ಮುರುಳಿ ಕೃಷ್ಣ ನಿರ್ದೇಶನದ ‘ಗರ’ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಈ ಚಿತ್ರಕ್ಕೆ ಇಬ್ಬರು ನಾಯಕಿಯರು. ಅವಂತಿಕಾ ಮೋಹನ್‌ ಮತ್ತು ನೇಹಾ ಪಾಟೀಲ್‌. ತಮ್ಮ ಸಿನಿ ಜರ್ನಿಯಲ್ಲಿ ಇದುವರೆಗೂ ಸಿಕ್ಕ ಪಾತ್ರಗಳಿಗೆ ಹೋಲಿಸಿದರೆ ಇಂತಹ ಪಾತ್ರ ಸಿಕ್ಕಿದ್ದು ಇದೇ ಮೊದಲು ಅಂತ ಬಣ್ಣಿಸುತ್ತಾರೆ ನೇಹಾ.

ಹಾಗಾದ್ರೆ ಆ ಪಾತ್ರ ಎಂಥದ್ದು?

‘ಸಾಮಾನ್ಯವಾಗಿ ಯಾವುದೇ ಪಾತ್ರಕ್ಕೆ ನೆಗೆಟಿವ್‌ ಇಲ್ಲವೇ ಪಾಸಿಟಿವ್‌ ಎನ್ನುವ ಎರಡು ಶೇಡ್‌ಗಳಲ್ಲಿ ಒಂದು ಮುಖ ಇರುವುದು ಸಹಜ. ಆದ್ರೆ ಈ ಪಾತ್ರಕ್ಕೆ ಅವೆರಡೂ ಮುಖಗಳೂ ಇವೆ. ಆರಂಭದಲ್ಲಿ ಚಿತ್ರಕತೆಗೆ ಟರ್ನ್‌ ಆ್ಯಂಡ್‌ ಟ್ವಿಸ್ಟ್‌ ಸಿಗುವುದೇ ನನ್ನ ಪಾತ್ರದ ಮೂಲಕ. ತೆರೆ ಮೇಲೆ ನಾನು ಬಂದು ಹೋದ ಮೇಲೆ ಕತೆಯ ದಾರಿಯೇ ಬದಲಾಗುತ್ತೆ. ಅದೆಲ್ಲ ಯಾಕಾಯಿತು, ಏನಾಯಿತು ಅಂತ ಎರಡು ಬಗೆಯ ಆಲೋಚನೆ ಪ್ರೇಕ್ಷಕರಲ್ಲಿ ಹುಟ್ಟಿಕೊಳ್ಳುವುದು ಗ್ಯಾರಂಟಿ. ಕೊನೆಗದು ಪಾಸಿಟಿವ್‌ ಆಗಿ ಕಾಣಿಸಿಕೊಳ್ಳುತ್ತೋ ಅಥವಾ ನೆಗೆಟಿವ್‌ ಶೇಡ್‌ನಲ್ಲೇ ಎಂಡ್‌ ಆಗುತ್ತದೋ ಎನ್ನುವುದು ಸಸ್ಪೆನ್ಸ್‌’ ಅಂತ ತಮ್ಮ ಪಾತ್ರದ ವೈಶಿಷ್ಟ್ಯತೆ ಕುರಿತು ನೇಹಾ ಪಾಟೀಲ್‌ ಹೇಳಿಕೊಳ್ಳುವ ವಿಶ್ವಾಸದ ಮಾತು.

‘ಚಿತ್ರದ ತಾರಾಗಣವೇ ವಿಶೇಷ. ರೆಹಮಾನ್‌, ಪ್ರದೀಪ್‌ ಚಿತ್ರದ ನಾಯಕರು. ಸಾಧು ಕೋಕಿಲ, ಜಾನಿ ಲಿವರ್‌ ಜತೆಗೆ ತಬಲ ನಾಣಿ ಸೇರಿ ಹಲವರು ಚಿತ್ರದಲ್ಲಿದ್ದಾರೆ. ಬಾಲಿವುಡ್‌ನ ಹೆಸರಾಂತ ನೃತ್ಯ ನಿರ್ದೇಶಕಿ ಸರೋಜ್‌ಖಾನ್‌ ಅವರಂತಹ ಲೆಜೆಂಡ್‌ ಈ ಚಿತ್ರಕ್ಕೆ ಕೊರಿಯೋಗ್ರಫಿ ಮಾಡಿದ್ದಾರೆ. ಅವರ ನೃತ್ಯ ನಿರ್ದೇಶನದಲ್ಲಿ ಕುಣಿಯುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ’ ಎನ್ನುತ್ತಾ್ತರೆ ನೇಹಾ ಪಾಟೀಲ್‌.

ದರ್ಶನ್‌ ಅಭಿನಯದ ಒಡೆಯ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಎಸ್‌. ನಾರಾಯಣ್‌ ಪುತ್ರ ಪಂಕಜ್‌ ಜೋಡಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಚಿತ್ರಗಳು ತೆರೆ ಕಾಣುವ ಹೊತ್ತಿಗೆ ನೇಹಾ ಹಸೆಮಣೆ ಎರಲಿದ್ದಾರೆ. ಹಾಗಂತ ಮದುವೆ ಯಾದ್ರೆ ನಟನೆಯಿಂದ ದೂರ ಇರುತ್ತಾರೆಂದು ಭಾವಿಸಬೇಡಿ, ಮದುವೆ ನಂತರವೇ ಅಭಿನಯಿಸುವುದಕ್ಕೇನು ಅಡ್ಡಿ ಇಲ್ಲ ಅಂದಿದ್ದಾರಂತೆ ಅವರ ಭಾವಿಪತಿ.