ಬೆಂಗಳೂರು :  ತುಮಕೂರು ಲೋಕಸಭಾ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರು ದೆಹಲಿಯಲ್ಲಿ ವರಿಷ್ಠರ ಮುಂದೆ ಜೋರಾಗಿಯೇ ಪರ ವಿರೋಧದ ಚರ್ಚೆ ನಡೆಸಿದ್ದು, ಕಗ್ಗಂಟಾಗಿ ಪರಿಣಮಿಸಿದೆ.

ಈ ವಿಷಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮಾಜಿ ಸಂಸದ ಜಿ.ಎಸ್‌.ಬಸವರಾಜು ಪರ ಬ್ಯಾಟಿಂಗ್‌ ನಡೆಸಿದ್ದರೆ, ಇನ್ನುಳಿದ ನಾಯಕರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಪ್ರಹ್ಲಾದ್‌ ಜೋಶಿ ಹಾಗೂ ಸಿ.ಟಿ.ರವಿ ಅವರು ಮಾಜಿ ಶಾಸಕ ಬಿ.ಸುರೇಶ್‌ಗೌಡ ಪರ ಬಲವಾದ ವಾದ ಮಂಡಿಸಿದ್ದಾರೆ. ಈ ನಾಯಕರಿಗೆ ರಾಜ್ಯದವರೇ ಆಗಿರುವ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌ ಅವರೂ ಸಹಮತ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್‌ ಅವರ ಸಮ್ಮುಖದಲ್ಲಿ ಸಭೆ ನಡೆಸಿದ ರಾಜ್ಯ ನಾಯಕರು ಇತರ ಕ್ಷೇತ್ರಗಳ ಜೊತೆಗೆ ತುಮಕೂರಿನ ವಿಷಯ ಬಂದಾಗ ಬಿರುಸಿನ ಮಾತುಕತೆ ನಡೆದಿದೆ. ಆದರೆ, ಅಂತಿಮವಾಗಿ ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ಕಾದು ನೋಡಿ ನಮ್ಮ ಅಭ್ಯರ್ಥಿಯನ್ನು ಅಂತಿಮಗೊಳಿಸುವುದು ಸೂಕ್ತ ಎಂಬ ನಿಲವಿಗೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಸವರಾಜು ಪರ ವಾದ ಮಂಡಿಸುವುದಕ್ಕೆ ಯಡಿಯೂರಪ್ಪ ಅವರು ನೀಡಿದ್ದಾರೆ ಎನ್ನಲಾದ ಕಾರಣ- ಬಸವರಾಜು ಅವರಿಗೆ ತುಮಕೂರಿನ ಅಭ್ಯರ್ಥಿಯನ್ನಾಗಿಸಿದರೆ ಅದರ ಲಾಭ ಶಿವಮೊಗ್ಗಕ್ಕೂ ಆಗುತ್ತದೆ. ಶಿವಮೊಗ್ಗ ಕ್ಷೇತ್ರದಲ್ಲಿ ಗೆಲುವು ಸುಲಭವಾಗುತ್ತದೆ. ಜೊತೆಗೆ ತುಮಕೂರಿನಲ್ಲೂ ಹಿಡಿತ ಹೊಂದಿರುವುದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್‌ ಮುಖಂಡರ ಬೆಂಬಲದೊಂದಿಗೆ ಜಯ ಗಳಿಸುವ ಅವಕಾಶ ಹೆಚ್ಚಾಗಿರುತ್ತದೆ.

ಸುರೇಶ್‌ಗೌಡ ಪರ ಇತರ ನಾಯಕರು ಮುಂದಿಟ್ಟಿರುವ ಪ್ರತಿಪಾದನೆ

ಸದ್ಯದ ಮಾಹಿತಿ ಅನುಸಾರ ದೇವೇಗೌಡರು ತುಮಕೂರು ಕ್ಷೇತ್ರದಿಂದಲೇ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ತಂತ್ರಗಾರಿಕೆ ಭಾಗವಾಗಿ ಅವರ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸುರೇಶ್‌ಗೌಡರನ್ನೇ ಕಣಕ್ಕಿಳಿಸಬೇಕು. ಎಲ್ಲ ಒಕ್ಕಲಿಗರೂ ದೇವೇಗೌಡರನ್ನೇ ಬೆಂಬಲಿಸುವುದಿಲ್ಲ. ಸುಮಾರು ಶೇ.25ರಿಂದ 30ರಷ್ಟಾದರೂ ಒಕ್ಕಲಿಗ ಮತದಾರರು ಸುರೇಶ್‌ಗೌಡ ಪರ ವಾಲಲಿದ್ದಾರೆ. ಸುರೇಶ್‌ಗೌಡ ಕೂಡ ಕಾಂಗ್ರೆಸ್ಸಿನ ಅನೇಕ ಮುಖಂಡರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮೇಲಾಗಿ ಪಕ್ಷ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಸುರೇಶ್‌ಗೌಡ ಪರವಾಗಿ ಹೆಚ್ಚಿನ ಒಲವು ಕಂಡು ಬಂದಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸುರೇಶ್‌ಗೌಡ ಬಗ್ಗೆ ಉತ್ತಮ ಪ್ರತಿಕ್ರಿಯೆ ಹೊರಬೀಳುತ್ತಿದೆ. ಇದೆಲ್ಲದರ ಮಧ್ಯೆ ಬಸವರಾಜು ಅವರ ಪುತ್ರ ಜ್ಯೋತಿ ಗಣೇಶ್‌ ಈಗಾಗಲೇ ಶಾಸಕರಾಗಿದ್ದಾರೆ. ಹೀಗಾಗಿ, ಬಸವರಾಜು ಅವರನ್ನು ಕೈಬಿಟ್ಟು ಸುರೇಶ್‌ಗೌಡ ಅವರನ್ನೇ ಕಣಕ್ಕಿಳಿಸಬೇಕು.

ಬ್ರೇಕಿಂಗ್: ಕರ್ನಾಟಕದ ಇಬ್ಬರು ಪ್ರಭಾವಿ ಬಿಜೆಪಿ ಸಂಸದರಿಗೆ ಕೈತಪ್ಪಲಿದೆ ಟಿಕೆಟ್?

ಅಮಿತ್‌ ಶಾ ಮತ್ತು ರಾಮ್‌ಲಾಲ್‌ ಅವರು ರಾಜ್ಯ ನಾಯಕರ ವಾದ-ಪ್ರತಿವಾದದ ಅಂಶಗಳನ್ನು ಆಲಿಸಿದ ನಂತರ ದೇವೇಗೌಡರ ಸ್ಪಷ್ಟನಿರ್ಧಾರ ಹೊರಬೀಳುವವರೆಗೆ ಕಾಯೋಣ. ಜೊತೆಗೆ ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗುವುದು ಎಂಬ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ