ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಒಂದು ಸಿನಿಮಾಗೆ 8 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮುಂಬರುವ 'ಆದರ್ಶ ಕುಟುಂಬಂ' ಚಿತ್ರದಲ್ಲಿ ಇಬ್ಬರು ಮಕ್ಕಳ ತಾಯಿಯಾಗಿ ಹಾಸ್ಯಮಯ ಪಾತ್ರದಲ್ಲಿ ನಟಿಸುತ್ತಿರುವ ನಟಿ, ಸಂಭಾವನೆ ಕುರಿತು ಹೇಳಿದ್ದೇನು?
ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ ಸದ್ಯ ಸಕತ್ ಬೇಡಿಕೆಯಲ್ಲಿರುವ ನಟಿ. ಕೆಜಿಎಫ್ ಸರಣಿಯಲ್ಲಿ ನಾಯಕಿಯಾಗಿ ನಟಿಸಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ನಟಿ ಶ್ರೀನಿಧಿ ಶೆಟ್ಟಿ. ಕೆಜಿಎಫ್ 1, ಕೆಜಿಎಫ್ 2 ನಂತರ ಕೋಬ್ರಾ, ಹಿಟ್ ದಿ ಥರ್ಡ್ ಕೇಸ್, ತೆಲುಸು ಕದಾ ಚಿತ್ರಗಳಿಂದ ಫೇಮಸ್ ಆಗಿದ್ದಾರೆ. ಇದೀಗ ನಟಿ, ವಿಕ್ಟರಿ ವೆಂಕಟೇಶ್- ತ್ರಿವಿಡ್ರಮ್ ಕಾಂಬೋದಲ್ಲಿ ಬರುತ್ತಿರುವ 'ಆದರ್ಶ ಕುಟುಂಬಂ'- ಹೌಸ್ ನಂ.47 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಇವರು ಇಬ್ಬರು ಮಕ್ಕಳ ತಾಯಿಯಾಗಿ ನಟಿಸುತ್ತಿದ್ದಾರೆ. ಆದರ್ಶ ಕುಟುಂಬಂ ಸಿನಿಮಾ ಅಕ್ಟೋಬರ್ 30 ರಂದು ಚಿತ್ರಮಂದಿರಗಳಿಗೆ ಬರಲಿದೆ. ಈ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ನಟಿ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಇದೇ ವೇಳೆ ಶ್ರೀನಿಧಿ ಅವರು, ಒಂದು ಸಿನಿಮಾಗೆ 8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿಯಾಗಿತ್ತು. ಈ ಬಗ್ಗೆ ಪ್ರಶ್ನೆ ಕೇಳಿದಾಗ, ನಟಿ, ಕೆಲವೇ ಸಿನಿಮಾಗಳಲ್ಲಿ ನಟಿಸಿರುವಾಗ ಅಷ್ಟು ದೊಡ್ಡ ಮೊತ್ತ ಕೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಸೂಕ್ತ ಆಫರ್ಗಳು ಸಿಗದ ಕಾರಣ ಹೆಚ್ಚು ಸಿನಿಮಾ ಮಾಡಿಲ್ಲ ಎಂದಿರುವ ನಟಿ, ಇಷ್ಟೊಂದು ಬೃಹತ್ ಮೊತ್ತವನ್ನು ತಾವು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಂಟು ವರ್ಷಗಳಲ್ಲಿ ತಾವು ಕೇವಲ ಆರೇ ಸಿನಿಮಾಗಳಲ್ಲಿ ನಟಿಸಿದ್ದು, ಹೀಗಿರುವಾಗ ಇಷ್ಟು ದೊಡ್ಡ ಮೊತ್ತ ಹೇಗೆ ಪಡೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ದುಡ್ಡಿಗಿಂತ ಕಥೆ ಮುಖ್ಯ
ನಾನು ಕಥೆಗೆ ಪ್ರಾಮುಖ್ಯತೆ ಕೊಡುತ್ತೇನೆ. ಉಳಿದಿದ್ದೆಲ್ಲಾ ಆಮೇಲೆ. ನಾನು ಕೇವಲ ಹಣವನ್ನೇ ನೋಡುತ್ತಾ ಹೋದರೆ ಜೀವನದಲ್ಲಿ ತೃಪ್ತಿಯೇ ಇರುವುದಿಲ್ಲ ಎನ್ನುವ ಸತ್ಯ ನನಗೆ ಗೊತ್ತಿದೆ. ನಾನು ಮಾಡಿರುವ ಸಿನಿಮಾಗಳಲ್ಲಿ ಅಷ್ಟೊಂದು ಸಂಭಾವನೆ ಪಡೆದಿಲ್ಲ. ಮಾಡಿರೋ ಆರು ಸಿನಿಮಾಗಳಿಗೆ ಎಂಟು ಕೋಟಿ ರೂಪಾಯಿ ಕೊಡಿ ಎಂದು ಕೇಳೋಕೆ ಆಗುತ್ತದಾ? ಖಂಡಿತಾ ಇಲ್ಲ. ಸಿನಿಮಾಗಳನ್ನು ಮಾಡುತ್ತಾ ಹೋದಂತೆ ಸಂಭಾವನೆ ಹೆಚ್ಚಿಸಿಕೊಳ್ಳೋಣ. ಸಧ್ಯಕ್ಕಂತೂ ಅಷ್ಟೆಲ್ಲಾ ಹಣ ಪಡೆದಿಲ್ಲ ಹಾಗೂ ಕಡಿಮೆ ಸಿನಿಮಾಗಳನ್ನು ಮಾಡುತ್ತಿರುವುದಕ್ಕೆ ಉತ್ತಮ ಕಥೆ ಸಿಕ್ಕಿಲ್ಲ ಎನ್ನುವುದೇ ಕಾರಣ ಎಂದು ಶ್ರೀನಿಧಿ ಹೇಳಿದ್ದಾರೆ.
ಚಿತ್ರದ ಕುರಿತು ನಟಿ ಹೇಳಿದ್ದೇನು?
ಇನ್ನು, ಆದರ್ಶ ಕುಟುಂಬಂ ಚಿತ್ರದ ಕುರಿತು ಹೇಳಿರುವ ನಟಿ, ಇದರಲ್ಲಿ ನಾನು ಇಬ್ಬರು ಮಕ್ಕಳ ತಾಯಿ. ತಾಯಿಯ ಪಾತ್ರವಾದರೂ ಈ ಸಿನಿಮಾಗೆ ಬೇಡ ಎನ್ನುವ ಆಲೋಚನೆ ಒಂದೇ ಕ್ಷಣವೂ ಬರಲಿಲ್ಲ. ತಕ್ಷಣವೇ ಓಕೆ ಹೇಳಿದೆ.. ಇಂಥ ಸಿನಿಮಾಗಳು, ಪಾತ್ರಗಳು ಅಪರೂಪಕ್ಕೆ ಬರುತ್ತವೆ ಎಂದು ನಂಬುತ್ತೇನೆ. ನನ್ನ ವೃತ್ತಿಜೀವನದಲ್ಲಿ (career) ಇಂಥ ಕಾಮಿಡಿ ಪಾತ್ರ ಮಾಡುವುದು ಇದೇ ಮೊದಲು. ಚಿಟ್ ಫಂಡ್ಸ್ ಗಳಲ್ಲಿ ಹಣ ಕಳೆದುಕೊಂಡು ಸಾಲ ಮಾಡುತ್ತಾ ಗಂಡನಿಗೆ ತೊಂದರೆ ಕೊಡುವ ಗೃಹಿಣಿಯಾಗಿ ತುಂಬಾ ಫನ್ನಿಯಾಗಿ ನನ್ನ ಪಾತ್ರವನ್ನು ತ್ರಿವಿಡ್ರಮ್ ವಿನ್ಯಾಸಗೊಳಿಸಿದ್ದಾರೆ. ಕೇವಲ ಕಂಟೆಂಟ್ ಬಲವಾಗಿರುವ ಪಾತ್ರಗಳನ್ನು ಮಾಡುವುದೇ ನನಗೆ ಇಷ್ಟ ಎಂದಿದ್ದಾರೆ.







