ತುಮಕೂರು (ಏ. 18): ಮತದಾನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತುಮಕೂರಿನ ಕೃಪಾ ಫುಡ್ಸ್ ಇಂಡಿಯಾ ತೊಗರಿಬೇಳೆ ಗಿರಣಿ ಕಾರ್ಖಾನೆ ಮತ ಹಾಕಿದವರಿಗೆ ಅರ್ಧ ಕೆ.ಜಿ ತೊಗರಿಬೇಳೆ ನೀಡಲು ಮುಂದಾಗಿದೆ.

ಇದಕ್ಕಾಗಿ ಅರ್ಧ ಕೆ.ಜಿ ತೊಗರಿಬೇಳೆ ಪ್ಯಾಕೆಟ್ ಸಿದ್ಧವಾಗಿದ್ದು, ಮತ ಹಾಕಿದವರು ಶಾಯಿ ಹಾಕಿರುವ ಬೆರಳನ್ನು ತೋರಿಸಿ ಪಡೆಯಬಹುದಾಗಿದೆ. ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಖಾನೆಯ ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿ ಎನ್.ಕೆ.ಬಸವರಾಜು ಘೋಷಿಸಿದರು.

ದಾವಣಗೆರೆ:

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಏ.23 ರಂದು ನಡೆಯುವ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವ ನಗರದ ಸರ್ ಎಂ.ವಿ.ಪದವಿ ಪೂರ್ವ ಕಾಲೇಜಿನ ನೌಕರರಿಗೆ ಒಂದು ದಿನದ ಹೆಚ್ಚುವರಿ ವೇತನ ನೀಡುವುದಾಗಿ ಕಾಲೇಜು ಆಡಳಿತ ಮಂಡಳಿ ಘೋಷಿಸಿದೆ.  ಈ ವಿಷಯ ತಿಳಿಸಿದ ಕಾಲೇಜು ಕಾರ್ಯದರ್ಶಿ ಎಸ್.ಆರ್.ಶ್ರೀಧರ್, ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು. ಉತ್ತಮ ಸಮಾಜಕ್ಕಾಗಿ ಸ್ವಯಂ ಪ್ರೇರಣೆಯಿಂದ ಚುನಾವಣೆ  ದಿನದಂದು ಮತಗಟ್ಟೆಗೆ ಎಲ್ಲಾ ಅರ್ಹ ಮತದಾರರೂ ತೆರಳಿ ಮತ ಚಲಾಯಿಸಬೇಕು. ಈ ಹಿನ್ನೆಲೆಯಲ್ಲಿ ಮತದಾನ ಮಾಡುವ ಸರ್ ಎಂವಿ ಪಿಯು ಕಾಲೇಜಿನ ಸಿಬ್ಬಂದಿಗೆ ಒಂದು ದಿನದ ಹೆಚ್ಚುವರಿ ಸಂಬಳ ನೀಡಲಿದ್ದೇವೆ ಎಂದರು.