ಬೆಂಗಳೂರು(ಮೇ.30): ಮೋದಿ-2 ಸರ್ಕಾರದ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಇಂದು ಸಂಜೆ 7 ಗಂಟೆಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

"

ಈ ಮಧ್ಯೆ ಮೋದಿ-2 ಸಂಪುಟಕ್ಕೆ ಯಾರು ಸೇರುತ್ತಾರೆ? ಕರ್ನಾಟಕದಿಂದ ಯಾರಿಗೆ ಸಚಿವ ಸ್ಥಾನದ ಭಾಗ್ಯ ದೊರೆಯಲಿದೆ ಎಂಬ ಚರ್ಚೆ ಜೋರಾಗಿಯೇ ನಡೆದಿದೆ. ಅದರಂತೆ ಮೋದಿ ಸಂಪುಟಕ್ಕೆ ಸೇರ ಬಯಸುವ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ.

ಪ್ರಮುಖವಾಗಿ ಕರ್ನಾಟಕದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದು, ಹಲವು ಹಿರಿಯ ನಾಯಕರು ಈ ಬಾರಿ ಸಂಪುಟದಲ್ಲಿ ಸ್ಥಾನ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ಕೆಲವು ನಾಯಕರಿಗೆ ಈಗಾಗಲೇ ಸಂಪುಟ ಸೇರುವ ಕುರಿತು ಖಚಿತ ಮಾಹಿತಿ ದೊರೆತಿದೆ ಎನ್ನಲಾಗಿದೆ.

"

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸದಾನಂದಗೌಡ ಅವರಿಗೆ ಖುದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆ ಮಾಡಿದ್ದು, ಇಂದು ಸಂಜೆ ನಡೆಯುವ ಪ್ರಮಣವಚನ ಕಾರ್ಯಕ್ರಮಕ್ಕೆ ಬರಲು ಹೇಳಿದ್ದಾರೆ ಎನ್ನಲಾಗಿದೆ.

ಅಲ್ಲದೇ ಬೆಳಗಾವಿ ಸಂಸದ ಸುರೇಶ್ ಅಂಗಡಿ, ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಅವರಿಗೂ ಮೋದಿ ಸಂಪುಟದಲ್ಲಿ ಸ್ಥಾನ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದರ ಜೊತೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೂ ಸಚಿವ ಸ್ಥಾನ ಖಚಿತ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಮೋದಿ-2 ಸಂಪುಟದಲ್ಲಿ ಕರ್ನಾಟಕದಿಂದ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದಕ್ಕೆ ಇಂದು ಸಂಜೆ ತೆರೆ ಬೀಳಲಿದೆ.