ಬೆಂಗಳೂರು (ಮಾ. 12): ಕಾಂಗ್ರೆಸ್ ಎಷ್ಟೇ ಸೆಕ್ಯುಲರ್ ಎಂದು ಹೇಳಿಕೊಂಡರೂ ಮೋದಿ ಎಫೆಕ್ಟ್‌ನ ನಂತರ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವ ಬಗ್ಗೆ ಒಲವು ಕಡಿಮೆ ಆಗುತ್ತಿದೆ. ಮೊದಲು ಕರ್ನಾಟಕದಲ್ಲಿ ಮೂರು ಮೈನಾರಿಟಿಗಳಿಗೆ ಟಿಕೆಟ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ಎರಡು ಮಾತ್ರ ಎಂದು ನಿರ್ಧರಿಸಲಾಗಿದೆ.

ಮತದಾರರು ಮಾಡಬಾರದ ವಿಷಯಗಳು ತಿಳಿಬೇಕಾ?

ಇದಕ್ಕೆ ಮುಖ್ಯ ಕಾರಣ, ಮುಸ್ಲಿಮರಿಗೆ ಕೊಟ್ಟರೆ  ಬಿಜೆಪಿಗೆ ಗೆಲ್ಲೋದು ಸುಲಭ ಎನ್ನುವ ಭಯ. ಮತ್ತೊಂದು ಸಮಸ್ಯೆ ಎಂದರೆ, ಹಿಂದೂ ಸೇರಿದಂತೆ ಉಳಿದ ಸಮುದಾಯಗಳ ಮತ ಪಡೆಯುವ ಸಾಮರ್ಥ್ಯ ಇರುವ ಜಾಫರ್ ಷರೀಫ್ ತರಹದ ನಾಯಕರು ಈಗ ಉಳಿದಿಲ್ಲ. ಈ ಬಾರಿ ಮುಸ್ಲಿಂ ಅಭ್ಯರ್ಥಿಯನ್ನು ಹಾವೇರಿಯಿಂದ ಧಾರವಾಡಕ್ಕೆ ಶಿಫ್ಟ್ ಮಾಡಬೇಕೋ ಬೇಡವೋ ಎಂದು ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಸಾಮಾಜಿಕ ನ್ಯಾಯಕ್ಕೆ ಕೊಟ್ಟರೂ ಸೀಟು ಕಳೆದುಕೊಳ್ಳುವುದು ನಿಶ್ಚಿತ ಎಂದು ಸಭೆಯಲ್ಲಿದ್ದವರೇ ಮಾತನಾಡಿದ್ದಾರೆ.

ಗಾಂಧಿ ಭಾರತ ಬೇಕಾ, ಗೋಡ್ಸೆ ಭಾರತ ಬೇಕಾ? ರಾಹುಲ್ ಗಾಂಧಿ

ಸಿದ್ದರಾಮಯ್ಯ ಅವರೇ, ಹಾವೇರಿ ಕುರುಬರಿಗೆ ಕೊಡಿ, ಮುಸ್ಲಿಮರಿಗೆ ಬೇಡ ಎಂದು ಹೇಳಿ ಬಂದಿದ್ದಾರಂತೆ. ಬೆಂಗಳೂರು ಉತ್ತರಕ್ಕೆ ಮುಸ್ಲಿಂ ಕೋಟಾದಡಿ ರೋಷನ್ ಬೇಗ್, ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಬಿ.ಕೆ ಹರಿಪ್ರಸಾದ್, ‘ಮುಸ್ಲಿಮರಿಗೆ ಕೊಟ್ಟರೆ ಬಿಜೆಪಿಯವರಿಗೆ ಹಿಂದೂ ಮತ ಒಟ್ಟಾಗಿ ಸಿಗುತ್ತವೆ. ನನಗೆ ಕೊಡಿ, ನಾನು ಗೆಲ್ಲುತ್ತೇನೆ. ಆಗ ನನ್ನ ರಾಜ್ಯಸಭಾ ಸೀಟ್ ಮುಸ್ಲಿಮರಿಗೆ ಕೊಡಿ’ ಎಂದು ರಾಹುಲ್‌ವರೆಗೆ ಹೋಗಿ ಹೇಳಿ ಬಂದಿದ್ದಾರಂತೆ.

ಉಡುಪಿಯ ರಗಳೆ

ಉಡುಪಿಯಲ್ಲಿ ಸ್ಪರ್ಧಿಸಲು ಒಂದು ತಿಂಗಳಿನಿಂದ ಶೋಭಾ ಕರಂದ್ಲಾಜೆ ತಯಾರಾಗಿ ನಿಂತಿದ್ದರೂ ಕೂಡ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಅಲ್ಲಿನ ಸ್ಥಳೀಯ ಶಾಸಕರು ದಿಲ್ಲಿ ನಾಯಕರಿಗೆ ದೂರು ಕೊಡುತ್ತಲೇ ಇದ್ದಾರೆ. ಒಬ್ಬ ಶಾಸಕರಂತೂ ದಿಲ್ಲಿ ನಾಯಕರಿಗೆ, ‘ಅಲ್ಲ ಸಾರ್, ಮೋದಿ ಸಾಹೇಬರು ಪ್ರಧಾನಿ ಆಗಿ ಬ್ಯುಸಿ ಇದ್ದರೂ ತಿಂಗಳಿಗೊಮ್ಮೆ ಕಾಶಿಗೆ ಹೋಗಿ ಬರುತ್ತಾರೆ. ಅಷ್ಟೂ ಕೂಡ ಶೋಭಕ್ಕ ಕ್ಷೇತ್ರಕ್ಕೆ ಬಂದಿಲ್ಲ. ಯಾವ ಮುಖ ಇಟ್ಟುಕೊಂಡು ವೋಟ್ ಕೇಳೋದು ಹೇಳಿ’ ಎಂದು ಪ್ರಶ್ನೆ ಹಾಕಿದ್ದಾರೆ. ಒಂದು ವೇಳೆ ಶೋಭಾಗೆ ಟಿಕೆಟ್ ಕೊಡದೇ ಇದ್ದರೆ ‘ನಾನಿದ್ದೇನೆ’ ಎಂದು ಸದಾನಂದಗೌಡರು ಪ್ರಯತ್ನ ಮಾಡುತ್ತಲೇ ಇದ್ದಾರೆ.

ಆಗ ಅಹ್ಮದ್ ಪಟೇಲ್, ಈಗ ವೇಣು

ಅಹ್ಮದ್ ಪಟೇಲ್ ಅವರು ರಾಜೀವ್, ಸೋನಿಯಾ ಗಾಂಧಿ ಕಾಲದಲ್ಲಿ ಯಾವ ಜಾಗದಲ್ಲಿದ್ದರೋ ಆ ಜಾಗಕ್ಕೆ ರಾಹುಲ್ ಕಾಲದಲ್ಲಿ ಮಲಯಾಳಿ ರಾಜಕಾರಣಿ, ಒಂದು ಕಾಲದ ಕೆ.ಕರುಣಾಕರನ್ ಶಿಷ್ಯ ಕೇರಳದ ಕೆ ಸಿ ವೇಣುಗೋಪಾಲ್ ಬಂದು ಕುಳಿತಿದ್ದಾರೆ.

ಕಾಂಗ್ರೆಸ್‌ನ ಯಾವುದೇ ನಿರ್ಣಯ ಇರಲಿ, ರಾಹುಲ್‌ರ ಕಣ್ಣು, ಕಿವಿ ಎಂದರೆ ಈಗ ವೇಣುಗೋಪಾಲ್. ದೊಡ್ಡ ದೊಡ್ಡ ಕಾಂಗ್ರೆಸ್ ನಾಯಕರು ಈಗ ವೇಣುಗೋಪಾಲ್‌ರ 5 ನಿಮಿಷದ ಭೇಟಿಗೆ ದಿನಗಟ್ಟಲೆ ಕಾಯುತ್ತಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ’ಇಂಡಿಯಾ ಗೇಟ್’ ಕ್ಲಿಕ್ ಮಾಡಿ