ಕಾರವಾರ (ಏ. 18): ಶಿರಸಿಯಲ್ಲಿ ಮಂಗಳವಾರ ಆದಾಯ ತೆರಿಗೆ ಇಲಾಖೆಯವರನ್ನೊಳಗೊಂಡ ಚುನಾವಣಾ ಆಯೋಗದ ಎಸ್‌ಎಸ್‌ಟಿ ತಂಡ ನಡೆಸಿದ ದಾಳಿ ವೇಳೆ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆ ಆಪ್ತರಿಂದ ದಾಖಲೆಯಿಲ್ಲದ ₹ 82.70 ಲಕ್ಷ ವಶಕ್ಕೆ ಪಡೆದಿದೆ.

ಈ ಕುರಿತು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಕೃಷ್ಣ ದೇವಾಡಿಗ ಎಸಳೆ ಇದ್ದ ಕಾರನ್ನು ತಪಾಸಣೆ ಮಾಡಿದಾಗ ₹9.20 ಲಕ್ಷ ಸಿಕ್ಕಿದೆ. ಆಗ ಸಿಕ್ಕ ಕೆಲವು ಮಾಹಿತಿ ಆಧರಿಸಿ ಎಫ್‌ಎಸ್‌ಟಿ ಮತ್ತು ಆದಾಯ ತೆರಿಗೆ ಇಲಾಖೆ ಜಂಟಿಯಾಗಿ ಬಿಜೆಪಿ ಶಿರಸಿ ಗ್ರಾಮೀಣ ಘಟಕದ ಸದಸ್ಯ ಚಿಪಗಿಯ ಆರ್.ವಿ. ಹೆಗಡೆ ಮನೆ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದಾಪುರದ ಕೆ.ಜಿ.ನಾಯ್ಕ ಮನೆ ಮೇಲೂ ದಾಳಿ ನಡೆಸಿದೆ.

ಮತ ಹಾಕಿದ್ರೆ ಒಂದು ದಿನ ಹೆಚ್ಚುವರಿ ವೇತನ

ಈ ವೇಳೆ ಆರ್.ವಿ.ಹೆಗಡೆ ಮನೆಯಲ್ಲಿ ₹ 71 ಲಕ್ಷ ಸಿಕ್ಕಿದೆ. ಲಕೋಟೆಯಲ್ಲಿದ್ದ ತಲಾ ₹5000 ದಂತೆ ₹ 9 ಲಕ್ಷ ನಗದು, ಬೂತ್ ಮಟ್ಟದಲ್ಲಿ ವಿತರಣೆಗೆ ಸಾಗಿಸಲಾಗುತ್ತಿತ್ತು. ಆರ್.ವಿ.ಹೆಗಡೆಯವರ ಮನೆಯಲ್ಲಿ ಸಿಕ್ಕ ₹ ೭೧ ಲಕ್ಷ ಮತದಾರರಿಗೆ ಹಂಚಲು ಸಂಗ್ರಹಿಸಲಾಗಿತ್ತು ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ ತನಿಖೆಯಿಂದಷ್ಟೇ ಸತ್ಯಾಸತ್ಯತೆ ತಿಳಿದು ಬರಬೇಕಾಗಿದೆ. 

ಖೂಬಾ ಮನೆ ಮುಂದೆ ಹಣ ಹಂಚಿಕೆ ವಿಡಿಯೋ ವೈರಲ್

ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರ ಮನೆ ಮುಂದೆ ಹಣ ಹಂಚಲಾಗುತ್ತಿದೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಖೂಬಾ ಅವರ ಮನೆ ಮುಂದೆ ಅವರ ಆಪ್ತ ಸಹಾಯಕ ಎನ್ನಲಾದ ಅಮರ ಎಂಬುವರು ಅಲ್ಲಿದ್ದ ಮಹಿಳೆಯರು, ಪುರುಷರಿಗೆ ಗರಿ ಗರಿ ನೋಟುಗಳನ್ನು ನೀಡುವಂತಿರುವ ವಿಡಿಯೋ ವೈರಲ್ ಆಗಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಹೋಳಿ ಹಬ್ಬದ ಸಂದರ್ಭವೂ ಲಂಬಾಣಿ ಮಹಿಳೆಯರಿಗೆ ಭಗವಂತ ಖೂಬಾ ಅವರು ಹಣ ಹಂಚಿದ್ದಾರೆ ಎಂದು ಈಗಾಗಲೇ ಕಾಂಗ್ರೆಸ್ ದೂರು ನೀಡಿದ್ದು ಚುನಾವಣಾಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಇದೀಗ ಹಣ ಹಂಚುವ ಹೊಸ ವಿಡಿಯೋ ಹೊರಬಿದ್ದಿದ್ದು ಅದರ ತ್ಯಾಸತ್ಯತೆ ಬಹಿರಂಗವಾಗಬೇಕಿದೆ.

‘ಜಯಮಾಲಾ ಮುಖ್ಯಮಂತ್ರಿಗೆ ಸಂಸ್ಕಾರ ಕಲಿ​ಸಲಿ’

 ಬಿಜೆಪಿ ಬೆಂಬಲಿಗರಿಂದ 2 ಲಕ್ಷ ವಶ

ಬಿಜೆಪಿ ಬೆಂಬಲಿಗರಿಂದ 2  ಲಕ್ಷ ರು, ಮತ್ತು 2 ಕಾರುಗಳನ್ನು ಚುನಾವಣಾ ಫ್ಲೈಯಿಂಗ್ ಸ್ಕ್ವಾ ಡ್ ಅಧಿಕಾರಿಗಳು ಬುಧವಾರ ವಶ ಪಡಿಸಿಕೊಂಡಿದ್ದಾರೆ. ಹಾಸನ ನಗರದ ಹೊರ ವಲಯದ ಕೆ.ಕೆ. ರೆಸಿಡೆನ್ಸಿಯಲ್ಲಿ ನಾರಾಯಣಗೌಡ ಮತ್ತು ಹೇಮಂತ್ ಎಂಬುವರು ತಲಾ 500 ರು. ಕಂತೆಯ 2 ಲಕ್ಷಕ್ಕೂ ಅಧಿಕ ಹಣ ಇಟ್ಟುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಕೆ. ಆರ್.ಪುರಂ ಪೊಲೀಸರು ದಾಳಿ ನಡೆಸಿ
ಒಂದು ಸ್ಯಾಂಟ್ರೋ ಕಾರು, ನಗದು ಸಹಿತ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಮತದಾರರಿಗೆ ಹಂಚಲು ಈ ಹಣ ಕೊಂಡೊಯ್ಯಲಾಗುತ್ತಿತ್ತು ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಏಪ್ರಿಲ್ 16 ರ ರಾತ್ರಿ ಸಚಿವ ರೇವಣ್ಣ ಅವರ ಬೆಂಗಾವಲು ವಾಹನ ಚಾಲಕರಾದ ಚನ್ನಯ್ಯ ಮತ್ತು ನಂಜಯ್ಯ ಬಳಿಯಿದ್ದ 1.20 ಲಕ್ಷ ರು. ಗಳನ್ನು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಕೋಲಾರದಲ್ಲಿ ಹಣ ಹಂಚಿಕೆ; ವೀಡಿಯೋ ವೈರಲ್

ಕೋಲಾರ ಲೋಕಸಭಾ ವ್ಯಾಪ್ತಿಯ ಮುಳಬಾಗಿಲು ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಮತದಾರರಿಗೆ ಹಣ ಹಂಚುತ್ತಿದ್ದ ವೀಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚಿಕೆ ಮಾಡಲು ಸುಭಾಷ್‌ಗೌಡ ಎಂಬುವರು ಬುಧವಾರ ರಾತ್ರಿ ಗರಿಗರಿ ನೋಟುಗಳನ್ನು ನೀಡುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಮತದಾರರಿಗೆ ಕಾಂಗ್ರೆಸ್ ಕಡೆಯಿಂದ ತಲಾ 300 ರು.ಗಳಂತೆ ವಿತರಣೆ ಮಾಡಲು ಮುಖಂಡರಿಗೆ ಹಣ ಕೊಡುತ್ತಿದ್ದರು ಎನ್ನಲಾಗಿದೆ.

98 ಟೆಟ್ರಾ ಪ್ಯಾಕಲ್ಲಿ ಮದ್ಯ ಸಾಗಿಸುತ್ತಿದ್ದ  ಗ್ರಾಪಂ ಅಧ್ಯಕ್ಷ

ಸಕಲೇಶಪುರ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕಾರಿನಲ್ಲಿ ಮದ್ಯ ಸಾಗಿಸುತ್ತಿದ್ದ ಗ್ರಾಪಂ ಅಧ್ಯಕ್ಷರ ವಿರುದ್ಧ ಚುನಾವಣಾ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ದೂರು ದಾಖಲು ಮಾಡಿಕೊಂಡಿದ್ದಾರೆ. ತಾಲೂಕಿನ ಹೆಗ್ಗದ್ದೆ ಗ್ರಾಪಂ ಅಧ್ಯಕ್ಷ ಅನಿಲ್ ಕುಮಾರ್ ಎಂಬುವರು ತಾಲೂಕಿನ ಉಷೇರುಮನೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಚುನಾವಣಾ ಅಧಿಕಾರಿಗಳು ಅವರ ಕಾರನ್ನು ತಪಾಸಣೆ ಮಾಡಿದಾಗ ಸುಮಾರು 98 ಟೆಟ್ರಾ ಪ್ಯಾಕ್‌ಗಳಲ್ಲಿ ಮದ್ಯ ಹಾಗೂ ಜೆಡಿಎಸ್ ಕರ ಪತ್ರಗಳು ಕಂಡು ಬಂದಿವೆ. ಮತದಾರರಿಗೆ ಆಮಿಷ ಒಡ್ಡಲು ಮದ್ಯ ದಾಸ್ತಾನು ಮಾಡಿರುವ ಆರೋಪದ ಮೇಲೆ ಪ್ರತ್ಯೇಕ ಮೊಕದ್ದಮೆ ದಾಖಲು ಮಾಡಿಕೊಳ್ಳಲಾಗಿದೆ