ನವದೆಹಲಿ(ಏ.08): 2019ರ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರಾಮ ಮಂದಿರ ನಿರ್ಮಾಣದ ಭರವಸೆ ನೀಡಿರುವ ಬಿಜೆಪಿ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ 1 ಲಕ್ಷ ರೂ.ವರೆಗೆ ಸಾಲ ನೀಡುವ ವಾಗ್ದಾನ ಮಾಡಿದೆ.

"

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತಿತರ ಹಿರಿಯ ನಾಯಕರು ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.

"

ಪ್ರಮುಖವಾಗಿ ಮತ್ತೆ ರಾಮ ಮಂದಿರ ನಿರ್ಮಾಣದ ಭರವಸೆ ನೀಡಿರುವ ಬಿಜೆಪಿ, ಹಿಂದುತ್ವದ ತನ್ನ ಮೂಲ ಅಜೆಂಡಾವನ್ನು ಉಳಿಸಿಕೊಳ್ಳುವುದರ ಜೊತೆಗೆ ದೇಶದ ಜನತೆಗೆ ಹಲವು ಪ್ರಮುಖ ವಾಗ್ದಾನಗಳನ್ನು ನೀಡಿದೆ.

ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪಿಂಚಣಿ, ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ, ಭಯೋತ್ಪಾದನೆ ನಿರ್ಮೂಲನೆ ಸೇರಿದಂತೆ ಹಲವು ಪ್ರಮುಖ ವಾಗ್ದಾನಗಳನ್ನು ನೀಡಿದೆ.

ರಾಮ ಮಂದಿರ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತೂ ಬಿಜೆಪಿ ವಾಗ್ದಾನ ನೀಡಿದೆ.

ಇದೇ ವೇಳೆ ಗ್ರಾಮೀಣ ಭಾರತಕ್ಕೂ ಸಾಕಷ್ಟು ಯೋಜನೆ ನೀಡಿರುವ ಬಿಜೆಪಿಯ ಪ್ರಣಾಳಿಕೆ, ಕ್ರೆಡಿಟ್ ಕಾರ್ಡ್ ಮೂಲಕ ಶೂನ್ಯ ಬಡ್ಡಿದರದಲ್ಲಿ ರೈತರಿಗೆ 1 ಲಕ್ಷ ರೂ.ವರೆಗೆ ಸಾಲ, ಗ್ರಾಮೀಣ ವಿಕಾಸಕ್ಕೆ 25 ಲಕ್ಷ ಕೋಟಿ ರೂ. ಮೀಸಲು ಹಾಗೂ ಎಲ್ಲಾ ರೈತರಿಗೂ ವಾರ್ಷಿಕ 6,000 ರೂ. ಸಹಾಯಧನದ ವಾಗ್ದಾನ ಮಾಡಿದೆ.

ಇನ್ನು ವ್ಯಾಪಾರಿಗಳ ಹಿತ ಕಾಯಲು ರಾಷ್ಟ್ರೀಯ ವ್ಯಾಪಾರ ಆಯೋಗದ ರಚನೆ, 60 ವರ್ಷ ದಾಟಿದ ಉದ್ದಿಮೆದಾರರಿಗೆ ಪಿಂಚಣಿ ಘೋಷಣೆ ಮಾಡಲಾಗಿದೆ.

ದೇಶದ ಆಭೀವೃದ್ಧಿ ಮತ್ತು ಭದ್ರತೆಗೆ ತನ್ನ ಪ್ರಣಾಳಿಕೆ ಮೂಲಕ ಬದ್ಧತೆ ವ್ಯಕ್ತಪಡಿಸಿರುವ ಬಿಜೆಪಿ, ಭಯೋತ್ಪಾದನೆಯ ನಿರ್ಮೂಲನೆಯ ವಾಗ್ದಾನ ನೀಡಿದೆ. ಯಾವುದೇ ಕಾರಣಕ್ಕೂ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳದೆ, ದೇಶವನ್ನು ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿಂದ ರಕ್ಷಿಸುವ ಭರವಸೆ ನೀಡಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ ರದ್ದತಿಯ ತನ್ನ ನೀತಿಯನ್ನು ಪುನರುಚ್ಛಿಸಿರುವ ಬಿಜೆಪಿ, ಸದ್ಯಕ್ಕೆ ಸಂವಿಧಾನದ 35(A) ವಿಧಿಯನ್ನು ತುರ್ತಾಗಿ ರದ್ದುಗೊಳಿಸುವ ಭರವಸೆ ನೀಡಿದೆ.

ಈ ವೇಳೆ ಕಳೆದ 5 ವರ್ಷದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಸಾಧನೆಗಳ ಮೆಲುಕು ಹಾಕಿದ ಅಮಿತ್ ಶಾ, 2014-19ರ ಅವಧಿಯಲ್ಲಿ ಭಾರತ ಅಭೂತಪೂರ್ವ ಅಭಿವೃದ್ಧಿ ಕಂಡಿದೆ ಎಂದು ಹೇಳಿದರು.

ದೇಶದಲ್ಲಿ 7 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಸೌಲಭ್ಯ ದೊರಕಿದೆ. ಬಡವರಿಗೆ ಮನೆ, ವಿದ್ಯುತ್ ದೊರೆಯುತ್ತಿದ್ದು, ಗ್ರಾಮೀಣ ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಅಮಿತ್ ಶಾ ಹೇಳಿದರು.

ಆರ್ಥಿಕ ಅಭಿವೃದ್ಧಿಯಲ್ಲಿ ವಿಶ್ವದಲ್ಲಿ 12ನೇ ಸ್ಥಾನದಲ್ಲಿದ್ದ ಭಾರತ ಇದೀಗ 6ನೇ ಸ್ಥಾನದಲ್ಲಿದೆ. ಜಿಎಸ್ ಟಿ ಜಾರಿಯಿಂದಾಗಿ ದೇಶದ ಆರ್ಥಿಕ ಚಹರೆ ಬದಲಾಗಿದ್ದು, ಭಾರತದ ಆರ್ಥಿಕ ನಾಗಾಲೋಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಅಧ್ಯಕ್ಷರು ಘೋಷಿಸಿದರು.