ನವದೆಹಲಿ(ಮೇ.11): ಹೇಳಿ ಕೇಳಿ ಇದು ಲೋಕಸಭೆ ಚುನಾವಣೆಯ ಪರ್ವ. ದೇಶದ ರಾಷ್ಟ್ರೀಯ ಹಬ್ಬದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮಿಂದೇಳುವುದು ಸಾಮಾನ್ಯ. ಮತದಾರನ ಮನವೋಲಿಸಲು ತಂತ್ರ, ಪ್ರತಿತಂತ್ರ ಹೆಣೆಯುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬ್ಯುಸಿ.

ಅದರಲ್ಲೂ ಈ ಬಾರಿ ಲೋಕಸಭೆಗೆ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಒಂದೊಂದು ಹಂತದಲ್ಲೂ ಒಂದೊಂದು ರಣಂತ್ರದೊಂದಿಗೆ ರಾಜಕೀಯ ಪಕ್ಷಗಳು ಅಖಾಡಕ್ಕಿಳಿದಿವೆ.

ಚುನಾವಣಾ ಪ್ರಚಾರದ ತಂತ್ರ ಹೆಣೆಯುವಲ್ಲಿ ಇತರ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದಿರುವ ಆಡಳಿತಾರೂಢ ಬಿಜೆಪಿ, ಪ್ರತೀ ಹಂತದಲ್ಲೂ ವಿಪಕ್ಷಗಳಿಗೆ ಸೂಕ್ತ ಏಟು ಕೊಡುವಲ್ಲಿ ಸಫಲವಾಗಿದೆ. ಚುನಾವಣಾ ಚಾಣಕ್ಯರು ಎಂದೇ ಪ್ರಸಿದ್ಧವಾದ ಮೋದಿ-ಶಾ ಜೋಡಿ, ಪ್ರೀ ಹಂತದಲ್ಲೂ ವಿಪಕ್ಷಗಳಿಗೆ ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್‌ಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಅದು ಪುಲ್ವಾಮಾ ಭಯೋತ್ಪಾದಕ ದಾಳಿ ಇರಬಹುದು, ಬಾಲಾಕೋಟ್ ವಾಯುದಾಳಿ ಇರಬಹುದು ಅಥವಾ 2016ರ ಸರ್ಜಿಕಲ್ ದಾಳಿ ಇರಬಹುದು. ಇವೆಲ್ಲಾ ಸಾಧ್ಯವವಾಗಿದ್ದು ಕೇಂದ್ರದಲ್ಲಿ ಸದೃಢ ಬಿಜೆಪಿ ಸರ್ಕಾರ ಇರುವುದರಿಂದಲೇ ಎಂಬ ಸಂದೇಶವನ್ನು ಜನರಿಗೆ ಮುಟ್ಟಿಸುವಲ್ಲಿ ಮೋದಿ-ಶಾ ಜೋಡಿ ಯಶಸ್ವಿಯಾಗಿದೆ.

ಇದಕ್ಕೆ ಉತ್ತರವೆಂಬಂತೆ ನೋಟು ಅಮಾನ್ಯೀಕರಣ, ಜಿಎಸ್'ಟಿ. ಉದ್ಯೋಗ ಸೃಷ್ಟಿ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹಣಿಯಲು ಯತ್ನಿಸಿದ ಕಾಂಗ್ರೆಸ್‌ಗೆ ಜನರಿಂದಲೂ ಸೂಕ್ತ ಪ್ರತಿಕ್ರಿಯೆ ಸಿಗುತ್ತಿಲ್ಲ.

ಸದ್ಯ ಲೋಕಸಭೆ ಚುನಾವಣೆಗೆ ಎರಡು ಹಂತಗಳ ಮತದಾನ ಪ್ರಕ್ರಿಯೆ ಮಾತ್ರ ಬಾಕಿ ಇದೆ. ಅದರಲ್ಲೂ ಪ್ರಮುಖವಾಗಿ ಉತ್ತರದ ರಾಜ್ಯಗಳಾದ ದೆಹಲಿ, ಪಂಜಾಬ್ ಮತ್ತು ಹರಿಯಾಣಗಳಲ್ಲಿ ಮತದಾನ ನಡೆಯಲಿದೆ. ಈ ಎರಡು ಹಂತಗಳಿಗೆ ಬಿಜೆಪಿ ಸಂಪೂರ್ಣವಾಗಿ ತನ್ನ ಪ್ರಚಾರ ನೀತಿಯನ್ನು ಬದಲಿಸಿಕೊಂಡಿದೆ. ದೆಹಲಿಯಲ್ಲಿ 7 ಲೋಕಸಭಾ ಕ್ಷೇತ್ರಗಳು, ಹರಿಯಾಣದಲ್ಲಿ 10 ಕ್ಷೇತ್ರಗಳು ಹಾಗೂ ಪಂಜಾಬ್‌ನಲ್ಲಿ 13 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ.

ಸಿಖ್ ಮತ್ತು ಜಾಟ್ ಮತಗಳೇ ಅಧಿಕವಾಗಿರುವ ಈ ಮೂರು ರಾಜ್ಯಗಳಲ್ಲಿ ತನ್ನ ಪ್ರಚಾರ ನೀತಿಯನ್ನು ಬದಲಿಸಿರುವ ಬಿಜೆಪಿ, ಭಾವನಾತ್ಮಕ ಕಾರ್ಡ್‌ ಬಳಸಲು ಮುಂದಾಗಿದೆ. 1984ರ ಸಿಖ್ ನರಮೇಧವನ್ನು ಉಲ್ಲೇಖಿಸುತ್ತಿರುವ ಬಿಜೆಪಿ, ಸಿಖ್ ನರಮೇಧದಲ್ಲಿ ಕಾಂಗ್ರೆಸ್ ಪಾತ್ರದ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ನಿರತವಾಗಿದೆ.

ಮೋದಿ-ಶಾ ಕೊಟ್ಟಿರುವ ಈ ಹೊಸ ಶಾಕ್‌ಗೆ ಪತರುಗುಟ್ಟಿರುವ ಕಾಂಗ್ರೆಸ್, ಅತ್ತ ಹತ್ಯಾಕಾಂಡದ ಘಟನಾವಳಿಗಳನ್ನು ಬೆಂಬಲಿಸಲೂ ಆಗದೇ, ತನ್ನ ಪಾತ್ರವನ್ನು ನಿರಾಕರಿಸಲೂ ಆಗದೇ ಅಕ್ಷರಶಃ ಬಿಜೆಪಿ ತೋಡಿರುವ ಖೆಡ್ಡಾಗೆ ಬಿದ್ದಿದೆ.

ಹುವಾ ತೋ ಹುವಾ ಎಂದ ಪಿತ್ರೋಡಾ ಕೆಡಿಸಿದರು ಕಾಂಗ್ರೆಸ್ ಹವಾ:

ಇದಕ್ಕೆ ಉದಾಹರಣೆ ಸಿಖ್ ನರಮೇಧದ ಕುರಿತು ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು. ಸಿಖ್ ನರಮೇಧದ ಕುರಿತು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ವಿವಾದಾತ್ಮಕ ಹೇಳಿಕೆ ನೀಡಿದರು. ಹುವಾ ತೋ ಹುವಾ(ಆಗಿದ್ದಾಯ್ತು)ಎಂದು ಉಡಾಫೆ ಉತ್ತರ ಕೊಟ್ಟಿದ್ದ ಸ್ಯಾಮ್ ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಭಾವ ಗಣನೀಯವಾಗಿ ಕುಸಿಯಲು ಕಾರಣರಾಗಿದ್ದಾರೆ.

ಸ್ಯಾಮ್ ಹೇಳಿಕೆಯನ್ನೇ ಬಂಡವಾಳ ಮಾಡಿಕೊಂಡ ಬಿಜೆಪಿ, ಇದೀಗ ಎಲ್ಲಾ ಚುನಾವಣಾ ಪ್ರಚಾರಗಳಲ್ಲೂ ಅವರ ಹೇಳಿಕೆ ಕಾಂಗ್ರೆಸ್‌ನ ಮನಸ್ಥಿತಿ ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಪ್ರಧಾನಿ ಮೋದಿ ತಮ್ಮ ಪ್ರತೀ ಭಾಷಣದಲ್ಲೂ ಸಿಖ್ ನರಮೇಧವನ್ನು ಪ್ರಸ್ತಾಪಿಸುತ್ತಾ, ಅಂದು ಪ್ರಧಾನಿಯಾಗಿದ್ದ ದಿವಂಗತ ರಾಜೀವ್ ಗಾಂಧಿ ಅವರ ಹೇಳಿಕೆಗಳನ್ನು ಪುನರುಚ್ಛಿಸಿ ಕಾಂಗ್ರೆಸ್‌ನ್ನು ಹೈರಾಣಾಗಿಸಿದ್ದಾರೆ.

ಆದರೆ ಈ ವಿಷಯವನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಾಗಿದ್ದ ಕಾಂಗ್ರೆಸ್, ಮೊದಲು ಪಿತ್ರೋಡಾ ಬೆಂಬಲಕ್ಕೆ ಬಂದು ನಂತರ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತು. ಇದೂ ಕೂಡ ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿರಲಿಕ್ಕೆ ಸಾಕು. ಸ್ಯಾಮ್ ಪಿತ್ರೋಡಾ ತಮ್ಮ ಹೇಳಿಕೆಗೂ ಕ್ಷಮೆಯಾಚಿಸಿದ್ದರೂ, ಕಾಂಗ್ರೆಸ್‌ನ ದರ್ಪವನ್ನು ಸಿಖ್ ಸಮುದಾಯ ಅಷ್ಟು ಸುಲಭವಾಗಿ ಕ್ಷಮಿಸುವುದಿಲ್ಲ ಎಂಬುದು ಇತಿಹಾಸದಿಂದ ತಿಳಿಯುತ್ತದೆ.

ಒಟ್ಟಿನಲ್ಲಿ ಕೊನೆಯ ಎರಡು ಹಂತದ ಮತದಾನ ಪ್ರಕ್ರಿಯೆ ಬಾಕಿ ಇರುವಾಗ ಮೋದಿ-ಶಾ ತೋಡಿರುವ ಖೆಡ್ಡಾಗೆ ಸಲೀಸಾಗಿ ಬಂದು ಬಿದ್ದಿರುವ ಕಾಂಗ್ರೆಸ್, ಸರಿಯಾಗಿ ತಂತ್ರ ಹೆಣೆಯುವಲ್ಲಿ ವಿಫಲವಾಗಿ ಒದ್ದಾಡುತ್ತಿದೆ. ಬಿಜೆಪಿಯ ಈ ತಂತ್ರ ಚುನಾವಣೆಯಲ್ಲಿ ಹೇಗೆ ಲಾಭ ತಂದುಕೊಡಬಲ್ಲದು ಎಂಬುದಕ್ಕೆ ಮೇ.23ರ ವರೆಗೆ ಕಾಯಲೇಬೇಕು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ