ಪ್ಲೀಸ್‌ ಸೇವ್‌ ಮೀ... ಈ ಚಿತ್ರವನ್ನು ಗೆಲ್ಲಿಸುತ್ತೇನೆಂದು ಒಂದು ಆತ್ಮಕ್ಕೆ ಮಾತು ಕೊಟ್ಟಿರುವೆ. ಅದನ್ನು ನಿಮ್ಮಿಂದ ನಾನು ಸಾಧಿಸಬೇಕು. ಪ್ಲೀಸ್‌ ಸೇವ್‌ ಮೀ...

- ಹೀಗೆ ಹೇಳಿಕೊಂಡಿದ್ದು ನಿರ್ದೇಶಕ ಮುರಳೀಕೃಷ್ಣ. ಅದು ‘ಗರ’ ಚಿತ್ರದ ಪತ್ರಿಕಾಗೋಷ್ಟಿ. ಅವರೇ ಹೇಳಿಕೊಂಡಂತೆ ಸಾಕಷ್ಟುಬಾರಿ ಈ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿದೆ. ಈ ಬಾರಿಗೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಹೇಳುವ ಜತೆಗೆ ಒಂದು ಹಾಡಿನ ಪ್ರದರ್ಶನದ ಉದ್ದೇಶದೊಂದಿಗೆ ಮಾಧ್ಯಮಗಳ ಮುಂದೆ ಬಂದಿತ್ತು. ಹೀಗೆ ಬಂದಾಗ ಮೊದಲು ಮಾತಿಗೆ ನಿಂತಿದ್ದು ನಿರ್ದೇಶಕರು.

‘ತುಂಬಾ ಒಳ್ಳೆಯ ಉದ್ದೇಶದೊಂದಿಗೆ ಮಾಡಿರುವ ಸಿನಿಮಾ ಇದು. ಆರ್‌ ಕೆ ನಾರಾಯಣ್‌ ಅವರ ಅಸ್ಟ್ರಾಲಜಿ ಡೇ ಎನ್ನುವ ಕತೆಯನ್ನು ಓದಿ ಅದು ಹುಟ್ಟಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದಾಗ ಹುಟ್ಟಿಕೊಂಡ ಚಿತ್ರವೇ ಗರ. ನಾನು ಇಲ್ಲಿಗೆ ದುಡ್ಡು ಮಾಡಲಿಕ್ಕೆ ಬಂದಿಲ್ಲ. ಪ್ರೀತಿಯಿಂದ ಸಿನಿಮಾ ಮಾಡಿದ್ದೇನೆ. ನೀವು ಅಷ್ಟೇ ಪ್ರೀತಿಯಿಂದ ನೋಡುತ್ತೀರೆಂಬ ನಂಬಿಕೆ ಇದೆ. ಚಿತ್ರದಲ್ಲಿ ಸಾಕಷ್ಟುವಿಶೇಷತೆಗಳಿವೆ’ ಎಂದರು ಮುರಳೀಕೃಷ್ಣ.

ಈಗಾಗಲೇ ಚಿತ್ರದ ಟ್ರೇಲರ್‌ ಬಂದಿದೆ. ಜತೆಗೆ ವಿಭಿನ್ನ ಬಗೆಯ ಪೋಸ್ಟರ್‌ಗಳು ಬಂದಿವೆ. ರೆಹಮಾನ್‌, ಅವಂತಿಕಾ ಮೋಹನ್‌ ಚಿತ್ರದ ಜೋಡಿ. ಹಾಗೆ ಜಾನಿ ಲೀವರ್‌ ಹಾಗೂ ಸಾಧುಕೋಕಿಲ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಇನ್ನೂ ನೃತ್ಯ ನಿರ್ದೇಶಕರಾದ ಸರೋಜ್‌ ಖಾನ್‌ ಒಂದು ಹಾಡಿಗೆ ಕೋರಿಯೋಗ್ರಫಿ ಮಾಡಿದ್ದಾರೆ.

‘ಎಲ್ಲರು ಹೊಸಬರೇ. ನಿರ್ದೇಶಕರು ಕಂಡ ಕನಸಿಗೆ ನಾವೆಲ್ಲ ಜೀವ ತುಂಬಿದ್ದೇವೆ. ಖಂಡಿತ ಇದು ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾ. ಆ ನಂಬಿಕೆ ನನಗೆ ಇದೆ. ನಿರ್ದೇಶಕರು ಅತ್ಯಂತ ಶ್ರದ್ಧಯಿಂದ ಚಿತ್ರದ ಪ್ರತಿ ಪಾತ್ರವನ್ನೂ ಆಯ್ಕೆ ಮಾಡಿಕೊಂಡು ತೆರೆ ಮೇಲೆ ತಂದಿದ್ದಾರೆ. ಇಲ್ಲಿ ನನ್ನ ಪಾತ್ರಕ್ಕೆ ಬೇರೆ ಬೇರೆ ರೀತಿಯ ನೆರಳುಗಳಿವೆ. ಎಲ್ಲರ ಬದುಕಿನಲ್ಲಿ ಗರಗಳು ಹೇಗೆ ಆಟವಾಡುತ್ತವೆ ಎಂಬುದನ್ನು ಹೇಳುವ ಸಿನಿಮಾ ಇದು’ ಎಂದರು ರೆಹಮಾನ್‌.

ಈಗಾಗಲೇ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ ಯು ಸರ್ಟಿಫಿಕೇಟ್‌ ಸಿಕ್ಕಿದೆ. ಮುಂಬಾಯಿ ಬೆಡಗಿ ಅವಂತಿಕಾ ಮೋಹನ್‌ ಅವರಿಗೆ ಇದು ಮೊದಲ ಕನ್ನಡ ಸಿನಿಮಾ. ‘ಸಾಕಷ್ಟುನಿರೀಕ್ಷೆ ಇಟ್ಟುಕೊಂಡು ಈ ಚಿತ್ರದಲ್ಲಿ ನಟಿಸಿದ್ದೇನೆ. ಒಳ್ಳೆಯ ರೀತಿಯಲ್ಲಿ ರಿಜಲ್ಟ್‌ ಬರುತ್ತದೆಂಬ ನಂಬಿಕೆ ಇದೆ’ ಎಂದರು ಅವಂತಿಕಾ ಮೋಹನ್‌. ಮನ್‌ ದೀಪ್‌ರಾಯ…, ನೇಹಾಪಾಟೀಲ…, ಗುರುರಾಜ್‌, ಹಿರಿಯ ಕಲಾವಿದರಾದ ರಾಮಕೃಷ್ಣ, ರೂಪದೇವಿ, ದಯಾನಂದ್‌, ರಮೇಶ್‌ ಭಟ್‌, ಎಂ ಎಸ್‌ ಉಮೇಶ್‌ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ ‘ಗರ’ ಚಿತ್ರ ಮೇ 3 ಕ್ಕೆ ತೆರೆಗೆ ಬರುತ್ತಿದೆ.