತ್ರಧಾರಿ ಎನ್ನುವುದಕ್ಕಿಂತ ನಾನೊಬ್ಬ ಜರ್ನಲಿಸ್ಟ್‌ ಆಗಿ ಹೇಳುವುದಾದರೆ, ಇದು ವಿಶೇಷ ಕತೆ ಎನ್ನುವುದು ನಿಜ. ಆರ್‌. ಕೆ. ನಾರಾಯಣ್‌ ಅವರ ‘ದಿ ಅಸ್ಟ್ರಾಲರ್ಜಸ್‌ ಡೇಸ್‌’ ಕತೆಯ ಒಂದು ಎಳೆ ಈ ಸಿನಿಮಾಕ್ಕೆ ಸ್ಫೂರ್ತಿ. ಅದರ ಮೇಲೆ ನಿರ್ದೇಶಕರು ಈ ಚಿತ್ರದ ಕತೆ ಹೆಣೆದಿದ್ದಾರೆ. ಒಬ್ಬ ಗ್ಯಾಂಬ್ಲರ್‌ ಮೇಲೆ ಕತೆ ಸಾಗುತ್ತದೆ. ಅದರ ಸುತ್ತ ಹಲವು ಪಾತ್ರಗಳಿವೆ. ಮುಖ್ಯವಾಗಿ ಗರ ಎನ್ನುವುದು ಪ್ರತಿಯೊಬ್ಬರ ಬದುಕಿಗೆ ಹೇಗೆ ಎಂಟ್ರಿ ಆಗುತ್ತೆ ಎನ್ನುವುದು ಕತೆಯ ಥೀಮ್‌. ಜತೆಗೆ ರಿವರ್ಸ್‌ ಸ್ಕ್ರೀನ್‌ ಫ್ಲೇ ಇದರ ಮತ್ತೊಂದು ವಿಶೇಷ. ಆ ಕಾರಣಕ್ಕೆ ಸ್ವಲ್ಪ ಡಿಫರೆಂಟ್‌ ಎನ್ನುವುದು ನಿಜ. ಒಂದು ಫ್ರೆಶ್‌ನೆಸ್‌ ಅಂತೂ ಖಂಡಿತಾ ಇದೆ. ಬೋಧನೆ ಎನ್ನುವುದಕ್ಕಿಂತ ನೋಡುಗರಲ್ಲಿ ಥ್ರಿಲ್‌ ಮೂಡ್‌ ತರಿಸುತ್ತದೆ. ಆ ಮಟ್ಟಿಗೆ ಇದೊಂದು ಫುಲ್‌ ಪ್ಯಾಕೇಜ್‌ ಸಿನಿಮಾ.

ನಿರ್ದೇಶಕರಾಗಿ ಮುರಳೀಕೃಷ್ಣ ಅವರಿಗೆ ಇದು ಮೊದಲ ಸಿನಿಮಾ, ಹೇಗಿತ್ತು ಅವರ ನಿರ್ದೇಶನದ ವೈಖರಿ?

ಒಬ್ಬ ಅಡ್ವೊಕೇಟ್‌. ಮತ್ತೊಬ್ಬ ಗುಡ್‌ ಹ್ಯೂಮನ್‌ ಬಿಯಿಂಗ್‌, ಹಾಗೆಯೇ ಮತ್ತೊರ್ವ ಕ್ರಿಯೇಟಿವ್‌ ಮ್ಯಾನ್‌. ಇಷ್ಟುಸೇರಿದ್ರೆ ಮುರಳೀಕೃಷ್ಣ ಆಗುತ್ತಾರೆ. ಅಷ್ಟುಕೌಶಲ್ಯದ ಮಿಶ್ರಣದ ಸಿನಿಮಾ ಇದು. ಅವರೇ ಸ್ಟೋರಿ ಲೈನ್‌ ಸೃಷ್ಟಿಸಿದ್ದು. ಅವರೇನು ಅಂದುಕೊಂಡಿದ್ದರೋ ಅದನ್ನು ತೆರೆಗೆ ತಂದಿದ್ದಾರೆ. ಹಾಗೆಯೇ ಅವರ ಸಿನಿಮಾ ಪ್ಯಾಷನ್‌ ಅದ್ಭುತ. ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಪ್ರಮೋಷನ್‌ಗೆ ಪೋಸ್ಟರ್‌ ಮಾಡಿಸಿರುವ ರೀತಿಯೇ ವಿಶೇಷ. ಅದು ಸಿನಿಮಾದ ಮೇಕಿಂಗ್‌ನಲ್ಲೂ ಕಾಣುತ್ತದೆ.

ಜರ್ನಲಿಸಂ ಮತ್ತು ಸಿನಿಮಾ, ಮುಂದಿನ ಮುಖ್ಯ ಹಾದಿ ಯಾವುದು?

ಗೊತ್ತಿಲ್ಲ. ಸದ್ಯಕ್ಕೆ ಸಿನಿಮಾ. ಜರ್ನಲಿಸಂಗೆ ಆಸಕ್ತಿಯಿಂದಲೇ ಬಂದವನು ನಾನು. ಅದು ಇದ್ದೇ ಇರುತ್ತದೆ. ರಿಟೈರ್ಡ್‌ ಇಲ್ಲದ ಜಾಬ್‌ ಅದು. ಅದರಲ್ಲಿ ನಾನು ಕಾಯಂ. ಉಳಿದಂತೆ ಸಿನಿಮಾ ಆಕಸ್ಮಿಕವಾಗಿ ಶುರುವಾಗಿದೆ. ಒಳ್ಳೆಯ ಪಾತ್ರಗಳು ಸಿಕ್ಕರೆ ಅಭಿನಯಿಸುತ್ತೇನೆ. ಪಾತ್ರಗಳ ಮೇಲೆ ಡಿಪೆಂಡ್‌ ಆಗುತ್ತೆ ಮುಂದಿನ ಜರ್ನಿ. ಆ ಮೇಲೆ ಜರ್ನಲಿಸಂ ಇದ್ದೇ ಇದೆ.

Follow Us:
Download App:
  • android
  • ios