ಬೆಂಗಳೂರು (ಮೇ. 21): ರಾಜಧಾನಿಯ ಹೃದಯ ಭಾಗದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ)ದ ‘ಕೆಂಪೇಗೌಡ ಬಸ್‌ ನಿಲ್ದಾಣ’ ಜೂನ್‌ 2ರಂದು 50 ವರ್ಷ ಪೂರೈಸಲಿದೆ. ಈ ಸುವರ್ಣ ಮಹೋತ್ಸವದ ಪ್ರಯುಕ್ತ ಬಸ್‌ ನಿಲ್ದಾಣದಲ್ಲಿ ಕೆಎಸ್ಸಾರ್ಟಿಸಿ ಇತಿಹಾಸ ಸಾರುವ ‘ವಸ್ತು ಸಂಗ್ರಹಾಲಯ’ ನಿರ್ಮಿಸಲು ನಿಗಮ ತೀರ್ಮಾನಿಸಿದೆ.

ಕೆಂಪೇಗೌಡ ಬಸ್‌ ನಿಲ್ದಾಣದ ಸುವರ್ಣ ಮಹೋತ್ಸವ ಆಚರಣೆ ಸ್ಮರಣೀಯವಾಗಿಸಲು ರೈಲ್ವೆ ವಸ್ತು ಸಂಗ್ರಹಾಲಯದ ಮಾದರಿಯಲ್ಲಿ ಈ ವಸ್ತು ಸಂಗ್ರಹಾಲಯ ನಿರ್ಮಿಸಲು ತೀರ್ಮಾನಿಸಲಾಗಿದೆ. ಕೆಎಸ್ಸಾರ್ಟಿಸಿ ಕಳೆದ ಐವತ್ತು ವರ್ಷಗಳಲ್ಲಿ ನಡೆದು ಬಂದ ದಾರಿ, ಇತಿಹಾಸ, ದಾಖಲೆಗಳು, ಛಾಯಾಚಿತ್ರಗಳು, ನಿಗಮದಿಂದ ಕಾರ್ಯಾಚರಣೆ ಮಾಡುತ್ತಿರುವ ಬಸ್‌ಗಳ ಮಾದರಿ, ಪ್ರಶಸ್ತಿ-ಪುರಸ್ಕಾರಗಳು ಸೇರಿದಂತೆ ನಿಗಮಕ್ಕೆ ಸಂಬಂಧಿಸಿದಂತೆ ಅಪರೂಪದ ವಸ್ತುಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ವಸ್ತು ಸಂಗ್ರಹಾಲಯ ನಿರ್ಮಾಣದಿಂದ ಬಸ್‌ ನಿಲ್ದಾಣ ಆಕರ್ಷಣಿಯ ಕೇಂದ್ರವಾಗುವುದರ ಜತೆಗೆ ಜನರಿಗೆ ಕಳೆದ ಐವತ್ತು ವರ್ಷಗಳಲ್ಲಿ ಕೆಎಸ್ಸಾರ್ಟಿಸಿ ಸಾಗಿಬಂದ ಹಾದಿ, ಮಾಡಿದ ಸಾಧನೆಗಳ ಬಗ್ಗೆಯೂ ಮಾಹಿತಿ ಲಭ್ಯವಾಗಲಿದೆ ಎಂದರು.

ಗುಜರಿ ವಸ್ತುಗಳಿಂದ ಕಲಾಕೃತಿ:

ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಬಸ್‌ ನಿಲ್ದಾಣಕ್ಕೆ ಒಂದು ಹೊಸ ಕಲಾತ್ಮಕ ರೂಪ ನೀಡಲು ನಿರ್ಧರಿಸಲಾಗಿದೆ. ಅಲ್ಲದೇ ಗುಜರಿ ಬಸ್‌ಗಳ ಬಿಡಿಭಾಗಗಳನ್ನು ಬಳಸಿಕೊಂಡು ಚಿತ್ರಕಲಾ ಸಂಸ್ಥೆಗಳ ಸಹಕಾರದೊಂದಿಗೆ ವಿಶಿಷ್ಟಕಲಾಕೃತಿ (ಇನ್‌ಸ್ಟಾಲೇಷನ್‌ ಆರ್ಟ್‌) ರಚಿಸಿ ಬಸ್‌ ನಿಲ್ದಾಣ ಹಾಗೂ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇರಿಸಲು ಉದ್ದೇಶಿಸಲಾಗಿದೆ.

ವಿಶೇಷ ಅಂಚೆ ಚೀಟಿ-ಲಕೋಟೆ:

ಸುವರ್ಣ ಮಹೋತ್ಸವದ ಆಚರಣೆಯ ಅಂಗವಾಗಿ ಕೆಂಪೇಗೌಡ ಬಸ್‌ ನಿಲ್ದಾಣದ ಚಿತ್ರ ಹಾಗೂ ಸುವರ್ಣ ಮಹೋತ್ಸವದ ಲಾಂಛನ ಒಳಗೊಂಡ ವಿಶೇಷ ಅಂಚೆ ಚೀಟಿ ಹಾಗೂ ಲಕೋಟೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಕೆಎಸ್ಸಾರ್ಟಿಸಿ ಅಧಿಕಾರಿಗಳು ಶೀಘ್ರದಲ್ಲೇ ಅಂಚೆ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅಂತಿಮಗೊಳಿಸಲಿದ್ದಾರೆ.

ಅಪರೂಪದ ನಿಲ್ದಾಣ

ಸುಮಾರು 20.5 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಕೆಂಪೇಗೌಡ ಬಸ್‌ ನಿಲ್ದಾಣವು ನಗರ ಸಾರಿಗೆಯ ಬಿಎಂಟಿಸಿ ಬಸ್‌ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಮೆಟ್ರೋ ರೈಲು ನಿಲ್ದಾಣಕ್ಕೆ ತೀರ ಸಮಿಪದಲ್ಲಿದೆ. ಒಂದೇ ಪ್ರದೇಶದಲ್ಲಿ ನಗರ ಸಾರಿಗೆ ಬಸ್‌ ನಿಲ್ದಾಣ, ಮೆಟ್ರೋ ರೈಲು, ರೈಲು ನಿಲ್ದಾಣವಿರುವುದು ದೇಶದಲ್ಲಿ ಅಪರೂಪ.

ನಿತ್ಯ 2800 ಬಸ್‌ ಸಂಚಾರ

ಕೆಂಪೇಗೌಡ ಬಸ್‌ ನಿಲ್ದಾಣದಿಂದ ಕರ್ನಾಟಕ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ, ಕೇರಳ, ಪಾಂಡಿಚೇರಿ, ತಮಿಳುನಾಡು ರಾಜ್ಯಗಳಿಗೆ ಪ್ರತಿ ದಿನ ವಿವಿಧ ವರ್ಗದ ಐಷಾರಾಮಿ ಬಸ್‌ಗಳು ಸೇರಿದಂತೆ ಸುಮಾರು 2800 ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ನಿತ್ಯ ಈ ಬಸ್‌ ನಿಲ್ದಾಣದಿಂದ ಸುಮಾರು 75 ಸಾವಿರದಿಂದ 1 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ.

ವೀರೇಂದ್ರ ಪಾಟೀಲ್‌ ನಿರ್ಮಿಸಿದ ಬಸ್‌ಸ್ಟ್ಯಾಂಡ್‌

ಮೈಸೂರು ರಾಜ್ಯದಲ್ಲಿ ವೀರೇಂದ್ರ ಪಾಟೀಲ್‌ ಮುಖ್ಯಮಂತ್ರಿಯಾಗಿದ್ದಾಗ ಈ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. 1969ರ ಜೂನ್‌ 2ರಂದು ಅಂದಿನ ರಾಷ್ಟ್ರಪತಿ ಡಾ ವಿ.ವಿ.ಗಿರಿ ಅವರು ಈ ಬಸ್‌ ನಿಲ್ದಾಣ ಉದ್ಘಾಟಿಸಿದ್ದರು. ಐವತ್ತು ವರ್ಷಗಳಲ್ಲಿ ಈ ಬಸ್‌ ನಿಲ್ದಾಣವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿ ಪ್ರಮುಖ ಬಸ್‌ ನಿಲ್ದಾಣವಾಗಿ ರೂಪಿಸಲಾಗಿದೆ.

ನಿಲ್ದಾಣದಲ್ಲಿ ಸುಮಾರು ನೂರು ಬಸ್‌ ನಿಲುಗಡೆ ಅಂಕಣಗಳಿವೆ. ಪ್ರಯಾಣಿಕರಿಗೆ ಸುಸಜ್ಜಿತ ಆಸನ, ಮುಂಗಡ ಟಿಕೆಟ್‌ ಬುಕಿಂಗ್‌ ಕೌಂಟರ್‌, ಮಕ್ಕಳ ಆರೈಕೆ ಕೊಠಡಿ, ಮಹಿಳಾ ವಿಶ್ರಾಂತಿ ಕೊಠಡಿ, ಸಿಬ್ಬಂದಿ ವಿಶ್ರಾಂತಿ ಕೋಣೆ, ಉಪಾಹಾರ ಮಂದಿರ, ಪಾರ್ಕಿಂಗ್‌, ಅಂಗಡಿ ಮಳಿಗೆಗಳು, ಎಟಿಎಂ ಮಳಿಗೆಗಳು ಸೇರಿದಂತೆ ಹಲವು ಸೌಲಭ್ಯಗಳಿವೆ.

- ಮೋಹನ್ ಹಂಡ್ರಂಗಿ