Asianet Suvarna News Asianet Suvarna News

ಇವಿಎಂ ಸಮಸ್ಯೆಯಾದರೆ ಬ್ಯಾಲೆಟ್‌ ಮತ ಎಣಿಕೆ

ಇವಿಎಂ ಸಮಸ್ಯೆಯಾದರೆ ಬ್ಯಾಲೆಟ್‌ ಮತ ಎಣಿಕೆ | ವಿದ್ಯುನ್ಮಾನ ಮತ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ವಿವಿ ಪ್ಯಾಟ್‌ನ ಮತಪತ್ರ ಎಣಿಕೆ | ಬಳಿಕ ಫಲಿತಾಂಶ ಪ್ರಕಟ |

EC to count VVPAT Ballot in case of EVM Fault
Author
Bengaluru, First Published May 21, 2019, 11:34 AM IST

ಬೆಂಗಳೂರು (ಮೇ. 21):  ಮತ ಎಣಿಕೆ ವೇಳೆ ವಿದ್ಯುನ್ಮಾನ ಮತಯಂತ್ರದಲ್ಲಿ (ಇವಿಎಂ) ತಾಂತ್ರಿಕ ಸಮಸ್ಯೆಯಿಂದ ಮತದಾನದ ವಿವರ ಲಭ್ಯವಾಗದಿದ್ದರೆ ಸಂಬಂಧ ಪಟ್ಟಮತಗಟ್ಟೆಯ ವಿವಿ ಪ್ಯಾಟ್‌ನಲ್ಲಿರುವ ಮತಪತ್ರ (ಬ್ಯಾಲೆಟ್‌) ಎಣಿಕೆ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ

ಒಂದು ವೇಳೆ ಇವಿಎಂನಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ಮತಗಟ್ಟೆಯ ವಿವಿ ಪ್ಯಾಟ್‌ನಲ್ಲಿರುವ ಮತಪತ್ರ ಎಣಿಸಿ ಫಲಿತಾಂಶ ಪ್ರಕಟಣೆಗೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಒಂದು ವಿವಿ ಪ್ಯಾಟ್‌ನ ಮತಪತ್ರ ಎಣಿಕೆಗೆ ಸುಮಾರು 45 ನಿಮಿಷ ಬೇಕಾಗಲಿದೆ. ಒಂದು ವೇಳೆ ಮರು ಎಣಿಕೆಗೆ ಕೋರಿದಲ್ಲಿ ಸರಿಯಾದ ಕಾರಣಗಳನ್ನು ನೀಡಬೇಕು. ಮರು ಎಣಿಕೆ ಬಗ್ಗೆ ಚುನಾವಣಾಧಿಕಾರಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ಹೇಳಿದರು.

ಮೇ 23ರಂದು ನಡೆಯಲಿರುವ ಮತ ಎಣಿಕೆ ಸಿದ್ಧತೆ ಕುರಿತು ನಗರ ಪೊಲೀಸ್‌ ಆಯುಕ್ತರೊಂದಿಗೆ ಸೋಮವಾರ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಮಂಜುನಾಥ್‌ ಪ್ರಸಾದ್‌, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಣಿಕೆ ಕಾರ್ಯಕ್ಕೆ 1,500ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿ ನೇಮಿಸಲಾಗಿದೆ.

ಮೋದಿ ಅವಧಿಯಲ್ಲೇ ಮೊದಲ ಸರ್ಜಿಕಲ್ ಸ್ಟ್ರೈಕ್: ಸೇನಾಧಿಕಾರಿಯ ಅಧಿಕೃತ ಹೇಳಿಕೆ

ಬೆಂಗಳೂರು ಕೇಂದ್ರಲೋಕಸಭಾ ಕ್ಷೇತ್ರದ ಮತ ಎಣಿಕೆ ವಸಂತನಗರದ ಮೌಂಟ್‌ ಕಾರ್ಮೆಲ್‌ ಕಾಲೇಜು, ಬೆಂಗಳೂರು ಉತ್ತರ ಕ್ಷೇತ್ರದ ಮತ ಎಣಿಕೆಯನ್ನು ಮಲ್ಯಆಸ್ಪತ್ರೆ ರಸ್ತೆಯ ಸೆಂಟ್‌ಜೋಸಫ್‌ ಪ್ರೌಢಶಾಲೆ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಎಣಿಕೆ ಕಾರ್ಯ ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ನಡೆಯಲಿದೆ.

ಎರಡು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ 12 ಮಂದಿ ಮತ ಎಣಿಕೆ ವೀಕ್ಷಕರು, ಮೂವರು ಚುನಾವಣಾಧಿಕಾರಿ, 24 ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು 1,500 ಅಧಿಕಾರಿ- ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ.

ಹೆಚ್ಚುವರಿಯಾಗಿ ಶೇ.20ರಷ್ಟುಕಾಯ್ದಿರಿಸಿದ ಸಿಬ್ಬಂದಿ ನೇಮಿಸಲಾಗಿದೆ. ಆ ಎಲ್ಲ ಸಿಬ್ಬಂದಿಗೆ ಮೇ 16ರಂದು ಮೊದಲ ಹಂತದ ಮತ ಎಣಿಕೆ ತರಬೇತಿ ನೀಡಲಾಗಿದ್ದು, ಮೇ 22ರಂದು ಎರಡನೇ ಹಂತದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಸಿಬ್ಬಂದಿಗೆ ಮಾತ್ರ ಮೊಬೈಲ್‌

ಮತ ಎಣಿಕಾ ಕಾರ್ಯದಲ್ಲಿ ಭಾಗಿಯಾಗುವ ಅಧಿಕಾರಿ ಸಿಬ್ಬಂದಿ ಹೊರತು ಪಡಿಸಿ ಬೇರೆ ಯಾರಿಗೂ ಎಣಿಕಾ ಕೇಂದ್ರಕ್ಕೆ ಮೊಬೈಲ್‌ ಫೋನ್‌ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿಲ್ಲ. ಚುನಾವಣಾ ಆಯೋಗದ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಮತ ಎಣಿಕಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದು.

ಅಧಿಕಾರಿ ಸಿಬ್ಬಂದಿ ಸೇರಿದಂತೆ ಮತ ಎಣಿಕೆ ಏಜೆಂಟರು ನೇಮಿಸಿದ ನಿರ್ದಿಷ್ಟಎಣಿಕೆ ಟೇಬಲ್‌ ಹೊರತು ಪಡಿಸಿ ಬೇರೆ ಟೇಬಲ್‌ ಬಳಿ ಹೋಗುವುದಕ್ಕೆ ಅವಕಾಶವಿರುವುದಿಲ್ಲ ಎಂದು ವಿವರಿಸಿದರು.

ಅಂಡಮಾನ್‌ನಲ್ಲಿ ಬಿಜೆಪಿ ದಕ್ಷಿಣ ರಾಜ್ಯಗಳ ಸಭೆ!

ಹೆಚ್ಚುವರಿ ಟೇಬಲ್‌ಗೆ ಅನುಮತಿ

ಪ್ರತಿ ವಿಧಾನಸಭಾ ಕ್ಷೇತ್ರದ ಎಣಿಕೆ ಕೊಠಡಿಯಲ್ಲಿ ಒಟ್ಟು 14 ಟೇಬಲ್‌ ವ್ಯವಸ್ಥೆ ಮಾಡಲಾಗಿದ್ದು, 300ಕ್ಕೂ ಹೆಚ್ಚು ಮತಗಟ್ಟೆಹೊಂದಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಎಣಿಕೆ ಟೇಬಲ್‌ ವ್ಯವಸ್ಥೆಗೆ ಚುನಾವಣಾ ಆಯೋಗ ಅನುಮತಿ ನೀಡಿದೆ.

ಅದರಂತೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕೆ.ಆರ್‌.ಪುರ, ಬ್ಯಾಟರಾಯನಪುರ, ದಾಸರಹಳ್ಳಿ ತಲಾ 26 ಟೇಬಲ್‌, ಯಶವಂತಪುರ 24 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಸರ್ವಜ್ಞನಗರ 21 ಟೇಬಲ್‌, ಮಹದೇವಪುರ 28 ಟೇಬಲ್‌, ಬೆಂಗಳೂರು ದಕ್ಷಿಣ ಕ್ಷೇತ್ರದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ 24 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

11 ಸಾವಿರ ಅಂಚೆ ಮತಪತ್ರ

ಬೆಂಗಳೂರು ನಗರ ಜಿಲ್ಲೆಯ ಮೂರು ಲೋಕಸಭಾ ಕ್ಷೇತ್ರಕ್ಕೆ ಈವರೆಗೆ 11,626 ಅಂಚೆ ಮತ ಪತ್ರ ಸ್ವೀಕೃತವಾಗಿವೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ 4,340, ಕೇಂದ್ರ ಕ್ಷೇತ್ರಕ್ಕೆ 2,878 ಹಾಗೂ ದಕ್ಷಿಣ ಕ್ಷೇತ್ರಕ್ಕೆ 4,408 ಅಂಚೆ ಮತ ಪತ್ರ ಬಂದಿವೆ. ಅದರಲ್ಲಿ 563 ಇಟಿಪಿಬಿಎಸ್‌ ಮತಗಳಿವೆ ಎಂದು ವಿವರಿಸಿದರು.

ಮದ್ಯ ಮಾರಾಟ ನಿಷೇಧ

ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಮಾತನಾಡಿ, ಮತ ಎಣಿಕೆಯ ದಿನದಂದು ಮೂರು ಮತ ಎಣಿಕೆ ಕೇಂದ್ರಗಳ ಭದ್ರತೆಗೆ 2300 ಪೊಲೀಸ್‌ ಅಧಿಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ. ಮೇ 23ರ ಬೆಳಗ್ಗೆ 6ರಿಂದ ಮಧ್ಯ ರಾತ್ರಿ 12ರ ವರೆಗೆ ನಗರದಲ್ಲಿ ನಿಷೇಧಾಜ್ಞೆ, ಮೇ 23ರ ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಮತ ಎಣಿಕೆ ಕೇಂದ್ರದ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಎಣಿಕಾ ಕೇಂದ್ರದ ನೂರು ಮೀಟರ್‌ ಒಳಗೆ ಯಾರಿಗೂ ಪ್ರವೇಶವಿಲ್ಲ. ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಅವಕಾಶವಿರುತ್ತದೆ ಎಂದು ತಿಳಿಸಿದರು.

ಈವರೆಗೆ .1.52 ಕೋಟಿ ನಗದು, .1.10 ಕೋಟಿ ಮೊತ್ತದ ನೀರಿನ ಬಾಟಲಿ, ಟೀ ಶರ್ಟ್‌ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಡಿ 92 ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಮತ ಎಣಿಕೆ ಕಾರ‍್ಯ

ಸ್ಟ್ರಾಂಗ್‌ ರೂಂನಿಂದ ಒಂದು ಹಂತದ ಎಣಿಕೆಗೆ 14 ಕಂಟ್ರೋಲ್‌ ಯುನಿಟ್‌ಗಳನ್ನು ಪರಿಶೀಲಿಸಿ ಎಣಿಕೆ ಕೊಠಡಿಗೆ ತರಲಾಗುವುದು. 14 ಟೇಬಲ್‌ಗಳಲ್ಲಿ ಪ್ರತಿಯೊಬ್ಬ ಅಭ್ಯರ್ಥಿ ಎಷ್ಟುಮತ ಪಡೆದುಕೊಂಡಿದ್ದಾರೆ ಎಂದು ಇವಿಎಂನಿಂದ ಮಾಹಿತಿ ಪಡೆದು ಸಹಾಯಕ ಚುನಾವಣಾಧಿಕಾರಿಗೆ ನೀಡಲಾಗುತ್ತದೆ.

ಎಲ್ಲ 14 ಟೇಬಲ್‌ಗಳಿಂದ ಬಂದ ಮಾಹಿತಿ ಕ್ರೋಢಿಕರಿಸಿ ಯಾರು ಎಷ್ಟುಮತ ಪಡೆದುಕೊಂಡಿದ್ದಾರೆಂದು ಪ್ರಕಟಿಸುತ್ತಾರೆ. ಈ ರೀತಿ ಹಲವಾರು ಹಂತಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಲೋಕಸಭಾ ಕ್ಷೇತ್ರವಾರು ವಿವರ

ಕ್ಷೇತ್ರ    ಅಭ್ಯರ್ಥಿಗಳು    ಒಟ್ಟು ಮತದಾರರು    ಮತಚಲಾಯಿಸಿದ ಮತದಾರರು    (ಶೇ.)

ಬೆಂ. ಉತ್ತರ    31    28,48,402    15,56,997    54.66

ಬೆಂ. ಕೇಂದ್ರ    22    22,04,853    11,96,697    54.28

ಬೆಂ.ದಕ್ಷಿಣ    25    22,15,533    11,84,745    53.47

ಎಣಿಕೆ ಕೇಂದ್ರಗಳಿಗೆ ಬಿಗಿ ಭದ್ರತೆ

ಡಿಸಿಪಿ- 07

ಎಸಿಪಿ- 24

ಇನ್ಸ್‌ ಪೆಕ್ಟರ್‌-76

ಸಬ್‌ ಇನ್ಸ್‌ಪೆಕ್ಟರ್‌-180

ಪೊಲೀಸ್‌ ಸಿಬ್ಬಂದಿ 200

ಸೆಂಟ್ರಲ್‌ ಪ್ಯಾರಾ ಮಿಲಿಟರಿ- 2

ಪಿಎಸ್‌ಆರ್‌ಪಿ-23

 

Follow Us:
Download App:
  • android
  • ios