ಗೆದ್ದು ಬರುತ್ತೇವೆ ಎಂಬ ವಿಶ್ವಾಸ ಇರುವ ಕರ್ನಾಟಕದ ಬಿಜೆಪಿ ಸಂಸದರು ಮೇ 23ರ ನಂತರ ಬಿಜೆಪಿ ಸರ್ಕಾರ ಬಂದರೆ ಮಂತ್ರಿ ಆಗಬೇಕು ಎಂದು ಈಗಲೇ ಮನಸ್ಸಿನಲ್ಲಿ ಮಂಡಿಗೆ ತಿನ್ನಲು ಆರಂಭಿಸಿದ್ದು, ದಿಲ್ಲಿ ರೌಂಡ್‌ ಕೂಡ ಹೊಡೆಯತೊಡಗಿದ್ದಾರೆ.

ಕಳೆದ ಹತ್ತು ದಿನಗಳಲ್ಲಿ 3 ಬಾರಿ ದಿಲ್ಲಿಗೆ ಬಂದಿರುವ ಸದಾನಂದಗೌಡರು ತಮ್ಮ ಗಾಡ್‌ಫಾದರ್‌ ಅರುಣ್‌ ಜೇಟ್ಲಿ, ರಾಮಲಾಲ… ಅವರನ್ನು ಭೇಟಿಯಾಗಿ ಹೋಗಿದ್ದಾರೆ. ಕುಂದಗೋಳದ ಗಡಿಬಿಡಿ ಮಧ್ಯೆಯೂ ಪ್ರಹ್ಲಾದ್‌ ಜೋಷಿ ನಿನ್ನೆ ರಾತ್ರಿ ದಿಲ್ಲಿಗೆ ಬಂದಿದ್ದು, ಇವತ್ತು ಮುಖ ತೋರಿಸುವ ಶಾಸ್ತ್ರ ಮಾಡಲಿದ್ದಾರೆ. ಶೋಭಾ ಕರಂದ್ಲಾಜೆ ಕೂಡ ಒಮ್ಮೆ ದಿಲ್ಲಿಗೆ ಬಂದು ರಾಜನಾಥ್‌ ಸಿಂಗ್‌, ರಾಮಲಾಲ…ರನ್ನು ಭೇಟಿಯಾಗಿ ಹೋಗಿದ್ದಾರೆ.

ಸುರೇಶ್‌ ಅಂಗಡಿ ಕೂಡ ಬಿಜೆಪಿ ನಾಯಕರ ಜೊತೆಜೊತೆಗೆ ಸಂಘ ಪ್ರಮುಖರಿಗೆ ನಮಸ್ಕಾರ ಹೊಡೆಯುತ್ತಿದ್ದಾರೆ. ಮಂಗಳೂರಿನ ನಳಿನ್‌ ಕಟೀಲು ಮೆಲ್ಲನೆ ಮಂತ್ರಿಯಾಗುವ ತವಕದಲ್ಲಿದ್ದು, ಬಿ ಎಲ್ ಸಂತೋಷ್‌ ಮೇಲೆ ಪೂರ್ತಿ ಭಾರ ಹಾಕಿದ್ದಾರೆ. ಆದರೆ ಈಗಾಗಲೇ ಮಂತ್ರಿ ಆಗಿರುವ ಅನಂತ ಹೆಗಡೆ ಮಾತ್ರ ದಿಲ್ಲಿಗೆ ಬಂದೂ ಇಲ್ಲ, ಯಾರಿಗೂ ಶರಣು ಅಂದೂ ಇಲ್ಲ. ಅಂದ ಹಾಗೆ ಮಂತ್ರಿ ಆಗಬೇಕು ಎಂದು ಓಡಾಡುವ ಸಂಸದರಿಗೆ ಪತ್ರಿಕೆಯಲ್ಲಿ ಹೆಸರು ಬರುವ ಬಗ್ಗೆ ಭಾರೀ ಹೆದರಿಕೆ ಇದೆ. ಹೆಸರು ಜಾಸ್ತಿ ಓಡಾಡಿದರೆ ಮೋದಿ ಮಂತ್ರಿ ಮಾಡೋದಿಲ್ಲ ಎನ್ನುವುದು ಆತಂಕಕ್ಕೆ ಕಾರಣ.

ಲಿಂಬಾವಳಿ ಫುಲ್ ಚೇಂಜ್‌

ಕಳೆದ 10 ವರ್ಷಗಳಿಂದ ದಿಲ್ಲಿಗೆ ಬಂದರೂ ಅರವಿಂದ ಲಿಂಬಾವಳಿ ಪತ್ರಕರ್ತರ ಜೊತೆ ಮಾತನಾಡಿದ್ದು ಅಪರೂಪ. ಮೊದಲು ಮಂತ್ರಿ ಆಗಿದ್ದಾಗ, ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಏನೇ ಕೇಳಿದರೂ ಉತ್ತರ ಕೊಡದೇ ಸುಮ್ಮನೆ ಇರುತ್ತಿದ್ದ ಲಿಂಬಾವಳಿ, ಈಗ ಪತ್ರಕರ್ತರನ್ನು ಕೂರಿಸಿಕೊಂಡು ಗಂಟೆಗಟ್ಟಲೆ ಮಾತನಾಡುತ್ತಾರೆ.

ಕಳೆದ ವಾರ ದಿಲ್ಲಿ ಪತ್ರಕರ್ತರ ಜೊತೆ 3 ಗಂಟೆ ಮಾತನಾಡಿದ ಲಿಂಬಾವಳಿ, ಕರ್ನಾಟಕ ಬಿಜೆಪಿ ಬಗ್ಗೆ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು. ಒಂದು ಕಾಲದ ಗುರು, ನಂತರದ ವೈರಿ ಅನಂತ ಕುಮಾರ್‌ ತೀರಿಕೊಂಡ ಮೇಲೆ ಲಿಂಬಾವಳಿ ದಿಲ್ಲಿಯಲ್ಲಿ ಕೂಡ ನಿಧಾನವಾಗಿ ವರಿಷ್ಠರಿಗೆ ಹತ್ತಿರವಾಗುತ್ತಿದ್ದಾರೆ. ಯಡಿಯೂರಪ್ಪ ಕಡೆಯಿಂದ ಹೆಸರು ಹೇಳಿಸಿ ಮುಂದಿನ ರಾಜ್ಯ ಬಿಜೆಪಿ ಅಧ್ಯಕ್ಷ ಆಗಬೇಕು ಎಂದು ಇಷ್ಟೆಲ್ಲಾ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಲಿಂಬಾವಳಿಗೂ ಸಂತೋಷ್‌ ಅವರಿಗೂ ಅಷ್ಟಕಷ್ಟೇ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ