‘ಪೊಗರು’ ಚಿತ್ರದ 14 ದೃಶ್ಯಗಳಿಗೆ ಕತ್ತರಿ
‘ಪೊಗರು’ ಚಿತ್ರದ ವಿವಾದಿತ ದೃಶ್ಯಗಳಿಗೆ ಕತ್ತರಿ ಬೀಳಲಿದೆ. ಇನ್ನೆರಡು ದಿನಗಳಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡುವಂತಿವೆ ಎಂದು ಆರೋಪಿಸಲಾದ 14 ಶಾಟ್‌ಗಳಿಗೆ ಕತ್ತರಿ ಹಾಕಲಾಗುವುದು ಎಂದು ನಿರ್ದೇಶಕರು ಹೇಳಿದ್ದಾರೆ.
ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ವಿವಾದಿತ ದೃಶ್ಯಗಳಿಗೆ ಕತ್ತರಿ ಬೀಳಲಿದೆ. ಇನ್ನೆರಡು ದಿನಗಳಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡುವಂತಿವೆ ಎಂದು ಆರೋಪಿಸಲಾದ 14 ಶಾಟ್‌ಗಳಿಗೆ ಕತ್ತರಿ ಹಾಕಿ ಚಿತ್ರ ಪ್ರದರ್ಶನ ಮಾಡುವುದಾಗಿ ಚಿತ್ರದ ನಿರ್ದೇಶಕ ನಂದಕಿಶೋರ್ ತಿಳಿಸಿದ್ದಾರೆ.
ಬ್ರಾಹ್ಮಣ ಸಮುದಾಯದ ಕ್ಷಮೆ ಕೋರಿದ ನಂದಕಿಶೋರ್, ‘ಈಗಾಗಲೇ ಚಿತ್ರದ ವಿವಾದಿತ ಸೀನ್‌ಗಳನ್ನು ಮ್ಯೂಟ್ ಮಾಡಿದ್ದೇನೆ. ಶೀಘ್ರ ಕತ್ತರಿ ಹಾಕುತ್ತೇನೆ. ಆ ದೃಶ್ಯಗಳಿಗೆ ಪರ್ಯಾಯ ದೃಶ್ಯದ ಜೋಡಿಸುತ್ತೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಅವರು, ‘ಬ್ರಾಹ್ಮಣ ಸಮುದಾಯದವರು ಅಮಾಯಕರು, ಮುಗ್ಧರು. ಇವರ ಮೇಲೆ ದೌರ್ಜನ್ಯ ಆಗುತ್ತಿರುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಅದು ವಿವಾದವಾಗಿದೆ. ಅದಕ್ಕಾಗಿ ಕ್ಷಮೆ ಕೂಡ ಕೇಳಿದ್ದೇನೆ. ಸಿನಿಮಾವನ್ನು ಸಿನಿಮಾ ಥರ ನೋಡುತ್ತಾರೆ ಎಂದುಕೊಂಡಿದ್ದೆ. ಆದರೂ ವೈಯುಕ್ತಿಕವಾಗಿ ಯಾರಿಗಾದರೂ, ಯಾವ ಸಮುದಾಯಕ್ಕಾದರೂ ನೋವಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ’ ಎಂದಿದ್ದಾರೆ.
ಕೆಜಿಎಫ್ ನಂತರ ತೆಲುಗು, ತಮಿಳಿನಲ್ಲಿ ಹಿಟ್ ಆಗಿದ್ದು ಪೊಗರು ಚಿತ್ರನೇ! ..
ಇದಕ್ಕೂ ಮುನ್ನ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಿನಿಮಾದಲ್ಲಿರುವ ಬ್ರಾಹ್ಮಣರನ್ನು ಅವಹೇಳನ ಮಾಡುವ ದೃಶ್ಯಗಳನ್ನು ತೆಗೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದವು. ಪೊಗರು ನಿರ್ದೇಶಕ ನಂದಕಿಶೋರ್ ಅವರನ್ನು ಸ್ಥಳಕ್ಕೆ ಕರೆಸಲು ಪಟ್ಟು ಹಿಡಿದವು.
ವಿಷಯ ತಿಳಿಯುತ್ತಿದ್ದಂತೆಯೇ ಪೊಗರು ಚಿತ್ರದ ನಿರ್ಮಾಪಕ ಗಂಗಾಧರ್ ಪರವಾಗಿ ನಿರ್ಮಾಪಕ ಸೂರಪ್ಪ ಬಾಬು ಸ್ಥಳಕ್ಕೆ ಬಂದರು. ಈ ನಡುವೆ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಪ್ರಮುಖರು ಹಾಗೂ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ಮಾಪಕ ಸೂರಪ್ಪ ಬಾಬು ಮತ್ತಿತರರು ಉಪಸ್ಥಿತರಿದ್ದು ಪರಿಸ್ಥಿತಿ ತಿಳಿಗೊಳಿಸಿದರು.