ನವದೆಹಲಿ(ಏ.10): ತಮ್ಮ ನೇರ ಮತ್ತು ನಿಷ್ಠುರ ನುಡುಗಳಿಂದ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಸ್ವಪಕ್ಷಕ್ಕೆ ಹಲವು ಬಾರಿ ಮುಜುಗರ ತಂದಿದ್ದಾರೆ.

ಇದೀಗ 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಸ್ವಾಮಿ ಟೀಕಿಸಿದ್ದಾರೆ. ಪ್ರಣಾಳಿಕೆಯಲ್ಲಿ ಎರಡು ಪ್ರಮಾದಗಳಿವೆ ಎಂದು ಸ್ವಾಮಿ ಹರಿಹಾಯ್ದಿದ್ದಾರೆ.

ಪಕ್ಷದ ಚುನಾವಣಾ ಪ್ರಣಾಳಿಕೆ ‘ಸಂಕಲ್ಪ ಪತ್ರ’ದಲ್ಲಿ 2022ರೊಳಗೆ ದೇಶದ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಭರವಸೆಯನ್ನು ನೀಡಲಾಗಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸ್ವಾಮಿ, ಇದು ಅಸಾಧ್ಯದ ಮಾತು ಎಂದು ಜರೆದಿದ್ದಾರೆ. 

ರೈತರ ಆದಾಯವನ್ನು 2022 ರೊಳಗೆ ದುಪ್ಪಟ್ಟುಗೊಳಿಸಬೇಕಾದರೆ ದೇಶ ವರ್ಷಕ್ಕೆ ಶೇ.24ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಬೇಕಾಗುತ್ತದೆ. ಆದರೆ ಇಷ್ಟು ಪ್ರಗತಿಯನ್ನು ನಾವು ಸಾಧಿಸಲಿದ್ದೇವೆ ಎಂಬುದನ್ನು ನಂಬುವುದಕ್ಕೆ ಸಾಧ್ಯವಿಲ್ಲ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ. 

ಶೇ.24 ರ ಬದಲು ಶೇ.10 ರಷ್ಟು ಆರ್ಥಿಕ ಬೆಳವಣಿಗೆ ಸಾಧ್ಯವಿದ್ದು, ಅತಿಯಾದ ಭರವಸೆ ನೀಡುವುದು ಒಳ್ಳೆಯದಲ್ಲ ಎಂದು ಸ್ವಾಮಿ ಬಿಜೆಪಿಗೆ ಸಲಹೆ ನೀಡಿದ್ದಾರೆ.

ಇನ್ನು ಪ್ರಣಾಳಿಕೆಯಲ್ಲಿ ಭಾರತವನ್ನು ವಿಶ್ವದ ಅತಿ ಹೆಚ್ಚು ಜಿಡಿಪಿ ಹೊಂದಿರುವ 6 ನೇ ರಾಷ್ಟ್ರ ಎಂದು ಮುದ್ರಿಸಲಾಗಿದೆ. ಭಾರತ ಹೆಚ್ಚು ನಿವ್ವಳ ಆಂತರಿಕ ಉತ್ಪನ್ನ ಹೊಂದಿರುವ ವಿಶ್ವದ ಮೂರನೇ ಬೃಹತ್‌ ರಾಷ್ಟ್ರವೇ ಹೊರತು ಆರನೇ ಬೃಹತ್‌ ರಾಷ್ಟ್ರವಲ್ಲ ಎಂದು ಸ್ವಾಮಿ ಸ್ಪಷ್ಟಪಡಿಸಿದ್ದಾರೆ.