ಮೇ 19 ರ ಕೊನೆ ಹಂತದ ಮತದಾನ ಬಾಕಿ ಉಳಿದಿರುವಂತೆಯೇ ದಿಲ್ಲಿಯಲ್ಲಿ ಮೇ 23ರ ನಂತರ ಉದ್ಭವ ಆಗಬಹುದಾದ ಸ್ಥಿತಿ ಬಗ್ಗೆ ಚರ್ಚೆ ಆರಂಭವಾಗಿದೆ. 2 ದಿನಗಳ ಹಿಂದೆ ದಿಲ್ಲಿಗೆ ಬಂದಿದ್ದ ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಚರ್ಚಿಸಿ ನಂತರ ಕೊಲ್ಕತ್ತಾಗೆ ಹಾರಿ ಮಮತಾ ಬ್ಯಾನರ್ಜಿ ಜೊತೆ ಕೂಡ ಮಾತುಕತೆ ನಡೆಸಿ ಬಂದಿದ್ದಾರೆ.

ಮೋದಿ ಬೆಂಬಲಿಗರನ್ನು ಭೇಟಿಯಾದ ಪ್ರಿಯಾಂಕಾ: ಸೆಲ್ಫಿಗಾಗಿ ನಿಂತರು ಅಕ್ಕಪಕ್ಕ!

ಬಿಜೆಪಿ 200 ಬಂದರೆ ಅಥವಾ ಬಿಜೆಪಿ 230 ಬಂದರೆ ಏನು ಎಂಬ ಬಗ್ಗೆ ಹಾಗೂ ವಿಪಕ್ಷಗಳ ರಣತಂತ್ರದ ಬಗ್ಗೆ ಚಂದ್ರಬಾಬು ಚರ್ಚೆ ನಡೆಸುತ್ತಿದ್ದಾರೆ. ಆದರೆ ಆಂಧ್ರದ ವರದಿಗಳ ಪ್ರಕಾರ ಚಂದ್ರಬಾಬುಗೆ ರಾಜ್ಯ ಸರ್ಕಾರ ಉಳಿಸಿಕೊಳ್ಳುವುದು ಕಷ್ಟವಿದ್ದು, ಲೋಕಸಭೆಯಲ್ಲೂ ಟಿಡಿಪಿ ಸಂಖ್ಯೆ ಒಂದಂಕಿಗೆ ಕುಸಿಯಲಿದೆ.

ಕಾಂಗ್ರೆಸ್‌ ಕ್ಯಾಂಪ್‌ನ ಸುದ್ದಿ

ಬಹಿರಂಗವಾಗಿ ಕೇಳಿದರೆ ಕಾಂಗ್ರೆಸ್‌ ಮ್ಯಾನೇಜರ್‌ಗಳು ಲೋಕಸಭೆಯಲ್ಲಿ 44ರಿಂದ 120ಕ್ಕೆ ಹೋಗುತ್ತೇವೆ ಎನ್ನುತ್ತಾರೆ. ಕಾಂಗ್ರೆಸ್‌ ಲೆಕ್ಕಾಚಾರದ ಪ್ರಕಾರ 120 ‘ಕೈ’ಗೆ ಸಿಕ್ಕರೆ ಕಮಲ 200 ದಾಟುವುದು ಕಷ್ಟ. ಆದರೆ ತುಂಬಾ ಖಾಸಗಿಯಾಗಿ ಮಾತನಾಡಿಸಿದಾಗ, ಕಾಂಗ್ರೆಸ್‌ ನಾಯಕರು 75-80 ಗೆದ್ದರೆ ದೊಡ್ಡದು ಎನ್ನುತ್ತಾರೆ.

ಮೇ 23 ಬರುತ್ತಿದ್ದಂತೆ ದೆಹಲಿಗೆ ರೌಂಡ್ಸ್ ಹೊಡೆಯುತ್ತಿದ್ದಾರೆ ಬಿಜೆಪಿ ನಾಯಕರು

ಪಂಜಾಬ್ ಮತ್ತು ಕೇರಳ ಬಿಟ್ಟರೆ ಕಾಂಗ್ರೆಸ್‌ ದೊಡ್ಡದಾಗಿ ಗೆಲ್ಲೋ ರಾಜ್ಯ ಯಾವುದೂ ಇಲ್ಲ. ಬಿಜೆಪಿಗೆ ಏನಾದರೂ 200ರ ಆಸುಪಾಸು ಬಂದರೆ 1996ರ ರೀತಿ ಒಬ್ಬ ಪ್ರಾದೇಶಿಕ ನಾಯಕನಿಗೆ ರಾತ್ರೋರಾತ್ರಿ ಬೆಂಬಲ ಕೊಡುವ ಮನಸ್ಥಿತಿಯಲ್ಲಿ ರಾಹುಲ್ ಗಾಂಧಿ ಇದ್ದಾರಂತೆ. ಆದರೆ ಅಂಥ ಸ್ಥಿತಿ ಉದ್ಭವ ಆಗುತ್ತಾ ಎಂಬ ಬಗ್ಗೆ ಕಾಂಗ್ರೆಸ್‌ ಕ್ಯಾಂಪ್‌ನಲ್ಲಿ ಕೂಡ ಖಚಿತತೆ ಇಲ್ಲ.

ಬಿಜೆಪಿಯವರು ಏನಂತಾರೆ?

ಬಿಜೆಪಿ ನಾಯಕರಿಗೆ ಕ್ಯಾಮೆರಾ ಎದುರು ಕೇಳಿದರೆ 300 ಸೀಟು ಪಕ್ಕಾ ಎನ್ನುತ್ತಾರೆ. ಅದೇ ಕ್ಯಾಮೆರಾ ಬಂದ್‌ ಮಾಡಿ ಕೇಳಿದರೆ 240-250 ಬಿಜೆಪಿಗೆ ಬರುತ್ತದೆ, ಶಿವಸೇನೆ, ಜೆಡಿಯು ಮತ್ತು ಅಕಾಲಿದಳ ಸೇರಿಸಿ ಸುಲಭವಾಗಿ ಸರ್ಕಾರ ರಚಿಸುತ್ತೇವೆ ಎನ್ನುತ್ತಾರೆ. ಆದರೆ ಯಾವುದೇ ಪರಿಸ್ಥಿತಿ ಉದ್ಭವವಾದರೂ ಕೂಡ ಇರಲಿ ಎಂದು ಸ್ವತಃ ಮೋದಿ ಮತ್ತು ಅಮಿತ್‌ ಶಾ ಇಬ್ಬರೂ ಜಗನ್‌ ರೆಡ್ಡಿ, ನವೀನ್‌ ಪಟ್ನಾಯಕ್‌ ಮತ್ತು ಚಂದ್ರಶೇಖರ ರಾವ್‌ ಜೊತೆ ನೇರ ಸಂಪರ್ಕದಲ್ಲಿದ್ದಾರಂತೆ. ವಿಪಕ್ಷಗಳ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಪ್ಲಾನ್‌ ಎ ಮತ್ತು ಪ್ಲಾನ್‌ ಬಿ ಹೆಣೆದುಕೊಂಡು ತಯಾರಾಗಿ ಕುಳಿತಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ