ಮಂಡ್ಯ (ಮಾ. 12): ಸುಮಲತಾ ಹಠಾತ್ತನೆ ಸಕ್ರಿಯರಾಗಿರುವುದರ ಹಿಂದೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರಿದ್ದಾರೆ. ಅವರಿಗೆ ತಿಳಿಸಿ ಹೇಳಿ. ಇಲ್ಲವಾದರೆ ನಮಗೂ ಪಾಲಿಟಿಕ್ಸ್ ಮಾಡಲು ಬರುತ್ತದೆ ಎಂದು ರಾಹುಲ್ ಗಾಂಧಿ ಜೊತೆಗೆ ತಮ್ಮ ಮನೆಗೆ ಬಂದಿದ್ದ ವೇಣುಗೋಪಾಲ್‌ಗೆ ದೇವೇಗೌಡರು ಹೇಳಿದ್ದಾರಂತೆ.

'ಅಪ್ಪನಂತಲ್ಲ ರಾಹುಲ್‌, ಅಜ್ಜಿಯಂತಲ್ಲ ಪ್ರಿಯಾಂಕಾ'

ಪರಿಣಾಮವಾಗಿ ‘ಸುಮಲತಾ ಅಂಬರೀಷ್ ಜೊತೆ ನಾವು ನಿಂತಿದ್ದೇವೆ ಎಂದು ಅನ್ನಿಸುವ ರೀತಿಯಲ್ಲಿ ಯಾರೂ ಹೇಳಿಕೆ ನೀಡಬೇಡಿ. ಹೀಗಂತ ಸ್ವತಃ ಆರ್‌ಜಿ ಹೇಳಿದ್ದಾರೆ’ ಎಂದು ರಾಜ್ಯ ನಾಯಕರಿಗೆ ವೇಣುಗೋಪಾಲ್ ಸೂಚನೆ ನೀಡಿದ ತಕ್ಷಣ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಸುಮಲತಾಗೆ ಬೆಂಬಲ ಇಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ.

ಆದರೆ ಖಾಸಗಿಯಾಗಿ ಮಾತನಾಡಿದರೆ ಕಾಂಗ್ರೆಸ್ ನಾಯಕರು ಸುಮಲತಾ ಬಗೆಗಿನ ರೇವಣ್ಣ, ತಮ್ಮಣ್ಣ ಎಪಿಸೋಡ್‌ನಿಂದ ದೇವೇಗೌಡರ ಕುಟುಂಬ ಸ್ವಲ್ಪ ಬ್ಯಾಕ್‌ಫುಟ್‌ನಲ್ಲಿದೆ, ಇದು ಒಳ್ಳೆಯ ಬೆಳವಣಿಗೆ ಎನ್ನುತ್ತಾರೆ. ಆದರೆ ಕ್ಯಾಮೆರಾ ಚಾಲು ಆಗುತ್ತಿದ್ದಂತೆ ಮಂಡ್ಯ ಜೆಡಿಎಸ್ ಕ್ಷೇತ್ರ, ನಮಗೆ ಸಂಬಂಧವಿಲ್ಲ ಎನ್ನುತ್ತಾರೆ.

ಮಂಡ್ಯ: ಒಟ್ಟಿಗೆ ಊಟ ಮಾಡಿದ 3 ಪಾರ್ಟಿ ನಾಯಕರು ಕೊಟ್ಟ ಭಿನ್ನ ಹೇಳಿಕೆ!

ಸಿದ್ದು ಪ್ರತೀಕಾರದ ಲೆಕ್ಕ

ಚಾಮುಂಡೇಶ್ವರಿಯಲ್ಲಿ ದೇವೇಗೌಡರ ಕಾರಣದಿಂದ ಕಂಡ ಸೋಲು ಸಿದ್ದರಾಮಯ್ಯ ಅವರಿಗೆ ಎಂದೂ ಆರದ ಗಾಯ ಇದ್ದಹಾಗೆ. ಅದರ ಪ್ರತೀಕಾರವನ್ನು ಮಂಡ್ಯದಲ್ಲಿ ನಿಖಿಲ್ ಸೋಲಿಸಲು ಕೈಜೋಡಿಸಿ ತೆಗೆದುಕೊಳ್ಳುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಾರೆ ಎಂದು ದಿಲ್ಲಿಗೆ ಬಂದಿರುವ ಬಹುತೇಕ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

ಕುಮಾರಸ್ವಾಮಿ ಜೊತೆ ದಿಲ್ಲಿಗೆ ಬಂದಿದ್ದ ಜೆಡಿಎಸ್ ಒಕ್ಕಲಿಗ ನಾಯಕರಿಗೂ ಇರುವ ಆತಂಕ ಸಿದ್ದರಾಮಯ್ಯ ಒಳಗಿನಿಂದ ಏನು ಮಾಡುತ್ತಾರೆ ಎನ್ನುವುದು. ಒಟ್ಟಾರೆ ಒಂದು ವರ್ಷದ ಹಿಂದೆ ತನ್ನ ನೆಲದಲ್ಲೇ ಉಂಡ ಸೋಲಿನ ಲೆಕ್ಕ ಚುಕ್ತಾ ಮಾಡುವ ಅವಕಾಶ ಸಿದ್ದುಗೆ ದೇವೇಗೌಡರ ನೆಲದಲ್ಲೇ ಸಿಗುತ್ತಿದೆ. 

- ಪ್ರಶಾಂತ್ ನಾತು,  ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ’ಇಂಡಿಯಾ ಗೇಟ್’  ಕ್ಲಿಕ್ ಮಾಡಿ