ರಾಷ್ಟ್ರವಾದವೇ ದೇಶಕ್ಕಾಗಿ ದುಡಿಯಲು ಪ್ರೇರಣೆ| ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ| 'ರಾಷ್ಟ್ರವಾದದ ನೆರಳಲ್ಲಿ ಅಭಿವೃದ್ಧಿಯ ಪಥದತ್ತ ಸಾಗಲು ನಾವು ಬದ್ಧ'| 'ಬಿಜೆಪಿಯದ್ದು ಒಂದು ದೇಶ, ಒಂದು ಗುರಿ ಎಂಬ ಮಂತ್ರ'| ಕಳೆದ ಐದು ವರ್ಷದಲ್ಲಿ ದೇಶದ ಚಹರೆ ಬದಲಾಗಿದೆ ಎಂದ ಪ್ರಧಾನಿ| 'ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ ಮತ್ತಷ್ಟು ಗಟ್ಟಿಯಾಗಿದೆ'| ಬಿಜೆಪಿ ಪ್ರಣಾಳಿಕೆ ದೇಶದ ಜನರ ಭಾವನೆಯ ಪ್ರತೀಕ ಎಂದ ಮೋದಿ|
ನವದೆಹಲಿ(ಏ.08): ರಾಷ್ಟ್ರವಾದ ನಮಗೆಲ್ಲಾ ಪ್ರೇರಣೆಯಾಗಿದ್ದು, ರಾಷ್ಟ್ರವಾದದ ನೆರಳಲ್ಲಿ ಅಭಿವೃದ್ಧಿಯ ಪಥದತ್ತ ಸಾಗಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿ ಎಂಬುದು ಇದೀಗ ರಾಷ್ಟ್ರೀಯ ಆಂದೋಲನವಾಗಿ ಮಾರ್ಪಟ್ಟಿದ್ದು, ಇಡೀ ದೇಶ ಇದರಲ್ಲಿ ಭಾಗಿದಾರವಾಗಿದೆ ಎಂದು ಹೇಳಿದರು.
ಒಂದು ದೇಶ, ಒಂದು ಗುರಿ ಎಂಬ ಮಂತ್ರದೊಂದಿಗೆ ಬಿಜೆಪಿ ಮುನ್ನಡೆಯುತ್ತಿದ್ದು, ದೇಶದ 6 ಕೋಟಿ ಜನರ ಅಭಿಪ್ರಾಯ ಪಡೆದು ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ಮೋದಿ ಹೇಳಿದರು.
ಇದೇ ವೇಳೆ ಕಳೆದ 5 ವರ್ಷದಲ್ಲಿ ಆಡಳಿತದಲ್ಲಿ ತಮಗೆ ಬೆಂಬಲ ನೀಡಿದ ಸಚಿವ ಸಂಪುಟದ ಸಹೋದ್ಯೋಗಿಗಳು, ಬಿಜೆಪಿ ಸಂಸದರು ಮತ್ತು ದೇಶದ ಜನತೆಗೆ ಧನ್ಯವಾದ ಅರ್ಪಿಸಿದ ಮೋದಿ, ಈ ಅಭೂತಪೂರ್ವ ಬೆಂಬಲ ನನ್ನ ಜೀವನದ ಅತ್ಯಂತ ಮಹತ್ವದ ಸಂಗತಿಗಳಲ್ಲಿ ಒಂದು ಎಂದು ಭಾವುಕರಾದರು.
ಕಳೆದ 5 ವರ್ಷದಲ್ಲಿ ಭಾರತದ ಚಹರೆ ಬದಲಾಗಿದ್ದು, ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ ಮತ್ತಷ್ಟು ಗಟ್ಟಿಯಾಗಿದೆ ಎಂದ ಪ್ರಧಾನಿ, ದೇಶದ ಆರ್ಥಿಕ ಅಭಿವೃದ್ಧಿ ಕಂಡು ಇಡೀ ವಿಶ್ವವೇ ಭಾರತೀಯರ ಮೇಲೆ ಹೆಮ್ಮೆಪಡುತ್ತಿದೆ ಎಂದು ಸಂತಸ ವ್ಯಕ್ತಡಿಸಿದರು.
"
