ಸಿಖ್ ನರಮೇಧ ಕುರಿತು ಲಘುವಾಗಿ ಮಾತನಾಡಿದ್ದ ಸ್ಯಾಮ್ ಪಿತ್ರೋಡಾ ಕ್ಷಮೆಯಾಚನೆ| ಹಿಂದಿ ಭಾಷೆ ಸರಿಯಾಗಿ ಬರದ ಕಾರಣ ಅಚಾತುರ್ಯ ಎಂದ ಸ್ಯಾಮ್| ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದ ಸ್ಯಾಮ್ ಪಿತ್ರೋಡಾ| ಸ್ಯಾಮ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್| ಕಾಂಗ್ರೆಸ್ ನಾಯಕನ ಹೇಳಿಕೆಗೆ ಪ್ರಧಾನಿ ಮೋದಿ ಗರಂ|
ನವದೆಹಲಿ(ಮೇ.10): ಮಹತ್ವದ ಬೆಳವಣಿಗೆಯೊಂದರಲ್ಲಿ 1984ರ ಸಿಖ್ ನರಮೇಧದ ಕುರಿತು ಲಘುವಾಗಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ, ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆ ಕೋರಿದ್ದಾರೆ.
ತಮಗೆ ಹಿಂದಿ ಭಾಷೆ ಮೇಲೆ ಹಿಡಿತವಿಲ್ಲದ ಕಾರಣ ಉದ್ದೇಶಪೂರ್ವಕವಾಗಿ ನೀಡದ ಹೇಳಿಕೆಯಿಂದ ಸಿಖ್ ಸುಮುದಾಯಕ್ಕೆ ಘಾಸಿಯಾಗಿದ್ದರೆ ಬೇಷರತ್ ಕ್ಷಮೆ ಕೋರುತ್ತೇನೆ ಎಂದು ಸ್ಯಾಮ್ ಹೇಳಿದ್ದಾರೆ.
1984ರ ಸಿಖ್ ನರಮೇಧದ ಕುರಿತು ತಾವು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿರುವ ಸ್ಯಾಮ್, ತಾವು ಕೇವಲ ಆ ಕಹಿ ಘಟನೆಯನ್ನು ಮರೆತು ಭವಿಷ್ಯದೆಡೆಗೆ ಮುನ್ನಡೆಯಬೇಕಿದೆ ಎಂಬರ್ಥದಲ್ಲಿ ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮೊದಲು ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿತ್ತು. ಅಲ್ಲದೇ ಸಿಖ್ ನರಮೇಧದ ಕುರಿತು ಸ್ಯಾಮ್ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಎಂದು ಹೇಳಿತ್ತು.
ಸಿಖ್ ನರಮೇಧದ ಕುರಿತು ಮಾತನಾಡುತ್ತಾ ಸ್ಯಾಮ್ ಪಿತ್ರೋಡಾ ಆಗಿದ್ದಾಗಿದೆ ಎಂದು ಲಘುವಾಗಿ ಹೇಳಿಕೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಸ್ಯಾಮ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು.
