ಒಂದು ಚಿತ್ರದಲ್ಲಿ ಆಮೀರ್​ ಖಾನ್​ ಮಗಳ ಪಾತ್ರ ಮಾಡಿದ ನಟಿ ಫಾತೀಮಾ ಇನ್ನೊಂದು ಚಿತ್ರದಲ್ಲಿ ನಾಯಕಿ ಪಾತ್ರ ಮಾಡಿದ್ದು ಸಕತ್​ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ನಟ ಹೇಳಿದ್ದೇನು? 

ಸಿನಿಮಾ ಅಂದ ಮೇಲೆ ನಾಯಕ-ನಾಯಕಿಯ ನಡುವೆ ವಯಸ್ಸಿನ ಮಿತಿಯೇ ಇಲ್ಲ ಎನ್ನೋದನ್ನು ಇದಾಗಲೇ 60ರ ಸನಿಹ ಬಂದಿರೋ ನಟರು 20-25ರ ಯುವತಿಯರ ಜೊತೆ ರೊಮಾನ್ಸ್​ ಮಾಡುತ್ತಲೇ ಪ್ರೂವ್​ ಮಾಡುತ್ತಿದ್ದಾರೆ. ನಾಯಕಿ ತಮ್ಮ ಮಗಳ ವಯಸ್ಸಿಗಿಂತಲೂ ಚಿಕ್ಕವಳಾದರೂ, ನಾಯಕ ತಮ್ಮ ಅಪ್ಪನ ವಯಸ್ಸಿಗಿಂತಲೂ ದೊಡ್ಡವನಾದರೂ ಇಲ್ಲಿ ವಯಸ್ಸಿಗೆ ನಿರ್ಬಂಧವೇನೂ ಇಲ್ಲ. ಕೆಲವರು ಹೀಗೆ ಮಾಡಿದಾಗ ಪ್ರೇಕ್ಷಕರು ಟ್ರೋಲ್​ ಮಾಡುತ್ತಾರೆ ಬಿಟ್ಟರೆ ಸಿನಿಮಾದಲ್ಲಿ ಎಲ್ಲವೂ ಸೈ. ಅವರ ಅಭಿಮಾನಿಗಳಿಗೂ ಅದು ಇಷ್ಟವೇ. ನಾಯಕಿಯಾದವಳೇ ಅಪ್ಪನ ವಯಸ್ಸಿನವನ ಜೊತೆ ರೊಮಾನ್ಸ್ ಮಾಡಲು, ಸಿನಿಮಾಕ್ಕೆ ಅಗತ್ಯಬಿದ್ದರೆ ಎಲ್ಲದಕ್ಕೂ ರೆಡಿ ಎನ್ನುತ್ತಲೇ ಇನ್ನೇನೋ ಮಾಡಲು ಒಪ್ಪಿದಾಗ ನಿಮ್ಮದೇನು ಎಂದು ಪ್ರಶ್ನಿಸುವವರು ಸಿನಿಮಾ ಮಂದಿ.

ಅದೇನೇ ಇರಲಿ. ಸದ್ಯ ಇದೇ ವಿವಾದದಲ್ಲಿ ಸಿಲುಕಿದ್ದಾರೆ ನಟ ಆಮೀರ್​ ಖಾನ್​. ಇಬ್ಬರು ಪತ್ನಿಯರಿಗೆ ಡಿವೋರ್ಸ್​ ಕೊಟ್ಟು ಮೂರನೆಯ ಮದುವೆಗೆ ರೆಡಿಯಾಗಿರೋ ಬಾಲಿವುಡ್‌ನ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಇದೀಗ ನಾಯಕಿ ಫಾತಿಮಾ ಸನಾ ಶೇಖ್ ವಿಷಯದಲ್ಲಿ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಅದಕ್ಕೆ ಕಾರಣ, ‘ದಂಗಲ್’ ಚಿತ್ರದಲ್ಲಿ ಫಾತಿಮಾ ಅವರ ತಂದೆಯ ಪಾತ್ರದಲ್ಲಿ ಆಮೀರ್​ ಕಾಣಿಸಿಕೊಂಡಿದ್ದರೆ, ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದಲ್ಲಿ ಆಮೀರ್​ ಜೊತೆ ನಾಯಕಿಯಾಗಿದ್ದಾರೆ ನಟಿ. ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಕಾರಣಕ್ಕಾಗಿಯೇ ಇವರನ್ನು ನಾಯಕಿ ಮಾಡಲಾಗಿದೆ ಎಂದು ಗುಸುಗುಸು ಶುರುವಾಗಿತ್ತು. ಅಷ್ಟಕ್ಕೂ ಸಿನಿಮಾ ಪ್ರಪಂಚದಲ್ಲಿ ಗಾಸಿಪ್​ಗೇನೂ ಬರವಿಲ್ಲವಲ್ಲ.

ಆದರೆ ಆಮೀರ್​ ಖಾನ್​ ಈ ಬಗ್ಗೆ ಅಸಮಾಧಾನಗೊಂಡು ಈ ಬಗ್ಗೆ ಸಂದರ್ಶನವೊಂದರಲ್ಲಿ ನೋವನ್ನು ಹಂಚಿಕೊಂಡಿದ್ದಾರೆ. ಫಾತೀಮಾ ಅವರ ಕುರಿತಾಗಿ ನಟ ಹೇಳಿದ್ದಾರೆ. 'ಥಗ್​ ಆಫ್​ ಹಿಂದೂಸ್ತಾನ್​ ಚಿತ್ರದಲ್ಲಿ ಯಾವ ನಟಿಯೂ ಜಫೀರಾ ಪಾತ್ರವನ್ನು ಒಪ್ಪಿಕೊಂಡಿರಲಿಲ್ಲ. ದೀಪಿಕಾ ಪಡುಕೋಣೆ, ಆಲಿಯಾ ಭಟ್​, ಶ್ರದ್ಧಾ ಕಪೂರ್​ ಅವರು ಈ ರೋಲ್​ಗೆ ನಿರಾಕರಿಸಿದ್ದರು. ಬಳಿಕ ಫಾತಿಮಾ ಆಯ್ಕೆಯಾದರು. ಅವರನ್ನು ಆಡಿಷನ್ ಮಾಡಿದ ನಂತರ, ನಿರ್ಮಾಪಕರು ಅವರನ್ನು ಆಯ್ಕೆ ಮಾಡಿದರು. ಆದರೆ ಚಿತ್ರದಲ್ಲಿ ಫಾತಿಮಾ ಅವರೊಂದಿಗೆ ಒಂದು ಲವ್ ಸಾಂಗ್​ ಮಾಡಲು ಆಮಿರ್ ನಿರಾಕರಿಸಿದ್ದರು. ಆದ್ದರಿಂದ ಮತ್ತಷ್ಟು ಗುಸುಗುಸು ಶುರುವಾಗಿತ್ತು.

ಈ ಬಗ್ಗೆ ಹೇಳಿರುವ ಆಮೀರ್​ ಖಾನ್​, ಎಲ್ಲವೂ ಸಿನಿಮಾ ಅಷ್ಟೇ. ನಾನು ಫಾತಿಮಾಳ ನಿಜವಾದ ತಂದೆ ಅಥವಾ ನಿಜವಾದ ಲವರ್​ ಅಲ್ಲ. ನಾವು ಸಿನಿಮಾ ಮಾಡುತ್ತಿದ್ದೇವೆ ಮತ್ತು ಪ್ರೇಕ್ಷಕರು ನಾನೇ ಅವಳ ನಿಜವಾದ ತಂದೆ ಎಂದು ಭಾವಿಸುವಷ್ಟು ಮೂರ್ಖರಲ್ಲ. ನಾವು ಪ್ರೇಕ್ಷಕರನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೇವೆ. ಅವಳು ನನ್ನ ಲವರ್ ಪಾತ್ರ ಮಾಡಿದಳು ಎಂಬ ಕಾರಣಕ್ಕೆ ಸ್ಕ್ರಿಪ್ಟ್‌ನಲ್ಲಿನ ನಿರಂತರ ಬದಲಾವಣೆಗಳಿಂದಾಗಿ ಚಿತ್ರದ ಮೂಲ ಕಥೆ ಕಳೆದುಹೋಗಿದೆ’ ಎಂದು ಸ್ವಲ್ಪ ವಿಷಾದದಿಂದಲೇ ನುಡಿದರು.